ಕೊಲ್ಲೂರು : ಕಿರು ಉದ್ಯಮಗಳ ಸ್ಥಾಪನೆ ಕುರಿತ ಕಾರ್ಯಗಾರ ಉದ್ಘಾಟನೆ

ಉಡುಪಿ : ಕೊಲ್ಲೂರು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಜನರ ಆರ್ಥಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವಯೋಜನೆಗಳನ್ನು ರೂಪಿಸುವುದರೊಂದಿಗೆ, ನಿಗಧಿತ ಕಾಲಾವಧಿಯೊಳಗೆ ಅವುಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್. ಎಂ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ, ಕೊಲ್ಲೂರು ದೇವಸ್ಥಾನ ವ್ಯಾಪ್ತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಕಿರು ಉದ್ಯಮಗಳ ಸ್ಥಾಪನೆ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ದೇಶದ ಪ್ರತಿಷ್ಠಿತ 6 ದೇವಸ್ಥಾನದ ನಗರಗಳಲ್ಲಿ ಸಣ್ಣ ಉದ್ದಿಮೆಗಳನ್ನು ಉತ್ತೇಜಿಸಲು ಹಾಗೂ ಮೇಲ್ವಿಚಾರಣೆ ನಡೆಸಲು ಮುಂದಾಗಿದ್ದು, ಅವುಗಳಲ್ಲಿ ಹರಿದ್ವಾರ, ಬುದ್ದಗಯಾ, ಪಂಡರಾಪುರ, ಪುರಿ,ವಾರಣಾಸಿ ದೇವಸ್ಥಾನಗಳೂ ಸೇರಿದಂತೆ, ಜಿಲ್ಲೆಯ ಕೊಲ್ಲೂರು ದೇವಸ್ಥಾನವು ಸೇರಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕೊಲ್ಲೂರು ದೇವಸ್ಥಾನಕ್ಕೆ ಪ್ರತಿವರ್ಷವೂ ದೇಶದ ಅನೇಕ ರಾಜ್ಯಗಳಿಂದ ಅಸಂಖ್ಯಾತ ಭಕ್ತಾಧಿಗಳು ಬರುವುದರಿಂದ ಧಾರ್ಮಿಕ ಪ್ರವಾಸಿ ಕೇಂದ್ರವಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಆರ್ಥಿಕ ಚಟುವಟಿಕೆಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುವ ಹಾಗೆ ಉತ್ತೇಜಿಸಬೇಕು ಎಂದರು.

ಕೊಲ್ಲೂರು ದೇವಸ್ಥಾನ ಪ್ರದೇಶ ವ್ಯಾಪ್ತಿಯು, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಅರಣ್ಯ ವಲಯಗಳಲ್ಲಿ ಬರಲಿದ್ದು, ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ, ಪರಿಸರ ಸ್ನೇಹಿಯಾಗಿ ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳು ಹಾಗೂ ಕೃಷಿ ಉತ್ಪನ್ನಗಳ ಬಳಕೆಯೊಂದಿಗೆ, ಸಿದ್ಧ ವಸ್ತುಗಳನ್ನು

ತಯಾರಿಸುವುದರೊಂದಿಗೆ ಅವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವಂತಹ ಯೋಜನೆಗಳನ್ನು ರೂಪಿಸುವುದರೊಂದಿಗೆ, ಅವರುಗಳಿಗೆ ಪ್ರೋತ್ಸಾಹ ಹಾಗೂ ಉತ್ಪನ್ನ ಚಟುವಟಿಕೆಗಳನ್ನು ಪ್ರಾರಂಭಿಸಲು ಉತ್ತೇಜಿಸಬೇಕು ಎಂದರು.

ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಭಾಗೀದಾರರಿಗೆ ನೀಡುವಾಗ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ವೈಯಕ್ತಿಕ ಅಥವಾ ಗುಂಪು ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವರುಗಳು ಬ್ಯಾಂಕ್‌ಗಳಿಂದ ಆರ್ಥಿಕ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿಯನ್ನು ಒಗದಿಸುವುದು ಸೂಕ್ತ ಎಂದರು.

ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಮ ಪಂಚಾಯತ್‌ಗಳ ಮತ್ತು ಈ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸಹಕಾರ ಪಡೆದು ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ, ಆಂಚಲ್ ದಹಿಮಾ, ಕೊಲ್ಲೂರು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಕೇಂದ್ರವಾಗಿರಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಿರು ಉದ್ಯಮ ಸ್ಥಾಪನೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಮಕೃಷ್ಣಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸೆಂಟ್ರಲ್ ಇಂಡಸ್ಟ್ರಿಯಲ್ ಎಕ್ಸ್ಟೆನ್ಷನ್‌ನ ಅಧಿಕಾರಿ ಶ್ರೀಪರ್ಣಾ ಭರೂಹಾ, ನರೇಂದ್ರ ಗಿರಿಡಿ, ವೈಶಾಲಿ ಅಪರಾಜಿತ್ ಮತ್ತಿತರರು ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply