ಉಡುಪಿ: ಶ್ರೀಕೃಷ್ಣನ ನಾಡಿನಲ್ಲಿ ಕುರುಕ್ಷೇತ್ರ ಜಯಭೇರಿ

ಉಡುಪಿ: ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯ ಅಖಿಲ ಭಾರತ ಅಂತರ್ ವಿವಿ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ನೂತನ ರಾಷ್ಟ್ರೀಯ ಚಾಂಪಿಯನ್ ತಂಡವಾಗಿ ಮೂಡಿಬಂದಿದೆ. 

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ವಾಲಿ ಬಾಲ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಇಂದು  ಕುರುಕ್ಷೇತ್ರ ವಿವಿ ತಂಡ, ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ ತಂಡವನ್ನು 25-20, 25-17, 25-18ರ ಅಂತರದಿಂದ ಸುಲಭವಾಗಿ ಹಿಮ್ಮೆಟ್ಟಿಸಿ ಕಳೆದ ಬಾರಿ ಕೈತಪ್ಪಿದ ಚಾಂಪಿಯನ್ ಕಿರೀಟವನ್ನು ಈ ಬಾರಿ ಗೆದ್ದುಕೊಂಡಿತು.

ಮಂಗಳೂರಿಗೆ ನಾಲ್ಕನೇ ಸ್ಥಾನ: ಅಪರಾಹ್ನ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡವಾದ ಕೇರಳದ ಕಲ್ಲಿಕೋಟೆ ವಿವಿ,  ಆತಿಥೇಯ ಮಂಗಳೂರು ವಿವಿಯನ್ನು 3-1ರ ಅಂತರದಿಂದ 25-27, 25-21, 25-16, 25-22ರಿಂದ  ಸೋಲಿಸಿ ಮೂರನೇ ಸ್ಥಾನಿಯಾಯಿತು. 

ನಿನ್ನೆ ರಾತ್ರಿ ಮದ್ರಾಸ್ ವಿವಿಯನ್ನು ಐದು ಸೆಟ್‌ಗಳ ಹೋರಾಟದಲ್ಲಿ ಮಣಿಸಿದ್ದ ಮಂಗಳೂರು ವಿವಿ ಇಂದು ಅದೇ ಮಟ್ಟದ ಕೆಚ್ಚೆದೆಯ ಹೋರಾಟ ನೀಡುವಲ್ಲಿ ವಿಫಲವಾಯಿತು. ಮೊದಲ ಸೆಟ್‌ನ್ನು 27-25ರ ಅಂತರದಿಂದ ಗೆದ್ದ ಬಳಿಕ ಮಂಗಳೂರು ವಿವಿಯ ಆಟ ಅದೇ ಟೆಂಪೋ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಎರಡನೇ ಸೆಟ್‌ನ್ನು ಗೆದ್ದು ಸಮಬಲ ಸ್ಥಾಪಿಸಿದ ಬಳಿಕ ಕಲ್ಲಿಕೋಟೆ ವಿವಿ ಮತ್ತೆ ಪಂದ್ಯದ ಮೇಲಿನ ತನ್ನ ಹಿಡಿತವನ್ನು ಬಿಟ್ಟುಕೊಡಲಿಲ್ಲ. ಎರಡು ಸೆಟ್‌ಗಳನ್ನು ಸತತವಾಗಿ ಗೆದ್ದು ಅದು ಮೂರನೇ ಸ್ಥಾನಿಯಾದರೆ, ಆತಿಥೇಯ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಇಂದು ಬೆಳಗ್ಗೆ ನಡೆದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಹಾಲಿ ರಾಷ್ಟ್ರೀಯ ವಿವಿ ಚಾಂಪಿಯನ್ ಕೇರಳದ ಕಲ್ಲಿಕೋಟೆ ವಿವಿ ಹಾಗೂ ಆತಿಥೇಯ ಮಂಗಳೂರು ವಿವಿ ತಂಡಗಳು ಪರಾಭವಗೊಂಡವು. ಕಲ್ಲಿಕೋಟೆ ವಿವಿ ಕಳೆದ ವರ್ಷ ಫೈನಲ್‌ನಲ್ಲಿ ತಾನೇ ಸೋಲಿಸಿದ್ದ  ಕುರುಕ್ಷೇತ್ರ ವಿವಿ ಕೈಯಲ್ಲಿ 3-2 ಅಂತರದಿಂದ ಸೋಲು ಅನುಭವಿಸಿತು. ರೋಮಾಂಚಕಾರಿಯಾಗಿ ಸಾಗಿದ ಪಂದ್ಯವನ್ನು  ಕುರುಕ್ಷೇತ್ರ ವಿವಿ 25-22, 25-27 25-15, 18-24,  15-7ರ ಅಂತರದಿಂದ ಗೆದ್ದುಕೊಂಡಿತು. 

ಎರಡನೇ ಸೆಮಿಫೈನಲ್‌ನಲ್ಲಿ ಆತಿಥೇಯ ಮಂಗಳೂರು ವಿವಿ, ಚೆನ್ನೈನ ಬಲಿಷ್ಠ ಎಸ್‌ಆರ್‌ಎಂ ವಿವಿಯಿಂದ 3-0 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಂಡಿತು. ಎಸ್‌ಆರ್‌ಎಂ ವಿವಿ ಪಂದ್ಯವನ್ನು 25-22, 25-22, 25-20ರ ಅಂತರದಿಂದ ಜಯಿಸಿತು.

ಸಮಾರೋಪ: ಕರ್ನಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಓ. ಶ್ರೀ ಮಹಾಬಲೇಶ್ವರ ಭಟ್, ಉಡುಪಿಯ ಶಾಸಕರಾದ ಶ್ರೀ ಕೆ ರಘುಪತಿ ಭಟ್, ಕರ್ನಾಟಕ ಬ್ಯಾಂಕಿನ ಎ.ಜಿ.ಎಂ. ಆಗಿರುವ ಶ್ರೀ ರಾಜ ಗೋಪಾಲ್, ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಯಾದ ಡಾ. ಜಿ.ಎಸ್. ಚಂದ್ರಶೇಖರ್, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಶ್ರೀ ಸಿ.ಎ. ಪ್ರಶಾಂತ್ ಹೊಳ್ಳ, ಅದಮಾರಿನ ಪೂರ್ಣಪ್ರಜ್ಞ ಸಂಸ್ಥೆಗಳ ಗೌರವ ಕೋಶಾಧಿಕಾರಿ ಶ್ರೀ ಸಿ.ಎ. ಗಣೇಶ್ ಹೆಬ್ಬಾರ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶ್ರೀ ಜೆರಾಲ್ಡ್ ಸಂತೋಷ್ ಡಿಸೋಜ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶು ಪಾಲರಾದ ಶ್ರೀಮತಿ ಸುಕನ್ಯಾ ಮೇರಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಕ್ರೀಡಾಕೂಟದ ಸಂಯೋಜಕರಾದ ಶ್ರೀ ಸುಕುಮಾರ್ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶು ಪಾಲರಾದ ಡಾ. ರಾಘವೇಂದ್ರ ಎ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಅತ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಿಲಾಗುವುದು ಎಂದರು.

ಸೂರ್ಯಾಂಶ್ ಬೆಸ್ಟ್ ಪ್ಲೆಯರ್: ಟೂರ್ನಿಯ ವೈಯಕ್ತಿಕ ಪ್ರಶಸ್ತಿಗಳಲ್ಲಿ ಚಾಂಪಿಯನ್ ಕುರುಕ್ಷೇತ್ರ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕುರುಕ್ಷೇತ್ರದ ಸೂರ್ಯಾಂಶ್ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಬಾಜನರಾದರು. ಕುರುಕ್ಷೇತ್ರ ವಿವಿ ತಂಡದ ಸವಾನ್ ಅತ್ಯುತ್ತಮ ಆಕ್ರಮಣಕಾರಿ ಆಟಗಾರ, ಅದೇ ತಂಡದ ಸಮೀರ್ ಬೆಸ್ಟ್ ಸೆಟ್ಟರ್, ಕಲ್ಲಿಕೋಟೆ ವಿವಿಯ ಅರುಣ್ ಬೆಸ್ಟ್ ಯೂನಿವರ್ಸಲ್ ಪ್ಲೇಯರ್, ರನ್ನರ್‌ಅಪ್ ಎಸ್‌ಆರ್‌ಎಂ ಚೆನ್ನೈನ ಶ್ರೀಕಾಂತ್ ಬೆಸ್ಟ್ ಲಿಬ್ರೊ ಹಾಗೂ ಅದೇ ತಂಡದ ಉಡುಪಿ ಮೂಲದ ಸೃಜನ್ ಶೆಟ್ಟಿ ಬೆಸ್ಟ್ ಬ್ಲಾಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply