ಮರವಂತೆ: ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕೊಚ್ಚಿಹೋದ ಯುವಕ!

ಮೊಬೈಲ್ ನಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೋರ್ವ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ಮರವಂತೆ ಬೀಚ್ ನಲ್ಲಿ ಮಂಗಳವಾರ ಸಂಭವಿಸಿದೆ.

ನಾಪತ್ತೆಯಾದ ಯುವಕನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕು ನಿವಾಸಿ ಫೀರ್ ಸಾಬ್ ನದಾಫ್ (21) ಎಂದು ಗುರುತಿಸಲಾಗಿದೆ.

ಫೀರ್ ಸಾಬ್ ಸುಮಾರು 2 ತಿಂಗಳ ಹಿಂದೆ ಗಾರೆ ಕೆಲಸಕ್ಕಾಗಿ ಕಾಪುವಿಗೆ ಆಗಮಿಸಿದ್ದು, ಮಂಗಳವಾರ ತನ್ನ ಜಿಲ್ಲೆಯ ಪರಿಚಯದ ಗದಗ ನಿವಾಸಿ ಸಿರಾಜ್ ಎಂಬವರು ತಮ್ಮ ಲಾರಿಯಲ್ಲಿ ಮಂಗಳೂರಿಗೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಫೀರ್ ಸಾಬ್ ಹಾಗೂ ಆತನ ಗೆಳೆಯ ಸಿದ್ದಪ್ಪರವರು ತಾವು ಮನೆಗೆ ಹೋಗುವುದಾಗಿ ಹೇಳಿದ್ದು ಸಿರಾಜ್ ರವರ ಲಾರಿಯಲ್ಲಿ ತೆರಳಿದ್ದರು.

ದಾರಿಮಧ್ಯೆ ಮರವಂತೆ ಬೀಚ್ ಬಳಿ ಸಿರಾಜ್ ಲಾರಿಯನ್ನು ನಿಲ್ಲಿಸಿದ್ದು ಈ ಸಮಯದಲ್ಲಿ ಬೀಚ್ ನಲ್ಲಿ ಇರುವ ಕಲ್ಲುಗಳ ಮೇಲೆ ನಿಂತು ಸಮುದ್ರಕ್ಕೆ ಬೆನ್ನು ಹಾಕಿ ಮೊಬೈಲ್ ಫೋನ್ ನಲ್ಲಿ ಸೆಲ್ಫೀ ತೆಗೆದುಕೊಳ್ಳುವಾಗ ಸಮುದ್ರದ ಅಲೆ ಅಪ್ಪಳಿಸಿದರ ಪರಿಣಾಮ ಫೀರ್ ಸಾಬನು ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ನಾಪತ್ತೆ ಆಗಿರುತ್ತಾನೆ.

ಸ್ಥಳೀಯರು ಆತನನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರೂ ಕೂಡ ವಿಫಲವಾಗಿದೆ. ಅಗ್ನಿಶಾಮಕ ದಳ, ಗಂಗೊಳ್ಳಿ ಅಪಂತ್ಪಾಭಾಂದವ ತಂಡದ ಸದಸ್ಯರು ಹುಡುಕಾಟ ನಡೆಸುತ್ತಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply