ಆಕಾಶದಲ್ಲಿ ಗೋಚರಿಸುವ ತ್ರಿಕೋನಗಳು~ ವೇದಶ್ರೀ ಉಪಾಧ್ಯ

ಸಂಜೆಯಾಗುತ್ತಿದ್ದಂತೆ, ಶುಭ್ರ ಆಕಾಶದಲ್ಲಿ ಗೋಚರಿಸುವ ಗ್ರಹ -ತಾರೆಗಳಿಗೆ ಬೆರಗಾಗದೇ ಇರುವವರೇ ಇಲ್ಲ. ಮಕ್ಕಳು ಆ ಸೌಂದರ್ಯವನ್ನು ನೋಡುತ್ತಾ, ಕೇಳುವ ಹಲವಾರು ಪ್ರಶ್ನೆಗಳಿಗೆ, ಹಿರಿಯರು, ತಮ್ಮ ಅನುಭವವನ್ನು ಹಂಚಿ ಕೊಳ್ಳುತ್ತಾ, ಖುಷಿ ಪಡುವ ಪರಿಯೇ ಬೇರೆ. ಆಕಾಶದಲ್ಲಿ ಚುಕ್ಕಿಗಳಂತೆ ಕಾಣುವ, ತಾರೆಗಳನ್ನು ಸರಿಯಾಗಿ ಗಮನಿಸಿದರೆ, ಅಲ್ಲಲ್ಲಿ ಕೆಲವು ಆಕಾರಗಳನ್ನು ಕಾಣಬಹುದು. ಹೀಗೆ ನಕ್ಷತ್ರ ಪುಂಜಗಳು ಕಾಣುವ ಆಕಾರದ ಮೇಲೆ, ನಮ್ಮ ಹಿರಿಯರು ಅವುಗಳಿಗೆ ಒಂದೊಂದು ಹೆಸರು ನೀಡಿದ್ದಾರೆ.
ಬೇಟೆಗಾರನಂತೆ ಕಾಣುವ ' ಮಹಾವ್ಯಾಧ ' , ಗಾಳಿಪಟದಂತೆ  ' ಸಪ್ತರ್ಷಿ ಮಂಡಲ' ,ಹೀಗೆ ಹಲವಾರು ನಕ್ಷತ್ರ ಪುಂಜಗಳನ್ನು ವಿವಿಧ ಆಕಾರಗಳಲ್ಲಿ ಗುರುತಿಸಬಹುದು. ವಿಶೇಷವೆಂದರೆ, ತಮ್ಮದೇ ಆದ ಆಕಾರಗಳಲ್ಲಿ ಕಾಣುವ ಬೇರೆ ಬೇರೆ ನಕ್ಷತ್ರ ಪುಂಜಗಳ, ಕೆಲವು ತಾರೆಗಳಿಂದಲೂ ಕೂಡ ವಿಭಿನ್ನ ಆಕಾರಗಳನ್ನು ಗಮನಿಸ ಬಹುದು. ವೀಣಾ ನಕ್ಷತ್ರ ಪುಂಜದ ಅಭಿಜಿತ್ (ವೇಗಾ), ರಾಜಹಂಸದ ಹಂಸಾಕ್ಷಿ (ಡೇನೆಬ್) ಮತ್ತು ಗರುಡ ನಕ್ಷತ್ರ ಪುಂಜದ ಶ್ರವಣ (ಆಲ್ಟೇರ್) ನಕ್ಷತ್ರಗಳಿಂದ ಆಕಾಶದಲ್ಲಿ ತ್ರಿಕೋನಾಕಾರವನ್ನು ಕಾಣಬಹುದು. ಬೇರೆ ಬೇರೆ ನಕ್ಷತ್ರ ಪುಂಜಗಳ, ಅತೀ ಪ್ರಕಾಶಮಾನವಾದ ಈ ನಕ್ಷತ್ರಗಳ ಗುಂಪನ್ನು "ಬೇಸಿಗೆ ತ್ರಿಕೋನ " ಎಂದು ಗುರುತಿಸುತ್ತಾರೆ. ಈ ಆಕಾರವು, ಜನವರಿ ತಿಂಗಳಲ್ಲಿ ಸೂರ್ಯೋದಯದ ಮುನ್ನ ಪೂರ್ವ ದಿಕ್ಕಿನಲ್ಲಿದ್ದು,ಪ್ರತಿ ದಿನ ಪಶ್ಚಿಮದ ಕಡೆ ಹಾದು ಹೋಗುವುದು. ಜುಲೈ ತಿಂಗಳ ಮೊದಲ ಕೆಲವು ದಿನಗಳ ವರೆಗೆ ಮುಂಜಾನೆಯ ಸಮಯ ನೋಡಬಹುದು. ಆಗಸ್ಟ್ ತಿಂಗಳ ಕಡೆಯ ಕೆಲವು ದಿನಗಳಲ್ಲಿ ಸೂರ್ಯಾಸ್ತದ ನಂತರ ಪೂರ್ವ ಆಕಾಶದಲ್ಲಿ ಕಾಣುವ ಈ ತ್ರಿಕೋನವು, ಡಿಸೆಂಬರ್ ವೇಳೆಗೆ ಪಶ್ಚಿಮ ಆಕಾಶದಲ್ಲಿ ಕಾಣುತ್ತದೆ. ಪ್ರಸ್ತುತ(ಸಪ್ಟೆಂಬರ್ ತಿಂಗಳಿನಲ್ಲಿ), ಸಂಜೆಯ ಹೊತ್ತಿಗೆ ಕಾಣುವ, ಈ ಆಕಾರಕ್ಕೆ "ಬೇಸಿಗೆ ತ್ರಿಕೋನ" ಎನ್ನುವ ಹೆಸರು ಯಾಕೆ ? ಎನ್ನುವ ಪ್ರಶ್ನೆ ಬರುವುದು ಸಹಜ. ಭೂಮಧ್ಯ ರೇಖೆಯ ಮೇಲ್ಭಾಗದವರಿಗೆ ಬೇಸಿಗೆ ಕಾಲದ, ಮಧ್ಯ ರಾತ್ರಿಯಲ್ಲಿ ಈ ತ್ರಿಕೋನಾಕಾರವು ನೆತ್ತಿಯ ಮೇಲೆ ಕಾಣುವುದರಿಂದ & quot ; ಬೇಸಿಗೆ ತ್ರಿಕೋನ " ವೆಂಬ ಹೆಸರು ಬಂತು.
ತಾರೆಗಳ ಗುಂಪಿನಲ್ಲಿ, ಈ ತ್ರಿಕೋನವನ್ನು ಗುರುತಿಸುವುದು ಹೇಗೆ?
ಸೂರ್ಯಾಸ್ತದ ನಂತರ, ಪೂರ್ವ ಆಕಾಶದಿಂದ ಪಶ್ಚಿಮದ ಕಡೆ ನೋಡುವಾಗ, ಸಿಗುವ ಪ್ರಕಾಶಮಾನವಾದ ನಕ್ಷತ್ರ ಶ್ರವಣ. ಈ ನಕ್ಷತ್ರದ ಉತ್ತರಕ್ಕೆ ಸಿಗುವುದು, ಅತೀ ಪ್ರಕಾಶಮಾನವಾದ ಅಭಿಜಿತ್ ನಕ್ಷತ್ರ. ಇದರ ಈಶಾನ್ಯಕ್ಕೆ ಹಂಸಾಕ್ಷಿಯನ್ನು ಕಾಣಬಹುದು. ಆಗಸ್ಟ್ ನಿಂದ ಡಿಸೆಂಬರ್ ತಿಂಗಳವರೆಗೆ ಸಂಜೆ ಆಕಾಶದ ಸೌಂದರ್ಯವನ್ನು ಹೆಚ್ಚಿಸುವ ಈ ಬೇಸಿಗೆ ತ್ರಿಕೋನವನ್ನು ನೋಡಲು, ಸಪ್ಟೆಂಬರ್ 25ರಂದು, ಸಂಜೆ ಆಕಾಶದತ್ತ ಕಣ್ಣು ಹಾಯಿಸಿದರೆ, ಇನ್ನೊಂದು ಅಚ್ಚರಿ ಕಾದಿರುತ್ತದೆ. ಈ ದಿನ ಗುರು ಮತ್ತು ಶನಿ ಗ್ರಹಗಳ ಸಮೀಪದಲ್ಲಿ ಚಂದ್ರನನ್ನು ನೋಡಬಹುದು. 
ಅದರಲ್ಲೇನು ವಿಶೇಷ ಅಂದುಕೊಳ್ಳು ತ್ತೀರ?
ಚಂದ್ರ ಮತ್ತು ಗ್ರಹಗಳ ಚಲನೆಯಿಂದ, ಕೆಲವೊಮ್ಮೆ ಅವುಗಳ ನಡುವೆ ಕನಿಷ್ಠ ಕೋನಾಂತರವಿದ್ದು, ಅತೀ ಸಮೀಪ ದಲ್ಲಿ ಕಾಣುತ್ತಾರೆ. ಸಪ್ಟೆಂಬರ್ ೩೫ ರಂದು, ಗುರು ಮತ್ತು ಶನಿ ಗ್ರಹಗಳ ನಡುವೆ ಕಡಿಮೆ ಅಂತರದಲ್ಲಿ ಹಾದು ಹೋಗುವ ಚಂದ್ರನು, ಎರಡು ಗ್ರಹಗಳ ಮಧ್ಯದಲ್ಲಿ, ಸ್ವಲ್ಪ ಕೆಳಗಡೆ ಕಾಣುತ್ತಾನೆ. ಇದರಿಂದ, ಬೇಸಿಗೆ ತ್ರಿಕೋನಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಇನ್ನೊಂದು ತ್ರಿಕೋನಾಕಾರವನ್ನು ಕಾಣಬಹುದು. 
ಇದೇ ಸಪ್ಟೆಂಬರ್ 25ರ ಸಂಜೆ ಆಕಾಶದ ವಿಶೇಷ.  ಒಂದು ಸೆಕೆಂಡಿಗೆ ಸುಮಾರು 2.99ಲಕ್ಷ ಕಿ. ಮೀ.ದೂರ ಚಲಿಸುವ ಬೆಳಕಿಗೆ, ಗುರು ಗ್ರಹದಿಂದ ಭೂಮಿಯನ್ನು ತಲುಪಲು, ಸಾಮಾನ್ಯ 39ನಿಮಿಷಗಳು ಬೇಕು. ಶನಿ ಗ್ರಹದಿಂದ ಹೊರಟ ಬೆಳಕು ನಮ್ಮನ್ನು ತಲುಪಲು ಸುಮಾರು 78 ನಿಮಿಷಗಳು ಬೇಕು. ಹೀಗೆ ಭೂಮಿಯಿಂದ ಅವರ ದೂರ ಬೇರೆ ಬೇರೆ ಯಾಗಿದ್ದರೂ ಕೂಡ, ಈ ದಿನ ಇವರ ಜೋಡಿಯು ಪುಟ್ಟ ತ್ರಿಕೋನದಂತೆ ಕಾಣುವುದೇ ನೋಡುಗರಿಗೆ ಸಂಭ್ರಮ.
ಸಪ್ಟೆಂಬರ್ ನಲ್ಲಿ ಈ ಒಂದು ದಿನ, ಕಾಣುವ ಈ ಜೋಡಿಯ ಸೌಂದರ್ಯವನ್ನು ಪುನಃ ನೋಡಲು, ನವೆಂಬರ್ ತನಕ ಕಾಯಬೇಕು. ಹೀಗೆ ಸಪ್ಟೆಂಬರ್ 25ರಂದು, ಆಕಾಶದಲ್ಲಿ ಎರಡು ತ್ರಿಕೊನಗಳನ್ನು ಕಾಣಬಹುದು. ಗುರು – ಚಂದ್ರ – ಶನಿ ಗ್ರಹಗಳ ತ್ರಿಕೋನಾಕಾರವು, ತಾರೆಗಳಿಗಿಂತ ತಾನೇನು ಕಮ್ಮಿ ಎನ್ನುವಂತೆ ವೀಕ್ಷಕರ ಮನ ಸೆಳೆಯುತ್ತದೆ.

ವೇದಶ್ರೀ ಉಪಾಧ್ಯ
ಉಪನ್ಯಾಸಕಿ, ಭೌತ್ರಶಾಸ್ತ್ರ ವಿಭಾಗ, ಪೂರ್ಣಪ್ರಜ್ಞ ಕಾಲೇಜು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply