ಭೀಕರ ಕಾರು ಅಪಘಾತಕ್ಕೆ ಯುವ ಶಾಸಕಿ ಲಾಸ್ಯ ನಂದಿತಾ ಬಲಿ

ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಬಿಆರ್‌ಎಸ್‌(ಭಾರತ ರಾಷ್ಟ್ರ ಸಮಿತಿ) ಶಾಸಕಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ಹೊರವಲಯದಲ್ಲಿ ಬರುವ ಸಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಸದಾಶಿವ ಪೇಟ್ ಬಳಿ ರಸ್ತೆ ವಿಭಾಜಕಕ್ಕೆ ಶಾಸಕಿ ಲಾಸ್ಯ ನಂದಿತಾ ಅವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಲಾಸ್ಯ ಹಠಾತ್ ನಿಧನಕ್ಕೆ ಬಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಅನೇಕ ಗಣ್ಯರು, ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲಾಸ್ಯ ಅವರ ಕಾರು ಚಾಲಕ ನಿಯಂತ್ರಣ ತಪ್ಪಿ ಎಕ್ಸ್‌ಪ್ರೆಸ್‌ ವೇಯ ಎಡಭಾಗದಲ್ಲಿದ್ದ ಕಬ್ಬಿಣದ ವಿಭಾಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ನಂದಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಗಂಭೀರ ಗಾಯಗೊಂಡಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ನಂದಿತಾ ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು, 2023ರ ತೆಲಂಗಾಣ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಇದೇ ಮೊದಲ ಬಾರಿಗೆ ಅವರು ವಿಧಾನಸಭೆ ಪ್ರವೇಶಿಸಿದ್ದರು. 1986ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ನಂದಿತಾ ದಶಕದ ಹಿಂದಷ್ಟೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಸಿಂಕಂದರಬಾದ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ತೆಲಂಗಾಣ ವಿಧಾನಸಭೆ ಪ್ರವೇಶಿಸುವ ಮೊದಲು ಅವರು ಕಾವಡಿಗುಡ್ಡ ವಾರ್ಡ್‌ನಲ್ಲಿ ಕಾರ್ಪೋರೇಟರ್ ಆಗಿ ಕೆಲಸ ಮಾಡಿದ್ದರು. 

ಬಿಆರ್‌ಎಸ್‌ ಮುಖಂಡರಾಗಿದ್ದ ಬಿ ಸಾಯಣ್ಣ ಪುತ್ರಿಯಾಗಿದ್ದ ನಂದಿತಾ, ತಮ್ಮ ತಂದೆಯ ನಿಧನದ ನಂತರ ತಂದೆ ಪ್ರತಿನಿಧಿಸಿದ್ದ ಸಿಕಂದರಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂದಿತಾ ನಿಧನಕ್ಕೆ ಬಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ನಂದಿತಾ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಸಂಗಾರೆಡ್ಡಿ ಪೊಲೀಸ್ ಸಿಹೆಚ್‌ ರೂಪೇಶ್ ಮಾಹಿತಿ ನೀಡಿದ್ದು, ಲಾಸ್ಯ ನಂದಿತಾ ಅವರು ಅಪಘಾತ ನಡೆಯುವ ವೇಳೆ ಬಸರಾದಿಂದ ಹೈದರಾಬಾದ್‌ನ ಗಚ್ಚಿಬೌಲಿಯತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬಹುಶಃ ಪ್ರಯಾಣದ ಸಮಯದಲ್ಲಿ ಕಾರು ಚಾಲಕ ನಿದ್ರೆಗೆ ಜಾರಿದ್ದರಿಂದ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಕಾರಿನ ಮುಂಭಾಗಕ್ಕೆ ಬಹಳ ಹಾನಿಯಾಗಿದೆ. ಅಪಘಾತ ಸಂಭವಿಸಿದ ಕೂಡಲೇ ನoದಿತಾ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಬರುತ್ತಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply