ಲಾರಿ ಚಾಲಕನ ಎಡವಟ್ಟಿಗೆ ಪುಟ್ಟ ಮಗು ಬಲಿ!

ಆ ಮಗು ಹುಟ್ಟಿದ ಮೇಲೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಓಡಾಟ, ತುಂಟಾಟ, ನಗು, ಅಳು ಎಲ್ಲವೂ ಆ ಮನೆಯನ್ನು ಸಂತೋಷದಲ್ಲಿಟ್ಟಿತ್ತು. ಆಕೆ ಕಂಡರೆ ಎಲ್ಲರಿಗೂ ಪ್ರೀತಿಯೋ ಪ್ರೀತಿ. ಮುದ್ದು ಮುದ್ದಾದ ಕಂದನ ನೋಡಿದರೆ ಸಾಕು ತಂದೆ ತನ್ನೆಲ್ಲಾ ನೋವು ಮರೆತುಬಿಡುತ್ತಿದ್ದರು. ತಾಯಿಯಂತೂ ಮಗಳನ್ನು ಅಷ್ಟೇ ಹಚ್ಚಿಕೊಂಡಿದ್ದರು. ಆಕೆ ಮನೆಯಲ್ಲಿದ್ದರೆ ಸಾಕು ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದ್ರೆ, ಇಂದು ನಡೆದ ಘಟನೆ ಆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಕಣ್ಮುಂದೆ ಆಟವಾಡಿಕೊಂಡು ಇದ್ದ ಮಗಳು, ಬೆಳಿಗ್ಗೆ ಮನೆಯಿಂದ ಹೋದವಳು ಮಧ್ಯಾಹ್ನದ ಹೊತ್ತಿಗೆ ಇಲ್ಲವೆಂದರೆ ಹೇಗಾಗಬೇಡ. ಇನ್ನು ಆ ಬಾಲಕಿಗೆ ಕೇವಲ 2 ವರ್ಷ. ಮನೆಗೆ ಸಂತಸ ತಂದಿದ್ದ ಬಾಲಕಿಯ ಸಾವು ಮನೆಯ ಸದಸ್ಯರೆಲ್ಲರೂ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ತಂದೆಗಂತೂ ಮಗಳನ್ನು ಕಂಡರೆ ತುಂಬಾ ಪ್ರೀತಿ. ನಿತ್ಯವೂ ಆಕೆ ಫೋಟೋಗಳನ್ನು ತನ್ನ ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿರುತ್ತಿದ್ದರು.

ಮನೆಗೆ ಹೋದಾಕ್ಷಣ ಆಕೆ ಮುಖ ನೋಡದೇ ಇದ್ದರೆ ಕಾಲವೇ ಹೋಗುತ್ತಿರಲಿಲ್ಲ. ಅಷ್ಟೊಂದು ಬಾಂಧವ್ಯ, ಪ್ರೀತಿ, ಅನೋನ್ಯತೆ ತಂದೆ ಹಾಗೂ ತಾಯಿಗಿತ್ತು. ಅಜ್ಜಿ ಕಂಡರೆ ಮೊಮ್ಮಗಳಿಗೂ ಪ್ರೀತಿ, ಮೊಮ್ಮಗಳೆಂದರೆ ಅಜ್ಜಿಗೂ ಪ್ರೀತಿ. ಆದ್ರೆ, ಇಂದು ನಡೆದ ದುರಂತದಿಂದ ಆಕಾಶವೇ ಬಿದ್ದಂತಾಗಿದೆ.

ಅಂದ ಹಾಗೆ, ಇಂಥದ್ದೊಂದು ದುರಂತ ನಡೆದಿರುವುದು ದಾವಣಗೆರೆ ತಾಲೂಕಿನ ಹಳೇಕುಂದುವಾಡ ಗ್ರಾಮದಲ್ಲಿ. ಕುಂದುವಾಡ ಗ್ರಾಮದ ಗಣೇಶ್ ಎಂಬುವವರ ಪುತ್ರಿ ಕೇವಲ 2 ವರ್ಷದ ಚರಸ್ವಿ ಮೃತಪಟ್ಟ ಬಾಲಕಿ. ಎಂ. ಸ್ಯಾಂಡ್ ಲಾರಿ ಚಾಲಕ ಮಾಡಿದ ಯಡವಟ್ಟು ಹಾಗೂ ಅಜಾಗರೂಕತೆಯಿಂದ ಮುದ್ದು ಮುದ್ದಾದ 2 ವರ್ಷದ ಪುಟ್ಟ ಬಾಲೆಯ ಉಸಿರು ನಿಂತಿದೆ.

ಇನ್ನು ಚರಸ್ವಿ ಹಳೇಕುಂದುವಾಡದ ಅಂಗನವಾಡಿಗೆ ಹೋಗುತ್ತಿದ್ದಳು. ಎಂದಿನಂತೆ ಇಂದೂ ಸಹ ಅಂಗನವಾಡಿಗೆ ತೆರಳಿದ್ದಳು. ಅಜ್ಜಿಯು ಅಂಗನವಾಡಿ ಮುಗಿಸಿಕೊಂಡು ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಬರಲು ಹೋಗಿದ್ದರು.

ಅಲ್ಲಿಂದ ಕರೆದುಕೊಂಡು ಬರುವಾಗ ಎಂ. ಸ್ಯಾಂಡ್ ಲಾರಿ ಯಮಸ್ವರೂಪಿಯಂತೆ ಬಂದಿದೆ. ಆಗ ಚರಸ್ವಿ ತಲೆ ಮೇಲೆ ಲಾರಿಯ ಚಕ್ರ ಹರಿದಿದೆ. ಪರಿಣಾಮ ಮುದ್ದು ಮುದ್ದಾಗ ಕಂದ ಚರಸ್ವಿ ಮೆದುಳು ಛಿದ್ರಛಿದ್ರಗೊಂಡಿದೆ. KA 17, D 5017 ನಂಬರ್ ನ ಟಿಪ್ಪರ್ ಲಾರಿ ಇದಾಗಿದ್ದು, ಚಾಲಕನ ಅಜಾಗರೂಕತೆಯಿಂದ ದುರಂತ ನಡೆದಿದೆ.

ಚರಸ್ವಿ ಮೃತದೇಹ ನೋಡುತ್ತಿದ್ದಂತೆ ಗ್ರಾಮಸ್ಥರ ಸಿಟ್ಟು ನೆತ್ತಿಗೇರಿತ್ತು. ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಂ ಸ್ಯಾಂಡ್ ಲಾರಿ ಮಾಲೀಕ, ಚಾಲಕನನ್ನು ಬಂಧಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಚಾಲಕನ ಅಜಾಗರೂಕತೆಯಿಂದ ಈ ದುರಂತ ನಡೆದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಬಂಧಿಸಬೇಕು ಎಂದು ಪಟ್ಟುಹಿಡಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

2 ವರ್ಷದ ಬಾಲಕಿ ಚರಸ್ವಿ ಮೃತಪಟ್ಟ ಹಿನ್ನೆಲೆಯಲ್ಲಿ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಅಜ್ಜಿಯ ಗೋಳಾಟವಂತೂ ನೋಡತೀರದ್ದು. ನನ್ನ ಎರಡು ವರ್ಷದ ಮೊಮ್ಮಗಳು ನೋಡು ನೋಡುತ್ತಿದ್ದಂತೆ ಲಾರಿ ಚಕ್ರ ಹರಿದು ಮೃತಪಟ್ಟ ಘಟನೆ ಕಣ್ಮುಂದೆ ಇದ್ದು, ಮೊಮ್ಮಗಳನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತಂದೆ ತಾಯಿಯ ಆಕ್ರಂದನವೂ ಮುಗಿಲು ಮುಟ್ಟಿದೆ.

 
 
 
 
 
 
 
 
 
 
 

Leave a Reply