“ಕು.ಗೋ 84 ” ಅಭಿನಂದನಾ ಸಮಾರಂಭ

ಈ ಕು.ಗೋ ಅಂದ್ರೆ ಯಾರು ಸ್ವಾಮಿ..
ಓಹೋ… ಆ… ಆಸಾಮಿನಾ … ಅವ್ರು ಅಸಾಮಾನ್ಯ ಕನ್ನಡಿಗ ಸ್ವಾಮಿ… ಓದುಗರು ಬೇಕಾಗಿದ್ದಾರೆ ಅಂತ ಉದಯವಾಣಿಯಲ್ಲಿ ಒಂದು ಜಾಹಿರಾತು ಹಾಕಿ ಓದುಗರ ಕ್ರಾಂತಿ ಹುಟ್ಟು ಹಾಕಿದ್ರಲ್ವಾ ಆವತ್ತು…ಅವ್ರೇ ಇವ್ರು . ಓದುಗರು ಅಂದ್ರೆ ಪ್ರಾಣನೇ ಬಿಡ್ತಾರೆ… ಈ ಜನ.

ಅವರ ಬಗ್ಗೆ ಹೀಗೆ ಪರಿಚಯ ಮಾಡಿದ್ರೆ ಹೇಗೆ?…
ಕರುನಾಡ ಕಣ್ಮಣಿಗೆ ಕನ್ನಡಕವೆ ಶೃಂಗಾರ.. ಕನ್ನಡವೆ ಬಂಗಾರ.. ಹೆಗಲಿಗೇರಿಸಿದ ಪುಸ್ತಕದ ಚೀಲವೆ ಮಣ ಭಾರ . , ಕೈಗೊಂದು ಕೊಡೆ ಅಲಂಕಾರ, ಹಾಸ್ಯ ಪ್ರವೃತ್ತಿಯ ಸರದಾರ, ಪುಸ್ತಕ ಸಂಸ್ಕೃತಿಯ ಹರಿಕಾರ…
ವಿಕಟ ವಿನೋದದ ಕಥೆಗಾರ.. ಮಾನವೀಯ ಮೌಲ್ಯಗಳ ಮಂದಾರ, ಓದುಗರ ಕಂಡರೆ ಮನಸ್ಸು ಅತಿ ಉದಾರ … ಇವ್ರೇ ಕಣ್ರೀ ನಮ್ಮೂರಿನ ಸಾಹಿತ್ಯ ಕ್ಷೇತ್ರದ ಸಿಂಧೂರ …
ಇದೀಗ ಇವರಿಗೆ ಜೀವನದ ಎಂಬತ್ತನಾಲ್ಕರ ತೊಟ್ಟಿಲು… ಇನ್ನು ಶತಕಕ್ಕೆ ಹದಿನಾರೇ ಮೆಟ್ಟಿಲು…
ಕು.ಗೋ ಎಂದರೆ ಪ್ರೀತಿ .. ಕಾರ್ಯಕ್ರಮಗಳಿಗೆ ಕು.ಗೋ ಬಂದರೆ ಎಲ್ಲರಿಗು ಖುಷಿ. ಅವರ ನಡೆ ಚೆಂದ… ಗೋಜಲು ಗೋಜಲು ನುಡಿ ಇನ್ನೂ ಚೆಂದ..
ಹಾಸ್ಯವನ್ನು ಕಂಕುಳಲ್ಲೇ ಹೊತ್ತು ತಿರುಗುವವರು ಇವರು..
ಒಮ್ಮೆ ಯಾರಾದರೂ ಇಷ್ಟವಾದರೆ ಜನ್ಮದ ಭಾಂಧವ್ಯ ಬೆಳಸಿಕೊಳ್ಳುವ ಮಾತೃ ಹೃದಯಿ..
ಮಾನವೀಯ ಸಂಬಂಧಗಳ ಸಾಕಾರಮೂರ್ತಿ ಕು.ಗೋ ಜೀವನ ಮಾಧುರ್ಯಕ್ಕೆ ಜ್ವಲಂತ ಸಾಕ್ಷಿ..

ಕು.ಗೋ.. ಭೂಮಿಗೆ ಲ್ಯಾಂಡ್ ಆದದ್ದು 1938ರ ಇದೇ ತಿಂಗಳು ಜೂನ್ ಆರರಂದು. ಪದ್ಮನಾಭ ಭಟ್ಟ ಹಾಗೂ ವಾಗ್ದೇವೀ ದಂಪತಿಗಳ ಕರುಳ ಬಳ್ಳಿಯಲ್ಲಿ ಜನಿಸಿದ ಏಕಾದಶ ಮಕ್ಕಳಲ್ಲಿ ಪಂಚಮರು ಇವರು. ಪುತ್ರರೈವರಲ್ಲಿ ಮಧ್ಯಮ ಪಾಂಡವ.
ಇನ್ನು ಕಲಿಕೆಯ ಬಗ್ಗೆ ಹೇಳಬೇಕಾದರೆ ಅಂದಿನ ಕಾಲದಲ್ಲಿ ಕು. ಗೋ. S.S. L. C. ಯಲ್ಲಿ 37 ನೇ Rank … ಆದ್ರೆ ಬಿ.ಎಸ್ಸಿಯಲ್ಲಿ ಹುಡುಗಾಟದಿಂದ ಗೋತಾ ಆಯ್ತು ಅಂತ ಕೊನೆಗೆ ಬಿ.ಎ.ಯಲ್ಲಿ ಸಂತ್ರಪ್ತಿ. 1960ರಲ್ಲಿ LIC ಯಲ್ಲಿ ಸಹಾಯಕ ವೃತ್ತಿ.. ಚಿಕ್ಕಮಗಳೂರಿಂದ ಉಡುಪಿಯವರೆಗೆ ವೃತ್ತಿಯ ಜೊತೆ ಸುತ್ತಿಸುತ್ತಿ ಕೊನೆಗೆ 1996ರಲ್ಲಿ ಸ್ವಯಂ ನಿವೃತ್ತಿ. ಬಾಳ ಪಯಣದ ಜೀವನೋತ್ಸಾಹದ ಮೊದಲ ಸ್ತುತಿ ಬರೆದು ಪ್ರೀತಿ ಎರೆದು ಮರೆಯಾದವರು ಪತ್ನಿ ಶುಭವತಿ … ಈ ಮಧ್ಯೆ ಪತಿಗೆ ಕಾಣಿಕೆಯಾಗಿ ಕೊಟ್ಟದ್ದು ಒಂದು ಆರತಿ ಎರಡು ಮೂರುತಿ .. ಆಶಾ…. ವಿಷ್ಣು… ಆತ್ಮಭೂತಿ…
ಇಹದ ನೋವು ನಲಿವುಗಳ ನಡುವೆ ಹುಟ್ಟಿಕೊಂಡಿತು ಪುಸ್ತಕದ ಪ್ರೀತಿ . ಬದುಕಿ ಉಳಿಯಲು ಆಧಾರವಾಯ್ತು ಈ ಒಂದು ಶೃತಿ… ಇದಿಷ್ಟು ಕು.ಗೋ ರವರ ಬದುಕಿನ ಸಮಗ್ರ ಕೃತಿ…
ಇನ್ನು ಈ… ಹೆ.ಗೋ ರಿಗೆ ಕು.ಗೋ. ಹೇಗೋ ಗೊತ್ತಿಲ್ಲ.. ಕುಳ್ಳ ಗೋಪಾಲ ನೋ ಕುಸುಮ ಗೋಪಾಲನೋ .. ಅಂತೂ ಇವರು ಹೆಚ್ಚು ಕಮ್ಮಿ ಆರಡಿ ಎತ್ತರದ ಹೆರ್ಗ ಗೋಪಾಲ. ಸದಾ ಕನ್ನಡದ ಕಂಪನ್ನು ಕಡಲತೀರದೆಲ್ಲೆಡೆ ಪಸರಿಸುತ್ತಿರುವ ಕಥಾ ಕುಸುಮ ಈ ಗೋಪಾಲರು.
ಏನೇ ಹೇಳಿ.. ಓದುವ ಸಂಸ್ಕೃತಿಗೆ ಜೀವಂತಿಕೆ ತಂದು ಕೊಡಲು ಸದಾ ಶ್ರಮಿಸುತ್ತಿರುವ ಸಾಧಕ… ಕು.ಗೋ.. ಸರ್ವಪ್ರಿಯ, ಸರಸ ಪ್ರಿಯ.. ಬದುಕು ಇರುವುದು ಬೆಳೆಯಲಿಕ್ಕೆ, ಬೆಳಗಲಿಕ್ಕೆ, ಬೆಳೆಸಲಿಕ್ಕೆ ಎಂದು ತಿಳಿದು ಜೀವನ ಸಾಗಿಸುವವರು. ಸ್ವತಃ ಲೇಖಕರು, ಪ್ರಕಾಶಕರು, ಪ್ರಕಾಶನ ಸಹಾಯಕರು, ನವ ಲೇಖಕರ ಪಾಲಿಗೆ ಸದಾ ಬೆಂಗಾವಲಾಗಿ ನಿಲ್ಲುವವರು… ಲೇಖಕ.. ಓದುಗ… ಪ್ರಕಾಶಕ ..ರ ನಡುವಿನ ಸರಪಣಿಯಾಗಿ ನಿಂತವರು. ಕು. ಗೋ.
ಯಾವುದೇ ಹೊಸ ಕಥೆ ಕವನ ಲೇಖನ ತನ್ನ ಗಮನಕ್ಕೆ ನಿಲುಕಿದರೆ ಸಾಕು ಅದನ್ನು ತರಿಸಿಯೂ ಆಯ್ತು, ಕೆಲವೇ ಕ್ಷಣಗಳಲ್ಲಿ ಓದಿಯೂ ಆಯ್ತು … ಲೇಖಕರನ್ನು ಅಭಿನಂದಿಸಿಯೂ ಆಯ್ತು, ಒಂದಷ್ಟು ಅವರ ಪುಸ್ತಕ ತರಿಸಿಯೂ ಆಯ್ತು ಅದನ್ನು ಓದುಗರನ್ನು ಆಪ್ತರನ್ನು ಕರೆಕರೆದು ಜೋಳಿಗೆಯಿಂದ ತೆಗೆತೆಗೆದು. ” ಇದೊಂದು ಓದಿ ನೋಡಿ ” ಅಂತ ಹೇಳಿ ಹಂಚಿದ್ದೂ ಆಯ್ತು. ದುಡ್ದು , ಮುಖಬೆಲೆ ಕೊಟ್ಟರೆ ಸಂತೋಷ . ಕೊಡದಿದ್ದರೂ ಬೇಸರವಿಲ್ಲದ ಮಗು ಮನಸ್ಸಿನ ಕವಿ. ತಾನು ಪರಿಚಯಿಸಿ, ಪಬ್ಲಿಸಿಟಿ ಕೊಟ್ಟು ಎಲ್ಲರೂ ಗುರುತಿಸುವಂತೆ ಮಾಡಿದ ಅದೆಷ್ಟೋ ಯುವ ಕವಿಗಳ ಪಟ್ಟಿ ಮಾಡಿದರೆ ಒಂದು ಪುಸ್ತಕವೇ ಹೊರ ತರಬಹುದಿತ್ತು.
ಒಬ್ಬ ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಸೃಷ್ಟಿಸುವ ಶಕ್ತಿ ಕು.ಗೋ ರವರಿಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅಂಬೆಗಾಲಿಕ್ಕುವ ಮಗುವಿಗೆ ಓಡಲು ಕಲಿಸುವ ಚಾಣಾಕ್ಷ ಈ ನಮ್ಮ ಕವಿ.
ತೇಲ್ನೋಟ, ಲೊಳಲೊಳಾಯಿ, ಪಟ ಪಟ ಪಟಾಕಿ, ಅಕ್ಕನ ಮದುವೆ, ಹತ್ತು ಕಥೆಗಳು, ಎತ್ತಣಿಂದೆತ್ತ , ಶನಿ ಹಿಡಿದವ, ಮರ್ಕಟ ಮಹಾಯಜ್ಞ ಹಾಗೂ ಅಚ್ಯುತಾನಂತ ಗೋವಿಂದ ಎಂಬ ಹತ್ತು ಹಲವು ಹಾಸ್ಯ, ಕಥೆ, ಪ್ರಬಂಧ, ಸಂಕಲನ, ಲೇಖನಗಳು ಇವರೊಳಗಿನ ಅಂತಃ ಸತ್ವವನ್ನು ಬಯಲಿಗೆಳೆದು ಓದುಗರ ಮುಂದಿಟ್ಟಿದೆ.
ನಗಬಲ್ಲವರನ್ನು ನಗಿಸಲು ಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುವು ಮಾಡಿಕೊಡುತ್ತ ಒಂದಷ್ಟು ಲೇಖಕರಿಗೆ ವೇದಿಕೆಯನ್ನು ನೀಡುತ್ತ ಪುಸ್ತಕಗಳ ಪ್ರಕಟ, ಬಿಡುಗಡೆ ಮಾಡುತ್ತ ಗೋಷ್ಠಿಗಳನ್ನು ನಡೆಸುತ್ತ ಹಾಸ್ಯ ಹಾಗೂ ಅನುಭವೀ ಮಾತುಗಾರರ ಉಗ್ರಾಣವಾಗಿ ಕೆಲಸಮಾಡಲು ಅರಳಿನಿಂತ ಹಾಸ್ಯಪ್ರಿಯರ ಸಂಸ್ಥೆ ” ಸುಹಾಸಂ ” ನ ಏಕಮೇವ ಕಾರ್ಯದರ್ಶಿಯಾಗಿ ಗುರುತಿಸಿ ಕೊಂಡು ತೃಪ್ತಿ ಪಡುವ ಸರಸ್ವತೀ ಪುತ್ರ ಕು.ಗೋ..
” ನಡುಮನೆ ” ಎಂಬ ಮನೆ ಮನೆಯಲ್ಲಿ ಸಾಹಿತ್ಯ ಸಂವಾದ ಸಲ್ಲಾಪದ ವೇದಿಕೆಯ ಹುಟ್ಟಿಗೆ ಸೋಮಯಾಜಿಯವರ ಜೊತೆಯಾಗಿ ಪ್ರೇರಕ ಶಕ್ತಿಯಾಗಿ ನಿಂತವರು ಕು.ಗೋ ರವರು.
ಅದೆಷ್ಟೋ ಬರಹಗಾರರ ಬರಹ ಭಂಡಾರಕ್ಕೆ ಮುನ್ನುಡಿ ಬೆನ್ನುಡಿ ಬರೆದು ಬರಹ ಮತ್ತು ಬರಹಗಾರನ ಹಿರಿಮೆ ಗರಿಮೆಗಳಿಗೆ ಗರಿ ಹಚ್ಚಿ ತನ್ನ ನುಡಿ ಶೃಂಗಾರದ ಮೂಲಕ ಓದುಗರಿಗಾಗಿ ತೆರೆದಿಡುತ್ತಿದ್ದವರು ಕು.ಗೋ..
ಕು.ಗೋ. ಪುಸ್ತಕಗಳನ್ನು ಕೊಟ್ಟು ಗಳಿಸಿದ್ದು ಕಡಿಮೆ ಕಳಕೊಂಡಿದ್ದು ಜಾಸ್ತಿ ಅನ್ನುವ ಅಭಿಪ್ರಾಯ ನನಗೆ ಅದು ತಪ್ಪು ಕಲ್ಪನೆ ಅನ್ನಿಸುತ್ತದೆ..ಯಾಕೆ ಗೊತ್ತಾ…ಕುಗೋ .. ಕಳಕೊಂಡದ್ದು ಹಣ ಮಾತ್ರ ಆದ್ರೆ ಗಳಿಸಿದ್ದು..ಅದೆಷ್ಟೋ ಕನ್ನಡಿಗರ ಪ್ರೀತಿ, ವಿಶ್ವಾಸ, ಗೌರವ, ಸ್ನೇಹ, ಕರುಣೆ, ಇತ್ಯಾದಿ ಇತ್ಯಾದಿ. ಅವರ ಈ ಪುಸ್ತಕ ಪ್ರೀತಿ ಎಷ್ಟೋ ಮದಗಜಗಳ ಕದ ತಟ್ಟಿದೆ. ಎಷ್ಟೋ ಮೃದು ಹೃದಯಿಗಳ ಮನ ಮುಟ್ಟಿದೆ … ಹಾಗಾಗಿ ಅವರಿಗೆ ಲೆಕ್ಕವಿಲ್ಲದಷ್ಟು ಸನ್ಮಾನ, ಲೆಕ್ಕವಿಲ್ಲದಷ್ಟು ವೇದಿಕೆಗಳು, ಲೆಕ್ಕವಿಲ್ಲದಷ್ಟು ಪತ್ರಿಕೆಗಳಲ್ಲಿ ಲೇಖನ, ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ಪ್ರೀತಿಯಿಂದ ಬಂದು ಅಪ್ಪಿಕೊಂಡಿವೆ. ಗೋರೂರು ಸಾಹಿತ್ಯ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ಅಸಾಮಾನ್ಯ ಕನ್ನಡಿಗ ಇವೆಲ್ಲ ಇವರ ಪ್ರತಿಭೆಗೆ ಸಂದ ಗೌರವ.

ಈ ಅಪ್ರತಿಮ ಕನ್ನಡ ಪ್ರೇಮಿಯ “ಕು. ಗೋ. 84” ಎಂಬ ಅಭಿನಂದನಾ ಸಮಾರಂಭವನ್ನು ಸುಹಾಸಂ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಜೊತೆಗೂಡಿ ಸಂಭ್ರಮದಿಂದ ಆಚರಿಸಿ ಗೌರವಿಸುತ್ತಿದೆ.
ನಾವೆಲ್ಲರೂ ಈ ಕಾರ್ಯಕ್ರಮದಲ್ಲಿದ್ದು , ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಅವರನ್ನು ಅಭಿನಂದಿಸೋಣ ಬನ್ನಿ…….

✒️
ರಾಜೇಶ್ ಭಟ್ ಪಣಿಯಾಡಿ .

 
 
 
 
 
 
 
 
 
 
 

Leave a Reply