ಉಪಶಾಮಕ ಆರೈಕೆಯಲ್ಲಿರುವ ರೋಗಿಗಳ ಪರ ಉದಾತ್ತ ಆಶಯದಲ್ಲಿ ಮಣಿಪಾಲದ ಮ್ಯಾರಥಾನ್‌ನ ಆರನೆಯ ಆವೃತ್ತಿಯ ಆಯೋಜನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಂಸ್ಥೆಯು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ [ಯುಡಿಎಎಎ]ನ ಸಹಭಾಗಿತ್ವದಲ್ಲಿ ಬೃಹತ್ ‘ಮಣಿಪಾಲ ಮ್ಯಾರಥಾನ್’ನ್ನು ಆದಿತ್ಯವಾರ, ಫೆಬ್ರವರಿ 11, 2024 ರಂದು ಆಯೋಜಿಸುತ್ತಿದೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆಯುವ ಮ್ಯಾರಥಾನ್ ದೇಶದಲ್ಲೇ ಅತಿ ದೊಡ್ಡ ವಿದ್ಯಾರ್ಥಿ ಸಂಘಟಿತ ಮ್ಯಾರಥಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಭಾರತದ ವಿವಿಧ ಭಾಗಗಳ 15,000 ಮಂದಿ ಈ ಮಣಿಪಾಲ್‌ ಮ್ಯಾರಥಾನ್‌ನಲ್ಲಿ ಜೊತೆಗೂಡಲಿದ್ದು ಓಟದ ಪಥವು ಐಎಎಎಫ್‌ (ಇಂಟರ್‌ನ್ಯಾಶನಲ್‌ ಅಮೆಚೂರ್‌ ಅಥ್ಲೆಟಿಕ್‌ ಫೆಡರೇಶನ್‌] -ಎಐಎಂಎಸ್‌ [ಅಸೋಸಿಯೇಶನ್‌ ಆಫ್‌ ಇಂಟರ್‌ನ್ಯಾಶನಲ್‌ ಮ್ಯಾರಥಾನ್ಸ್‌ ಆ್ಯಂಡ್‌ ಡಿಸ್ಟ್ಯಾನ್ಸ್‌ ರೇಸಸ್‌] ದಿಂದ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ಮಣಿಪಾಲ್‌-ಉಡುಪಿಯ ಆಸುಪಾಸಿನ ಚಿತ್ತಾಕರ್ಷಕ ತಾಣಗಳ ಮೂಲಕ ಸಾಗಲಿದೆ. ವಿವಿಧ ವಿಭಾಗಗಳು, ಪೂರ್ಣ ಮ್ಯಾರಥಾನ್ (42.195k), ಅರ್ಧ ಮ್ಯಾರಥಾನ್ (21.098k), 10k, 5k ಮತ್ತು 3k ಪ್ರತಿ ಓಟಗಾರರ ಸಾಮರ್ಥ್ಯಕ್ಕೆ ಸರಿಹೊಂದುವಂತೆ ಎಚ್ಚರಿಕೆಯಿಂದ ರೂಪಿಸಲಾಗಿದೆ. 3 KM ಓಟಕ್ಕಾಗಿ ಕೊನೆಯ ವರ್ಗವನ್ನು 3K ಫನ್ ರನ್ ಎಂದೂ ಕರೆಯುತ್ತಾರೆ, ಇದು ಸ್ಪಾಟ್ ನೋಂದಣಿಗಳನ್ನು ಹೊಂದಿರುತ್ತದೆ ಮತ್ತು ಇದು ಉಚಿತವಾಗಿರುತ್ತದೆ. ಈ ವಿಭಾಗಕ್ಕೆ ಸ್ಥಳದಲ್ಲಿಯೇ ಉಚಿತವಾಗಿ ಹೆಸರು ದಾಖಲಿಸಬಹುದಾಗಿದೆ. ಮಣಿಪಾಲ್ ಮ್ಯಾರಥಾನ್ ಪೂರ್ಣಗೊಂಡ ನಂತರ, ಭಾಗವಹಿಸುವವರಿಗೆ ಭವ್ಯವಾದ ಕಾರ್ನೀವಲ್ ಆಚರಣೆಯನ್ನು ನೀಡಲಾಗುತ್ತದೆ. ಮ್ಯಾರಥಾನ್‌ನ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಸುಮಾರು 21 ಲಕ್ಷ ರೂ.ವರೆಗಿನ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಮಣಿಪಾಲ್‌ ಮ್ಯಾರಥಾನ್‌ನ 6 ನೆಯ ಆವೃತ್ತಿಯು ಉನ್ನತವಾದ ಮಾನವೀಯ ಆಶಯ ಪರವಾಗಿದ್ದು ಇದು ‘ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಉಪಶಾಮಕ ಆರೈಕೆ [ಹಾಸ್ಪೈಸ್‌ ಪೆಲಿಟೀವ್‌ ಕೇರ್‌] ಯ ಕುರಿತ ಅರಿವನ್ನು ಸಮಾಜದಲ್ಲಿ ಮೂಡಿಸುವುದಕ್ಕೆ ಬದ್ಧವಾಗಿದೆ. ‘ನಾವು ನಿಮ್ಮೊಂದಿಗೆ ಸದಾ ಇದ್ದೇವೆ’ ಎಂಬ ಘೋಷಣಾವಾಕ್ಯದೊಂದಿಗೆ ಈ ಮ್ಯಾರಥಾನ್‌ ಆರೋಗ್ಯ ಕ್ಷೇತ್ರದಲ್ಲಿ ಜಾಗೃತಿಯ ಮಹಾಪಥವನ್ನು ತೆರೆಯಲಿದೆ

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ‘ಮಣಿಪಾಲ್‌ ಮ್ಯಾರಥಾನ್‌ ಎಂಬುದು ಕೇವಲ ಓಟವಲ್ಲ. ಇದು ಜಾಗತಿಕ ಮಟ್ಟದಲ್ಲಿ ಸದಾಶಯವೊಂದರ ಸಂಭ್ರಮಾಚರಣೆಯಾಗಿದೆ. ಈ ಸಲದ ಮ್ಯಾರಥಾನ್‌ಗೆ ಸಂಬಂಧಿಸಿ ಭಾಗಿಗಳ ಉತ್ಸಾಹ, ಜಾಗತಿಕ ಮಟ್ಟದ ಐಕ್ಯತೆ, ಸಾಮಾಜಿಕ ಬಾಧ್ಯತೆ- ಇವೆಲ್ಲವನ್ನು ನೋಡಿ ನನಗೆ ಅತೀವ ಸಂತಸವಾಗುತ್ತಿದೆ. ನಮ್ಮ ಮಣಿಪಾಲ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡುವುದಲ್ಲ, ಸಮಾಜದ ಸಮಗ್ರ ಅಭಿವೃದ್ಧಿಯ ಕುರಿತ ಬದ್ಧತೆಯ ಅರಿವನ್ನೂ ಮೂಡಿಸುತ್ತಿದೆ. ಮ್ಯಾರಥಾನ್‌ನ ನಿಮಿತ್ತ ಜಗತ್ತಿನ ವಿವಿಧೆಡೆಗಳಿಂದ ಬಂದವರು ಇಲ್ಲಿ ಜೊತೆಯಾಗಿ ಕೆಜೋಡಿಸುವುದನ್ನು ಕಲ್ಪಿಸಿಕೊಳ್ಳಲು ಹರ್ಷ ಪಡುತ್ತೇನೆ. ಈ ಮ್ಯಾರಥಾನ್‌ನ್ನು ಆಯೋಜನೆಯಲ್ಲಿ ಅನೇಕ ಮಂದಿ ಸಹಕರಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಎಲ್ಲರ ಒಗ್ಗಟ್ಟಿನ ಧ್ವನಿಯಲ್ಲಿ ಈ ಮ್ಯಾರಥಾನ್‌ ಯಶಸ್ವಿಯಾಗಲಿದೆ’ ಎಂದರು.  

ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಡಾ. ಶರತ್‌ ರಾವ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ‘ಮಣಿಪಾಲ್‌ ಮ್ಯಾರಥಾನ್‌ನ 6ನೆಯ ಆವೃತ್ತಿಯ ಆಯೋಜನೆ ಮತ್ತು ಭಾಗವಹಿಸುವಿಕೆಯಲ್ಲಿ ಉತ್ಸಾಹ, ದೃಢತೆಗಳನ್ನು ಸಮಗ್ರ ತಂಡದ ಸ್ಪೂರ್ತಿ [ಟೀಮ್‌ ಸ್ಪಿರಿಟ್‌] ಆಗಿ ಪರಿವರ್ತನೆಗೊಳ್ಳುತ್ತದೆ. ಇದು ವಿದ್ಯಾರ್ಥಿಗಳೇ ಆಯೋಜಿಸುವ ಮ್ಯಾರಥಾನ್‌ ಆಗಿದ್ದು, ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಕುರಿತ ಜಾಗೃತಿಯನ್ನೂ ಮೂಡಿಸುತ್ತದೆ.‘ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳಿಗೆ ಉಪಶಾಮಕ ಆರೈಕೆ [ಹಾಸ್ಪೈಸ್‌ ಪೆಲಿಟೀವ್‌ ಕೇರ್‌] ಎಂಬ ಆಶಯದಲ್ಲಿ ರೋಗಿಗಳ ಪರವಾದ ಮಾನವೀಯ ಆಶಯವನ್ನು ಹೊಂದಿರುವ ಈ ಮ್ಯಾರಥಾನ್‌ ಸಮಾಜಪರವಾಗಿದೆ’ ಎಂದರು.

ಮಾಹೆಯ ಸಹಕುಲಾಧಿಪದಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಮ್ಯಾರಥಾನ್ ನ ಆರನೆಯ ಆವೃತ್ತಿಯ ಯಶಸ್ಸನ್ನುನೋಡಲು ಉತ್ಸುಕನಾಗಿದ್ದೇನೆ. ಪ್ರತಿಯೊಂದು ಹೆಜ್ಜೆಯೂ ನಾವು ನಮ್ಮ ದೈಹಿಕ ಸ್ಥಿತಿಯ ಜೊತೆಗೆ ನಮ್ಮ ಕಾಲೇಜು ಕುಟುಂಬದ ಒಗ್ಗಟ್ಟು ಮತ್ತು ಸ್ನೇಹವನ್ನು ನಿರ್ಮಿಸುತ್ತಿದ್ದೇವೆ ಹಾಗೂ ಸಹಬಾಳ್ವೆಯ, ಸ್ನೇಹದ ಆಶಯವನ್ನು ಎತ್ತಿಹಿಡಿಯುತ್ತದೆ. ಮಾನವೀಯ ಆಶಯದ ಬದ್ಧತೆಯೊಂದಿಗೆ ಆಯೋಜನೆಗೊಳ್ಳಲಿರುವ ಈ ಮ್ಯಾರಥಾನ್ ನಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮತ್ತು ಉತ್ತಮವಾದ, ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಬದುಕಲು ಪ್ರೇರಣೆಯಾಗಿ ಜೊತೆಗೆ ಸಮಾಜಪರ ಉದಾತ್ತ ಆಶಯವನ್ನು ಎತ್ತಿಹಿಡಿಯುವಲ್ಲಿ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದರು.

ಸಮರ್ಥನ್‌ ಟ್ರಸ್ಟ್‌ನ 200 ಮಂದಿ ಅಂಧರು ಮತ್ತು ಕರ್ನಾಟಕದ ವಿವಿಧೆಡೆಗಳ ಸುಮಾರು 15 ಮಂದಿ ವಿಶೇಷ ಚೇತನರು [ಶಾರೀರಿಕ ನ್ಯೂನತೆಯುಳ್ಳವರು] ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ.

ಪತ್ರಕರ್ತರ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ಬೆಂಬಲಿಸುವ ಆಶಯದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಮಣಿಪಾಲ್ ಆಕಾಡೆಮಿ ಹೆಯರ್ ಎಜುಕೇಶನ್ [ಮಾಹೆ]ಯಿಂದ 5 ಲಕ್ಷ ರೂ. ದೇಣಿಗೆಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ [ಕ್ರೆಡಿಟ್‌ ಕಾರ್ಡ ವಿಭಾಗ]- ಇವು ಈ ಮ್ಯಾರಥಾನ್‌ನಲ್ಲಿ ಸಹಭಾಗಿತ್ವವನ್ನು ಹೊಂದಿವೆ. 

ಹೆಚ್ಚಿನ ವಿವರಗಳಿಗೆ ಮಣಿಪಾಲ್ ಮ್ಯಾರಥಾನ್‌ನ ಫೇಸ್‌ಬುಕ್‌ ಪುಟವನ್ನು ಅವಲೋಕಸಿ.

 
 
 
 
 
 
 
 
 
 
 

Leave a Reply