ಮಾರ್ಚ್ 27 ವಿಶ್ವ ರಂಗ ದಿನಾಚರಣೆ

ಬಹಳಷ್ಟು ಮಂದಿ ರಂಗಭೂಮಿ ಎಂದರೆ ನಾಟಕ ಅಷ್ಟೇ ಅಂದುಕೊಂಡಿದ್ದಾರೆ. ರಂಗಶಿಕ್ಷಣ ಅನ್ನುವುದು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಶಿಕ್ಷಣ. ಇದನ್ನು ಅರ್ಥಸಿಕೊಂಡರೆ ಮನೆಯೇ ರಂಗಶಾಲೆಯಾಗಲಿ ಎಂಬ ಶೀರ್ಷಿಕೆ ಯ ಮಹತ್ವ ತಿಳಿಯಲು ಸಾಧ್ಯ. ಇಲ್ಲವಾದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತೊಂದಿದೆ…. ನಾಟಕಕ್ಕೆ ಹೋಗಿ ಹಾಳಾದ… ಅಂತ.
 ಯಾರು ಕಲೆ, ಸಂಗೀತ, ನಾಟಕ, ನೃತ್ಯ ಮೊದಲಾದ ಲಲಿತಕಲೆಗಳಿಗೆ ತಮ್ಮ ಮನೆಯಲ್ಲಿ ಅವಕಾಶ ಮಾಡಿಕೊಡುತ್ತಾರೋ, ಆ ಮನೆಗಳಲ್ಲಿ ವಿಕೃತಿಗಳು ಇರೋದಿಲ್ಲ, ಅಪರಾಧಿಗಳು ಸೃಷ್ಟಿಯಾಗೋದಿಲ್ಲ ಅಂತ ಬಲ್ಲವರು ಹೇಳುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮತ್ತು ಅರ್ಥೈಸಿಕೊಂಡು ಅವರವರ ಪಾತ್ರಗಳನ್ನು ಸರಿಯಾಗಿ ನಿರ್ವಹಿಸಿದರೆ ಬಹುಷಃ ನಮ್ಮ ದೇಶದಲ್ಲಿ ಅಪರಾಧಿ ಮನೋಭಾವದ ಪ್ರಜೆಗಳು ಇರುತ್ತಿರಲಿಲ್ಲ. ಮನುಷ್ಯರನ್ನು ಮನುಷ್ಯರ ಹಾಗೇ ಕಾಣುವ ಕುಟುಂಬದಿಂದ ಬಂದವ ಯಾರೂ ರಾಕ್ಷಸಿ ಕೃತ್ಯ ಮಾಡುವುದು ಸಾಧ್ಯವಿಲ್ಲ. ಮೇಲು ಕೀಳು ಅನ್ನುವುದನ್ನು ಬಾಲ್ಯದಲ್ಲೇ ಮಕ್ಕಳ ಮನಸಿಗೆ ತುಂಬುವ ಮನೆಯಿಂದ ಹೊರಬಂದ ವ್ಯಕ್ತಿ ಅದನ್ನೇ ಮಾಡುವುದು ಸಹಜ ತಾನೇ. ಜಾತಿ ಧರ್ಮಗಳ ಗೋಡೆಗಳ ನಡುವೆ ಬೆಳೆದ ಮಕ್ಕಳು ಮನೆಯಿಂದಾಚೆ ಬಂದು, ಅದೇ ಗೋಡೆಗಳನ್ನು ಸಮಾಜದಲ್ಲಿ ಕಟ್ಟುತ್ತಾರೆ. ಭವಿಷ್ಯದ ಬಗ್ಗೆ, ದೇಶದ ಬಗ್ಗೆ, ಕಾನೂನಿನ ಬಗ್ಗೆ, ಪ್ರೀತಿ ಪ್ರೇಮಗಳ ಬಗ್ಗೆ, ಸಹನೆ, ಗೌರವ ಬಗ್ಗೆ, ಮನುಷ್ಯ ಪ್ರೀತಿಯ ಬಗ್ಗೆ, ದೇವರು ನಂಬಿಕೆ ಬಗ್ಗೆ,ಕರುಣೆ ದಯೆ ಅನುಕಂಪ ಬಗ್ಗೆ ಮನೆಯಲ್ಲಿ ಪ್ರಾಯೋಗಿಕ ವರ್ತನೆಗಳಿಲ್ಲದಿದ್ದರೆ ಯಾವ ಉಪದೇಶವು ಮಕ್ಕಳನ್ನು ಬದಲಾಯಿಸದು. ಮೇಲಿನ ಎಲ್ಲಾ ಅಂಶಗಳನ್ನು ಬದುಕಿನಲ್ಲಿ ಅಳವಡಿಸುವ ಒಂದು ಪ್ರಯೋಗಶಾಲೆಯೇ ರಂಗಭೂಮಿ. 
ಆ ಕಾರಣಕ್ಕಾಗಿ ಪ್ರತಿ ಮನೆಯೂ ರಂಗಶಾಲೆಯಾಗಲಿ, ಪ್ರತಿ ಪೋಷಕರು ಒಳ್ಳೆಯ ಪಾತ್ರಧಾರಿಗಳಾಗಲಿ…
ಜಗತ್ತಿನಲ್ಲಿ ದುರಂತನಾಟಕಗಳು ನಡೆಯುವುದು ಸಾಧ್ಯವೇ ಇಲ್ಲ. 
ಎಲ್ಲರಿಗೂ ವಿಶ್ವ ರಂಗ ದಿನಾಚರಣೆಯ ಶುಭಾಶಯಗಳು 
– ಬಾಸುಮ ಕೊಡಗು

 
 
 
 
 
 
 
 
 
 
 

Leave a Reply