ನಾದೈಕ್ಯರಾದ ವಿದುಷಿ ಶ್ರೀಮತಿ ವಸಂತಲಕ್ಷ್ಮಿ ಅರವಿಂದ ಹೆಬ್ಬಾರ್

ಉಡುಪಿ: ಕರ್ನಾಟಕ ಸಂಗೀತ ವಿದುಷಿ, ಚಿತ್ರಕಲಾವಿದೆ ವಸಂತ ಲಕ್ಷ್ಮೀ ಹೆಬ್ಬಾರ್ (63) ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಅವರು ಪತಿ, ನಿವೃತ್ತ ಪ್ರಾಧ್ಯಾಪಕ, ಸಸ್ಯಶಾಸ್ತ್ರಜ್ಞ ಹಾಗೂ ಸಂಗೀತ ಕಲಾವಿದ ಪ್ರೊ. ವಿ. ಅರವಿಂದ ಹೆಬ್ಬಾರ್ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಸಂಗೀತ ಮತ್ತು ಸಂಸ್ಕೃತದಲ್ಲಿ ಎಂ.ಎ. ಪದವೀಧರರಾದ ಇವರು ಕರ್ನಾಟಕ ಸಂಗೀತ ಹಾಗೂ ವರ್ಣಚಿತ್ರ ಕಲೆಯಲ್ಲಿ ನಿಷ್ಣಾತರಾಗಿದ್ದರು. ಸಂಗೀತಗಾರರಾದ ಶ್ರೀನಾಥ ಮರಾಠೆ ಹಾಗೂ ಉಡುಪಿಯ ಮಧೂರು ಪಿ.ಬಾಲಸುಬ್ರಹ್ಮಣ್ಯ ಇವರ ಶಿಷ್ಯರಾದ ವಸಂತಲಕ್ಷ್ಮೀ 1996ರಿಂದ ಪತಿ ವಿ.ಅರವಿಂದ ಹೆಬ್ಬಾರರೊಂದಿಗೆ ‘ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್’ನ್ನು ನಡೆಸುತ್ತಿದ್ದು ಹಲವು ಉದಯೋನ್ಮುಖ ಕಲಾವಿದರನ್ನು ಬೆಳಕಿಗೆ ತಂದಿದ್ದರು. ಸದ್ಯದ ಪ್ರತಿಭಾನ್ವಿತ ಗಾಯಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಗಾರ್ಗಿ ಎನ್. ಶಬರಾಯ ಹಾಗೂ ಸಮನ್ವಿ ಇವರ ಬಳಿಯೇ ಸಂಗೀತ ಅಭ್ಯಾಸ ನಡೆಸಿದ್ದರು.

ಚಿತ್ರಕಲೆಯಲ್ಲಿ ಕಲಾವಿದ ರಮೇಶ್ ರಾವ್ ಅವರ ಶಿಷ್ಯರಾದ ವಸಂತಲಕ್ಷ್ಮೀ ರಚಿಸಿದ ನರೇಂದ್ರ ಮೋದಿ ಅವರ ತೈಲವರ್ಣ ಚಿತ್ರವನ್ನು ಪೇಜಾವರಶ್ರೀಗಳು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿದ್ದರು. ವಸಂತಲಕ್ಷ್ಮೀ ಅವರು ಮೂರು ಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದು ಜನಮೆಚ್ಚುಗೆ ಪಡೆದಿದ್ದರು. ಅಲ್ಲದೇ ಖ್ಯಾತನಾಮ ಸಂಗೀತಗಾರರ ಪೈಂಟಿಂಗ್‌ಗಳ ಪ್ರದರ್ಶನವನ್ನು 2018ರಲ್ಲಿ ಏರ್ಪಡಿಸಿದ್ದರು.

ವಸಂತಲಕ್ಷ್ಮೀ ಹೆಬ್ಬಾರ್ ಅವರು 2007ರಲ್ಲಿ ಗಂಗೂಬಾಯಿ ಹಾನಗಲ್ ಇವರಿಂದ ಹುಬ್ಬಳ್ಳಿಯಲ್ಲಿ ಸುವರ್ಣ ಕಲಾ ಗುರು ಪ್ರಶಸ್ತಿ ಹಾಗೂ ಗದಗದ ಕಲಾ ವಿಕಾಸ್ ಪರಿಷತ್ ಪ್ರಶಸ್ತಿಗಳನ್ನು ಜಯಿಸಿದ್ದರು. ಇವರ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply