ಪ್ರಧಾನಿ ಮೋದಿ ಹತ್ಯೆಗೆ ಪ್ಲಾನ್: ಇಬ್ಬರು ಶಂಕಿತ ಉಗ್ರರ ಬಂಧನ

ಬಿಹಾರ ಪೊಲೀಸರು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದು, ಸಂಚನ್ನು ವಿಫಲಗೊಳಿಸಿದ್ದಾರೆ.

2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯನ್ನು ಭಯೋತ್ಪಾದಕರು ಹೊಂದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಜುಲೈ 12 ರಂದು ಮೋದಿ ಬಿಹಾರಕ್ಕೆ ಭೇಟಿ ನೀಡುವ ಸಮಯದಲ್ಲಿ ಭಯೋತ್ಪಾದಕರು ಅವರನ್ನು ಗುರಿಯಾಗಿಸಿ ದಾಳಿಗೆ ಸಂಚು ನಡೆಸಿದ್ದನ್ನೂ ಬಹಿರಂಗಪಡಿಸಿದ್ದಾರೆ. ಆದರೆ ಜುಲೈ 11 ರಂದು ಪೊಲೀಸರು ದಾಳಿ ನಡೆಸಿ ಶಂಕಿತ ಉಗ್ರರನ್ನು ಬಂಧಿಸಿ ಸಂಚು ವಿಫಲಗೊಳಿಸಿದ್ದಾರೆ.

ಬಂಧಿತರನ್ನು ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲುದ್ದೀನ್ ಮತ್ತು ಅಥರ್ ಪರ್ವೇಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಪಿಎಫ್‌ಐ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ.

ಶಂಕಿತ ಭಯೋತ್ಪಾದಕರು ಪ್ರಧಾನಿ ಭೇಟಿಗೆ 15 ದಿನಗಳ ಹಿಂದೆ ಪುಲ್ವಾರಿ ಷರೀಫ್‌ನಲ್ಲಿ ತರಬೇತಿ ಪಡೆದಿದ್ದಾರೆ ಎಂದು ವಿಚಾರಣೆಯಲ್ಲಿ ಬಯಲಾಗಿದೆ. ಮೋದಿ ಗುರಿಯಾಗಿಸಿ ದಾಳಿ ನಡೆಸಲು ಜುಲೈ 6 ಮತ್ತು 7 ರಂದು ಕಾರ್ಯತಂತ್ರದ ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

ಪುಲ್ವಾರಿ ಷರೀಫ್ ನಲ್ಲಿ ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಹೇಗೆ ಬಳಸಬೇಕೆಂದು ತರಬೇತಿ ನೀಡುತ್ತಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದರು. ಹೀಗೆ ಸುಮಾರು 26 ಜನರನ್ನು ದಾಳಿಗೆ ತರಬೇತುಗೊಳಿಸಿದ್ದರು. ಪಾಟ್ನಾದಲ್ಲಿ ಅವರನ್ನು ಭೇಟಿ ಮಾಡಲು ಬೇರೆ ರಾಜ್ಯಗಳ ಜನರು ಹೋಟೆಲುಗಳಲ್ಲಿ ನಕಲಿ ಹೆಸರುಗಳಲ್ಲಿ ತಂಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರಿಗೆ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಿಂದ ದೇಶ ವಿರೋಧಿ ಚಟುವಟಿಕೆ ನಡೆಸಲು ಹಣ ಬರುತ್ತಿತ್ತು ಎನ್ನಲಾಗಿದೆ.

 
 
 
 
 
 
 
 
 
 
 

Leave a Reply