ಪತಿಯನ್ನು ಕಟ್ಟಿಹಾಕಿ, ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ

ರಾತ್ರಿವೇಳೆ ಮನೆಗೆ ಹಿಂತಿರುಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅತ್ತೆಯ ಮನೆಯಿಂದ ಮನೆಯತ್ತ ಪತ್ನಿಯೊಂದಿಗೆ ನಡೆದುಕೊಂಡು ಸಾಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ಹತ್ತು ಜನರಿದ್ದ ಗುಂಪು ಅವರನ್ನು ಸಮೀಪದ ಮಾವಿನ ತೋಪಿಗೆ ಎಳೆದೊಯ್ದಿದೆ.

ಅಲ್ಲಿ ಪತಿಯನ್ನು ಮರಕ್ಕೆ ಕಟ್ಟಿಹಾಕಿ, ಆತನ ಎದುರಿಗೆ ಪತ್ನಿಯ ಮೇಲೆ ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಗುರುವಾರ ಸಂತ್ರಸ್ತೆಯ ಕುಟುಂಬಸ್ಥರು ಸಲ್ಲಿಸಿದ ದೂರಿನ ಮೇರೆಗೆ ಇಬ್ಬರು ಅಪ್ರಾಪ್ತರು ಸೇರಿದಂತೆ 10 ಮಂದಿ ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಮುಜಫರ್‌ ನಗರ ಎಸ್ ಪಿ ಅರ್ಪಿತ್ ವಿಜಯ್ ವರ್ಗೀಯಾ ಹೇಳಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply