‘ಲೋಕಪ್ರಿಯ’ ನಾಗನ ಆರಾಧನಾ ಪರ್ವ ~’ನಾಗರ ಪಂಚಮಿ’~  ಕೆ.ಎಲ್.ಕುಂಡಂತಾಯ

ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ.ಪ್ರಾಣಿ – ಮನುಷ್ಯ ಸಂಬಂಧವೂ ಪ್ರಾಚೀನವಾದುದು. ನಿಯಂತ್ರಣವನ್ನು ಮೀರಿ ತನಗೆ ಮಾರಕವಾಗಬಲ್ಲ ಶಕ್ತಿಯಾಗಿ ಸವಾಲೆಸೆಯಬಲ್ಲ ಪ್ರಾಣಿಗಳ ಕುರಿತಾಗಿ ಮನುಷ್ಯನಿಗಿದ್ದ ಭಯವು ಅಷ್ಟೇ ಪುರಾತನವಾದುದು, ಇಲ್ಲಿ ಅಡಗಿದೆ, ಭಯದಿಂದ ಭಕ್ತಿಯಾಗಿ ಆರಾಧನೆಯಾಗಿ ರೂಪಾಂತರಗೊಂಡ ಪ್ರಾಣಿಪೂಜೆಯ ಮೂಲ.

ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ. ನಿಸರ್ಗದ ರಮ್ಯಾದ್ಭುತ ,ಅಷ್ಟೇ ಭಯ ಆತಂಕಕಾರಿ ಪರಿತಾಪ ಮತ್ತು ಸುಪ್ರಸನ್ನ ಪರಿಣಾಮಗಳನ್ನು ಗಮನಿಸುತ್ತಾ ಬದುಕು ಕಟ್ಟಿದ ನಮ್ಮ ಪೂರ್ವಜರು‌ ಪ್ರಕೃತಿಯೊಂದಿಗೆ ಪ್ರಕೃತಿ ಜನ್ಯ ಪ್ರತ್ಯಕ್ಷ – ಪರೋಕ್ಷ ಚೈತನ್ಯಗಳನ್ನು ಭಯದಿಂದ ಒಪ್ಪಿದರು,
ಉಪಕೃತರಾಗಿ ಪ್ರೀತಿಯಿಂದ ಸ್ವೀಕರಿಸಿದರು .

ಇಲ್ಲಿ‌ ವಿನೀತಭಾವದೊಂದಿಗೆ ಶ್ರದ್ಧೆಯ ಒಪ್ಪಂದಗಳಿವೆ, ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳಿದ ಮನುಕುಲದ ಇತಿಹಾಸವಿದೆ.
ಜೀವನ ಪೂರ್ತಿ ಹಾಲುಕೊಡುವ ಭಾರತೀಯ ಸಂಸ್ಕೃತಿಯಯಲ್ಲಿ ಅತ್ಯುಚ್ಚವಾದ ದೈವೀ ಸಾನ್ನಿಧ್ಯವುಳ್ಳ ಹಾಗೂ ತಾಯಿ ಸಮಾನವಾದ ದನವೊಂದು ತೀರಿಕೊಂಡಾಗ ಅದಕ್ಕೆ ದಫನ ಮಾಡಿ ಕೊಡುತ್ತಿದ್ದ ಹಾಲಿನ ಪ್ರಮಾಣವನ್ನು ಹಾಗೂ‌ ದನದ ಗುಣ ವಿಶೇಷಗಳನ್ನು ಹೊಗಳುತ್ತಾ ಕೆಲವು ದಿನಗಳಲ್ಲಿ ಮರೆತು ಬಿಡುತ್ತೇವೆ.ಆದರೆ ನಾಗನ ಶವವೊಂದು ದಾರಿಯಲ್ಲಿ ಸಿಕ್ಕಿದರೂ ಎಂತಹ ಆತಂಕ,ಭಯ.ನಮ್ಮ ಹಿರಿಯರು ತೀರಿಕೊಂಡಾಗ ನೆರವೇರಿಸುವ ಅಂತ್ಯವಿಧಿ ನಿರ್ವಹಣೆ ಹಾಗೂ ಸೂತಕ ಆಚರಣೆ ,ಸಂಸ್ಕಾರಗಳನ್ನು ನಡೆಸುತ್ತೇವೆ.

ಹಾಗಾದರೆ ನಾಗ ಯಾರು ? ನಮಗೂ ನಾಗನಿಗೂ ಏನು ಸಂಬಂಧ ? ನಾಗ ನಮ್ಮ ಪೂರ್ವಸೂರಿ ಅಥವಾ ನಮ್ಮವ ಎಂಬ ಸ್ವೀಕಾರ ಯಾಕೆ ರೂಢಿಗೆ ಬಂತು ? ( ಈ ಶ್ರದ್ಧೆ ವೈದಿಕ ಚಿಂತನೆಯಾದರೂ ಆಲೋಚಿಸಲೇ ಬೇಕಾದ ಸಂಗತಿ. ಸಂಪ್ರದಾಯವಾಗಿ ಅಷ್ಟೇ ಶ್ರದ್ಧೆಯದ್ದಾಗಿ ರೂಢಿಯಲ್ಲಿರುವುದು ಅಷ್ಟೇ ಸತ್ಯ.). ನಾಗ – ಮನುಷ್ಯ ಭಾವನಾತ್ಮಕ ಸಂಬಂಧವು ,
ನಾಗ ನಮ್ಮವ ,ನಮಗಿಂತ ಮೊದಲು ಈ ಭೂಭಾಗದಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿದ್ದವನು ,ಅವನು ಬಿಟ್ಟು ಕೊಟ್ಟ ಭೂಪ್ರದೇಶ ಇದು. ಆದುದರಿಂದ ನಾಗನಿಗೆ ನಾವು ಸದಾ ಕೃತಜ್ಞರಾಗಿಯೇ ಇದ್ದೇವೆ ,ಇರಬೇಕು.

ತುಳುವರ ‘ಎಡ್ಡೆಂದಿನವು’_ ಉಳಿದಂತೆ ಉರಗ ಜಾತಿಯ ಸಹಸ್ರಾರು ಪ್ರಬೇಧಗಳಿವೆ.ಅವುಗಳೊಂದಿಗೆ ಯಾಕೆ ನಾಗನೊಂದಿಗೆ ಇರುವ ಭಾವನಾತ್ಮಕ ಸ್ವೀಕಾರ ಯಾಕಿಲ್ಲ ? ನಾಗ ನಮ್ಮವ ,ತುಳುವರು ಹೇಳುವಂತೆ “ಎಡ್ಡೆಂದಿನವು”. ನೆಲತವು,ಪರಪ್ಪುನವು ಮುಂತಾದ ಹೆಸರುಗಳಿಂದ ಒಪ್ಪಿತನಾದವ. ಜನಪದರಲ್ಲಿ ‘ನಾಗ’ ಅಥವಾ ‘ಸರ್ಪ’ ಎಂಬ ಸಂಬೋಧನೆಯೇ ಇಲ್ಲ.
ಇದು ಕರಾವಳಿಯ ತುಳುವರ ಶ್ರದ್ಧೆ.

ನಾಗ ಉಪಾಸನೆ ನಂಬಿಕೆ ,ಭಯದ ಮೂಲದಿಂದ ಹುಟ್ಟಿರಬಹುದಾದರೂ ನಾಗ – ಮಾನವ ಸಂಬಂಧ ಗಾಢವಾದುದು.ಇಲ್ಲಿ ‘ಮೂಲದ’ ಅನಾವರಣವಿದೆ.”ಮೂಲದ ನಾಗ” ಎಂಬ ಪ್ರಚಲಿತ ಮಾತಿದೆ.ಈ ಅವಲೋಕನ ಮಾನವ – ನಾಗ ಬಂಧುತ್ವವನ್ನು‌ ಗಟ್ಟಿಯಾಗಿಸುತ್ತದೆ.

ನಾಗ ಭೂಮಿ‌ಪುತ್ರನೆಂಬ ಒಡಂಬಡಿಕೆ ಇದೆ. ಹುತ್ತದಿಂದ ಮೇಲೆದ್ದು ಬರುವ ನಾಗ ಹಾಗೂ ಹೆಡೆಯರಳಿಸಿ ಬಾಲದಲ್ಲಿ ನಿಲ್ಲುವ ನಾಗನ ಕಣ್ಣ‌ನೋಟ ಹಾಗೂ ಹೆಡೆ ,ಶರೀರ ವಿನ್ಯಾಸ ಭಯವನ್ನು ,ಆತಂಕವನ್ನು ಸೃಷ್ಟಿಸುತ್ತದೆ.ಈ ನೋಟ ಕಾರಣವಾಗಿ ನಾಗ ಸಂಬಂಧವಾದ ಭಯ ಹಾಗೂ ರೋಚಕ ಕಥೆಗಳು ಹುಟ್ಟಿಕೊಂಡುವು.

ನಾಗ ಅಥವಾ ಸರ್ಪ ಸಂತತಿಯ ಜೀವನ ವಿಧಾನವನ್ನು ಗಮನಿಸಿದ ಮನುಷ್ಯ ನಾಗನ ವಾಸ ಹುತ್ತದ ಆಳದಲ್ಲಿ‌ ಎಂದು ತಿಳಿದುಕೊಂಡ.ಹುತ್ತದ ಆಳದಲ್ಲಿ ನೀರು ಇರುತ್ರದೆ ಎಂಬ ಸಾಮನ್ಯ ಜ್ಞಾನದಿಂದ ನಾಗ ತಂಪನ್ನು ಬಯಸುತ್ತದೆ,ತಂಪನ್ನು ಆಶ್ರಯಿಸುತ್ತದೆ ಎಂದು ಅರ್ಥೈಸಿಕೊಂಡ.ಹಾಗೆ ಆರಂಭವಾಗಿದ್ದಿರಬೇಕು ತನು ಎರೆಯುವ ಪದ್ಧತಿ.

ನಾಗ – ವೃಕ್ಷ ಅವಳಿ ಚೇತನಗಳು.ಮರದ ಬುಡದಲ್ಲಿ ತಂಪಿರುತ್ತದೆ.ಮರ ಗಿಡಗಳ ಸಮೂಹ ಮತ್ತಷ್ಟು ತಂಪಾದ ಬನವಾಗಿರುತ್ತದೆ.ಈ ಕಲ್ಪನೆಯ ಸಾಕಾರ ರೂಪವೇ ನಾಗಬನಗಳು.ನಾಗನ ವಾಸಸ್ಥಾನ ಎಂಬ ನಂಬಿಕೆ ಅಥವಾ ಪ್ರತ್ಯಕ್ಷ ಪ್ರಮಾಣವು ಕಾರಣ ಹಾಗೂ ನಾಗ ಸಂತತಿಯನ್ನು ಹಾಗೂ ಮರಿ ಮೊಟ್ಟೆಗಳಿರುವ ತಾಣ ಎಂಬ ಶ್ರದ್ದೆ ಕಾರಣವಾಗಿ ನಾಗ ಬನವನ್ನು ರಕ್ಷಿಸಲಾಯಿತು.

ಮಾನವ ಅಭಿಯೋಗವಾಗದ ಒಂದು ನಾಗಬನದಲ್ಲಿ 50 – 60 ಕ್ಕೂಹೆಚ್ಚು ಮರ ಗಿಡ ಬಳ್ಳಿಗಳ ಪ್ರಬೇಧಗಳಿವೆ.ಕನಿಷ್ಠ 15 – 20 ಔಷಧೀಯ ಸಸ್ಯಗಳು,ಬಳ್ಳಿಗಳು,ಮರಗಳನ್ನು ಗುರುತಿಸಲಾಗಿದೆ. ಈ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಇರಬಹುದು( ಪ್ರಾದೇಶಿಕವಾಗಿ).ಒಂದಷ್ಟು ಹುಳು,ಹುಪ್ಪಟಿಗಳು ,ಪಕ್ಷಿಸಂಕುಲಗಳಿಗೆ ಬನ ವಾಸಸ್ಥಾನ.

ನಾಗ ನಂಬಿಕೆ – ಆರಾಧನೆಗಳು ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿರುವುದನ್ನು ಕಾಣಬಹುದು. ವೈದಿಕವು ಕರೆನಾಡಿಗೆ ಬಂದ ಮೇಲೆ ಬಹಳಷ್ಟು ಬದಲಾವಣೆಗಳನ್ನು ನಾಗ ಶ್ರದ್ಧೆ – ಉಪಾಸನಾ ಕ್ರಮಗಳಲ್ಲಿ ಕಾಣಬಹುದಾಗಿದೆ.ಇದನ್ನು ವೈದಿಕದ ಪ್ರಭಾವ ಎನ್ನಬಹುದೇ ಹೊರತು ಅಭಿಯೋಗವಲ್ಲ. ಇದು ಎರಡು ಭಿನ್ನ ಆಲೋಚನೆಗಳ ಸುಗಮ‌ ಸಮಾಗಮವೇ ಆಗಿದೆ.

ಆದರೆ ಪ್ರಾಚೀನ ವಿಧಿಗಳು ನೆರವೇರುವ ನಾಗ ಬನಗಳನ್ನು ಗುರುತಿಸಲಾಗಿದೆ.ರೋಚಕ ವಿಧಿಗಳ ವಿಲಕ್ಷಣ ಆರಾಧನೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೂಲದ ನಾಗನಿಗೆ ಮೂಲಿಗರಿಂದ ನಡೆಯುವ ಪೂಜಾ ಕ್ರಮಗಳ ಕುರಿತು ವರದಿ ಮಾಡಿಯಾಗಿದೆ.
ಕರ್ನಾಟಕ ಕರಾವಳಿಯಲ್ಲಿ‌ ನಾಗಾರಾಧನೆಯ ಮೂಲದ ಸ್ವರೂಪವನ್ನು ಅಂದಾಜಿಸಲಾಗಿದೆ. ಆದಿಮ ನಾಗಪೂಜಾ ವಿಧಾನಕ್ಕೆ ವೈದಿಕದ ಪ್ರತಿಷ್ಠಾ ವಿಧಿ ನೆರವೇರಿರುವುದರ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾಗಿವೆ.

ಅಪೂರ್ವ,ಅರ್ಥಪೂರ್ಣ ನಾಗಾರಾಧನೆಯಾಗಿ ಬೇಸಗೆಯ ತನು ಸೇವೆಗಳು ನೆರವೇರುತ್ತವೆ. ವರ್ಷಕ್ಕೆ ಒಂದು ದಿನ ಮಾತ್ರ ಈ ಬನಗಳಲ್ಲಿ ಪೂಜೆ ನೆರವೇರುತ್ತದೆ.ಕುಟುಂಬ ಸೇರಿ ಮೂಲದ ನಾಗನಿಗೆ ತಂಪೆರೆದು ತಂಬಿಲ ಕಟ್ಟಿ ವಿವಿಧ ಕಟ್ಟುಕಟ್ಟಳೆಗಳನ್ನು ನಡೆಸುತ್ತಾರೆ. ಕೆಲವೆಡೆ ನಾಗ ದರ್ಶನವೂ ಇರುತ್ತದೆ.ಹರಕೆ ಸಂದಾಯ ಹಾಗೂ ವಿಶಿಷ್ಟ ತಾಂತ್ರಿಕ ವಿಧಿಗಳನ್ನು ನಿರ್ವಹಿಸಿ ಕೇಳಿಕೆಗಳನ್ನು‌ ಈಡೇರಿಸುವ ಪದ್ಧತಿಗಳು ನಡೆಯುತ್ತವೆ.

ನಾಗಬನ – ಮರದ ಬುಡದಲ್ಲಿ ನಾಗನೆಂದು ನಂಬಿದ ಕೆಂಪು ಕಲ್ಲು ಅಥವಾ ಶಿಲೆ ಅಥವಾ ನಾಗ ಶಿಲಾಪ್ರತೀಕಗಳನ್ನು ಇರಿಸಿ ಅಥವಾ “ನಾಗನಿಗೆ ಕಲ್ಲು ಹಾಕಿ” ನಂಬುವ ನಾಗ ಬನವು ರೂಪಾಂತರಗೊಳ್ಳುವ ಸ್ವರೂಪವನ್ನೂ ಗಮನಿಸಲಾಗಿದೆ. ನಾಗಬನ – ನಾಗ ವೇದಿಕೆ – ನಾಗನಿಗೆ ಗುಡಿ – ನಾಗ ಮಂದಿರ – ನಾಗ ದೇವಸ್ಥಾನ ,ಅವು ಹೀಗಿವೆ.

ಪರಿಸರ ರಕ್ಷಿಸಲು ನಾಗಬನ ಉಳಿಸೋಣ.ಈ ಮಾತಿಗೆ ಕಾರಣ “ನಾಗಬನ – ನಾಗಾರಾಧನೆ ಆಶಯ ವಿರೂಪಗೊಳ್ಳುತ್ತಿವೆ”. ಯಾವ ನಂಬಿಕೆಯಲ್ಲಿ ನಾಗನ ಆರಾಧನೆಗಳು ನೆರವೇರುತ್ತವೆ.ಈ ನಂಬಿಕೆಯಲ್ಲಾದ ಬದಲಾವಣೆಗಳಲ್ಲಿ ಸ್ಪಷ್ಟತೆ ಇವೆ. ವಿವರಣೆಯೂ ಇವೆ.

ನಾಗರಪಂಚಮಿ: ನಾಗರ ಪಂಚಮಿಯನ್ನು ನಾವು ಸ್ವೀಕರಿಸಿದ ಕ್ರಮದಲ್ಲಿ ಜನಪದ – ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮ ವಾದಂತೆ ಕಾಣುತ್ತದೆಯೇ ಹೊರತು ವೈದಿಕದ ಅಭಿಯೋಗವಾದಂತೆ ಅನ್ನಿಸುವುದಿಲ್ಲ . ಆಟಿ – ಕರ್ಕಾಟಕ ಮಾಸದಲ್ಲಿ ಒದಗಿಬರುವ ಅಮಾವಾಸ್ಯೆಯಂದು ಬನಗಳಲ್ಲಿ‌ ಹೆಚ್ಚುವರಿ ಗೆಲ್ಲು , ಬೀಳಲು , ಅಪಾಯಕಾರಿ ಮರಗಳ ಗೆಲ್ಲುಗಳನ್ನು ಮಾತ್ರ ಕಡಿಯುವ ಸಂಪ್ರದಾಯ . ಮುಂದೆ ಐದನೇ ದಿನಕ್ಕೆ ಶ್ರಾವಣದ ಶುದ್ಧ ಪಂಚಮಿ ” ನಾಗರ ಪಂಚಮಿ” . ಈ ಆಚರಣೆಯಲ್ಲಿ ಸಂಸ್ಕೃತಿಗಳ ಸುಗಮ ಹಾಗೂ ಪರಸ್ಪರ ಒಪ್ಪಿತವಾದ ಹೊಕ್ಕುಬಳಕೆ ನಿಚ್ಚಳ.

ನಾಡಿಗೆ ದೊಡ್ಡ ಹಬ್ಬ , ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ . ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ .ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ , ಕೆಲವು ತಿರಸ್ಕರಿಸಲ್ಪಟ್ಟಿವೆ . ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು .ಏಕೆಂದರೆ ನಾಗ ಲೋಕಪ್ರಿಯ , ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ . ತನು – ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ . ನಾಗರಪಂಚಮಿಗೂ ನಮ್ಮ ಆರಾಧನೆ ತನು – ತಂಬಿಲವೇ . ಇಷ್ಟಕ್ಕೆ ನಮ್ಮ ಶ್ರದ್ಧೆ . ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ .
ನಾಗ ಸಂತಾನ , ಸಂಪತ್ತು , ಕೃಷಿಸಮೃದ್ಧಿ ಅನುಗ್ರಹಿಸುವ ದೇದರು . ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ .

ಬನ ಪುನಾರಚಿಸೋಣ: ‌‌ ನಾಗ ಬನಗಳು ನಾಶವಾಗುತ್ತಿವೆ . ಇದಕ್ಕೆ ಕಾರಣಗಳು ಹಲವು . ಆದರೆ ನಾಗಬನಗಳ ಪುನಾರಚನೆ ಈ ಕಾಲಘಟ್ಟದ ಅನಿವಾರ್ಯತೆ . ನಾಗನ ವಾಸಸ್ಥಾನವನ್ನು ಪುನಾರಚಿಸುವುದರಿಂದ ನಾಗ ಮಾತ್ರ ತೃಪ್ತಿಪಡುವುದಲ್ಲ . ಆ ಮೂಲಕ ಪರಿಸರ ನಾಶವಾಗದೆ ವೃದ್ಧಿಯಾಗುತ್ತದೆ . ಮನುಕುಲಕ್ಕೆ , ಪಕ್ಷಿ ಸಂಕುಲಕ್ಕೆ ಶ್ರೇಯಸ್ಸಾಗುತ್ತದೆ . ಸ್ವಚ್ಛಗಾಳಿ ಲಭಿಸುತ್ತದೆ , ಅಂತರ್ಜಲ ಹೆಚ್ಚುತ್ತದೆ .

ಅದಕ್ಕಾಗಿ ನಾಗರ ಪಂಚಮಿಯಂದು ಮೂಲದ ನಾಗನ ದರ್ಶನಕ್ಕೆ ಹಾಲು ,ಸೀಯಾಳ , ಹಣ್ಣುಕಾಯಿಗಳೊಂದಿಗೆ ಹೋಗುವಾಗ ಒಂದು ಗಿಡ ಕೊಂಡೊಯ್ಯುವ , ಆ ಮೂಲಕ ನಾಶವಾಗದಿದ್ದರೆ ಬನ ವೃದ್ಧಿಯಾಗಲಿ , ನಾಶಗೊಂಡು ನಾಗವೇದಿಕೆ , ನಾಗಗುಡಿ , ನಾಗಮಂದಿರವಾಗಿದ್ದರೆ ಅದರ ಸುತ್ತಲೂ ಗಿಡ ನೆಡುವ ಕಾರ್ಯ ಮಾಡೋಣ ಬನದ ( ವನ) ಪುನಾರಚನೆಗೆ ಗಿಡ ನೆಡುವ .ಇದು ಖಂಡಿತ ನಾಗ ಪ್ರೀತ್ಯರ್ಥವಾಗಿಯೇ ಆಗಿರುತ್ತದೆ . ಇದಕ್ಕೆ ಜ್ಯೋತಿಷ್ಯದ ನಿರ್ದೇಶನ ಬೇಕಾ ಇದು ಪ್ರತ್ಯಕ್ಷ ಸತ್ಯತಾನೆ .

 
 
 
 
 
 
 
 
 
 
 

Leave a Reply