ಡಾ. ರತಿದೇವಿ ಆರ್. ಮಡಿಲಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ- 2022

ಖ್ಯಾತ ಪ್ರಸೂತಿ ಹಾಗು ಸ್ತ್ರೀರೋಗ ನಿವಾರಣಾ ತಜ್ಞೆ ಹಾಗು ವೈದ್ಯಕೀಯ ಸಾಹಿತಿ :

ಸ್ತ್ರೀಯರ ಬಾಳಿನ ಆಶಾಕಿರಣವಾಗಿ ಸ್ತ್ರೀ ಸಂಬಂಧಿ ರೋಗ ನಿವಾರಣೆಗೆ ಶ್ರಮಿಸುತ್ತ ಸ್ತ್ರೀಯರಲ್ಲಿ ಜಾಗೃತಿ ಮೂಡಲು ಕಾರಣರಾದ ಕರಾವಳಿ ಕರ್ನಾಟಕದ ಪ್ರಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ನಿವಾರಣಾ ತಜ್ಞೆ ಡಾ. ರತಿದೇವಿಯವರು ಈ ವರುಷದ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಸಾಹಿತ್ಯ ಹಾಗೂ ಸಮಾಜ ಸೇವೆಯನ್ನು ಪ್ರವೃತ್ತಿಯನ್ನಾಗಿಸಿ ಕೊಂಡಿರುವ ಡಾ. ರತಿದೇವಿಯವರು ಜಗವೇ ದೇಗುಲ, ಜೀವ ದೇವನು, ಜೀವನವೇ ಆರಾಧನೆ ಎಂಬ ಆಶಯದಿಂದ ತಮ್ಮ ಸೇವಾ ಕೈಂಕರ್ಯದಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ .ಮೂಲತಃ ಉಡುಪಿ ಎಲ್ಲೂರು ಗ್ರಾಮದವರಾದ ಇವರು ಅದಮಾರು ಪೂರ್ಣಪ್ರಜ್ಞ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣದ ಬಳಿಕ ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಹಾಗೂ ಎಂಡಿಡಿ ಮತ್ತು ಡಿಜಿಓ ಪದವಿ ಪಡೆದು ವೈದ್ಯಕೀಯ ರಂಗಕ್ಕೆ ಪ್ರವೇಶಿಸಿದ್ದು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸಿದ್ದೇ ಅಲ್ಲದೆ ಮಂಗಳೂರಿನ ಸರಕಾರಿ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಗೌರವ ವೈದ್ಯಾಧಿಕಾರಿಯಾಗಿ ಇಪ್ಪತ್ತೆಂಟು ವರ್ಷಗಳ ಸಮಯ ಕರ್ತವ್ಯ ನಿರ್ವಹಿಸಿದ್ದಾರೆ.

ಔಷಧಿಗಳಿಂದ ಶಸ್ತ್ರ ಚಿಕಿತ್ಸೆಗಳಿಂದ ರೋಗಿಯ ಕಾಯಿಲೆ ಗುಣಪಡಿಸುವುದು ಮಾತ್ರವಲ್ಲದೆ ಡಾ. ರತಿದೇವಿಯವರು ಸ್ತ್ರೀ ಸಂಬಂಧಿ ಕಾಯಿಲೆಗಳ ಬಗ್ಗೆ ಅಧ್ಯಯನ ನಡೆಸಿ ತಮ್ಮ ಅಪೂರ್ವ ಜ್ಞಾನ ಖಜಾನೆಯಿಂದ ವಿವರಣಾತ್ಮಕ ವಿಚಾರಾತ್ಮಕವಾದ ಇಪ್ಪತ್ತೈದಕ್ಕೂ ಅಧಿಕ ಕೃತಿಗಳನ್ನು ಹೊರತಂದಿದ್ದು ಇವೆಲ್ಲವೂ ಸ್ತ್ರೀಯರಿಗೆ ಬಲು ಉಪಯುಕ್ತ ಮತ್ತು ಮಾರ್ಗದರ್ಶನವಾಗಿದೆ.

ಇವರು ಪ್ರಕಟಿಸಿದ ಎಚ್ಚೆತ್ತ ಮಹಿಳೆ ಕೃತಿ, ಹೊಂಗಿರಣ ಧ್ವನಿಸುರುಳಿ ಮಾಹಿತಿ ಜಾಗೃತಿ ಕೃತಿ, ಗರ್ಭಕೋಶ ಸಂಬಂಧಿತ ಸಾಮಾನ್ಯ ಮತ್ತು ಕಾನ್ಸರ್ ಗಡ್ಡೆಗಳ ಬಗ್ಗೆ ಬರೆದ ಪುಸ್ತಕ, ಮಾರಣಾಂತಿಕ ಗರ್ಭಾವಸ್ಥೆ ಮತ್ತು ಪರಿಹಾರದ ದಾರಿಗಳು ಕೃತಿ, ಜಾಗತೀಕರಣ ಮತ್ತು ಸ್ತ್ರೀ ಸ್ವಾಸ್ಥ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ, ಅಂಡಾಶಯದ ಅಚ್ಚರಿ ಮತ್ತು ಅಪಾಯಗಳು ಬಹುಭ್ರೂಣಗಳ ಬಸಿರು ಬಾಣಂತನ ಬಂಜೆತನದ ಕಾರಣಗಳು ಮತ್ತು ಚಿಕಿತ್ಸೆ ಗರ್ಬಸ್ರಾವದ ಕಾರಣ ಮತ್ತು ಚಿಕಿತ್ಸೆ ಹೀಗೆ ಹಲವಾರು ಸ್ತ್ರೀ ಸಂಬಂಧಿತ ಕಾಯಿಲೆಗಳ ವಿಸ್ತೃತ ವಿವರಣೆ ,ಅದಕ್ಕೆ ಮಾಡಬೇಕಾದ ಪರಿಹಾರ ಚಿಕಿತ್ಸೆಗಳ ಬಗ್ಗೆ ದಾಖಲೆಗೆ ಅನುಕೂಲವಾಗುವಂತೆ ಹಲವಾರು ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸಿದ ಸಂತಸ ಇವರದು.

ಅಲ್ಲದೆ ವಿದ್ಯಾರ್ಥಿಗಳಿಗೆ ಏಡ್ಸ್ ಕುರಿತು ಜಾಗೃತಿ ಗಾಗಿ Aids Adolescene ಕೃತಿ, ಸ್ವಾಸ್ಥ್ಯ ಸಂಬಂಧಿ ಕೃತಿಗಳಾದ Ovarian Wonders and Dangers , Ectopic Pregnancy, Pre Delivery Massive Bleeding Causes and Treatment ಹೀಗೆ ಆಂಗ್ಲ ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿದ ಖ್ಯಾತಿಗೆ ಕಳಶವಿಟ್ಟಂತೆ ಮಹಿಳೆಯರ ಆರೋಗ್ಯದ ಕಾಳಜಿ ವಹಿಸಿರುವ ಇವರು ತಮ್ಮ ಎಲ್ಲಾ ಅಮೂಲ್ಯ ಕೃತಿಗಳನ್ನು ಸಮಾಜಕ್ಕೆ ಉಚಿತ ಕೊಡುಗೆ ನೀಡಿದ ಸಾರ್ಥಕತೆ ಇವರದು.

ಸನ್ನಡತೆಯಿಂದ, ಸಮಾಜ ಸೇವೆಯಿಂದ ಬದುಕಲ್ಲಿ ಕೀರ್ತಿ ಗಳಿಸಿ ಬೇರೆಯವರಿಗೆ ಸ್ಪೂರ್ತಿ ಯಾಗಿರುವ ಇವರ ಬದುಕಿನ ಸುಂದರ ಉದ್ಯಾನವನದಲ್ಲಿ ಅರಳಿದ ಸಾಧನೆಗಳ ಹೂಗಳು ಅನೇಕ. ಹೆಣ್ಣು ಮಕ್ಕಳ ಆರೋಗ್ಯ ಜಾಗೃತಿ ವಿಷಯವಾಗಿ ವಿವಿಧ ಕಾಲೇಜುಗಳಲ್ಲಿ ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ವೈದ್ಯಕೀಯ ವಿಷಯವಾಗಿ ವಿವಿಧ ಪ್ರಬಂಧಗಳ ಮಂಡನೆಯೊಂದಿಗೆ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಮಹಿಳಾ ಆರೋಗ್ಯದ ಬಗ್ಗೆ ಚರ್ಚೆ, ನೇರ ಸಂವಾದದಲ್ಲಿ ಭಾಗವಹಿಸಿ ಸೈ ಅನಿಸಿಕೊಂಡಿರುವ ಇವರು ವಿಧವೆಯರ ಪುನರ್ ಜೀವನ ಉತ್ಸಾಹಕ್ಕೆ ನಾಂದಿ ಹಾಡಿ, ನೊಂದ ಸ್ತ್ರೀಯರ ಕಲ್ಯಾಣಕ್ಕಾಗಿ ಆಶಾಕಿರಣ ಯೋಜನೆಯ ರೂವಾರಿಯಾಗಿ ವಿಧವೆಯರು ಹಾಗೂ ವಿಚ್ಛೇದಿತರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ತ್ರೀ ಪರ ನ್ಯಾಯಕ್ಕಾಗಿ ಧ್ವನಿಯೆತ್ತಿದವರು .

ರಾಜ್ಯದಲ್ಲಿ ಪ್ರಥಮ ಸಾಧನೆಯಾಗಿ ಓರ್ವ ಗರ್ಭಿಣಿ ಸ್ತ್ರೀಗೆ ಏಕಕಾಲದಲ್ಲಿ ನಾಲ್ಕು ಮಕ್ಕಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿ ಪ್ರಸವ ಮಾಡಿಸಿದ್ದೇ ಅಲ್ಲದೆ ಪೂಜಾ ಮಂದಿರಗಳಲ್ಲಿ ಅಶಕ್ತರು, ಅಂಗವಿಕಲರು ಹಾಗು ವೃದ್ಧರ ಅನುಕೂಲಕ್ಕಾಗಿ ಗಾಲಿಕುರ್ಚಿಗಾಗಿ ಶ್ರಮಿಸಿದವರು.

ಇವರ ಬಹುಮುಖ ಪ್ರತಿಭೆಗೆ, ಸಮಾಜ ಸೇವಾ ತುಡಿತಕ್ಕೆ ಅರಸಿ ಬಂದಿರುವ ಪ್ರಶಸ್ತಿ, ಪುರಸ್ಕಾರ, ಬಿರುದುಗಳ ಸರಮಾಲೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಮಹಿಳಾ ದಿನಾಚರಣೆ ಸಾಧಕ ಪ್ರಶಸ್ತಿ, ಜ್ಞಾನ ಸರಸ್ವತಿ ಪ್ರಶಸ್ತಿ, ವೈದ್ಯ ವಿಭೂಷಣ ಪ್ರಶಸ್ತಿ, ಹೀಗೆ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಸೇರಿವೆ.

ಖ್ಯಾತ ಪ್ರಸೂತಿ ಹಾಗು ಸ್ತ್ರೀ ರೋಗ ನಿವಾರಣಾ ತಜ್ಞೆಯಾಗಿ, ಉಪಯುಕ್ತ ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಉಚಿತವಾಗಿ ನೀಡಿ ಸಮಾಜದ ಸ್ವಾಸ್ಥ್ಯ ಸಂಕಲ್ಪದೊಂದಿಗೆ ಜನಹಿತ ಸೇವೆ ಮಾಡುತ್ತಿರುವ ಇವರ ಸಾಧನೆಗೆ ಅಭಿನಂದನೆ, ಅಭಿವಾದನೆಗಳೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಇದೇ ಬರುವ ನವೆಂಬರ್ ಒಂದರಂದು ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ -2022 ನೀಡುತ್ತಲಿದ್ದು ಎಲ್ಲ ಆತ್ಮೀಯರಿಗೆ ಆದರದ ಆಹ್ವಾನ.

~ಪೂರ್ಣಿಮಾ ಜನಾರ್ದನ್ ಕೊಡವೂರು

 
 
 
 
 
 
 
 
 
 
 

Leave a Reply