ಮನೆಯಲ್ಲಿ ನಡೆದಾಡುವ ಭಾಗ್ಯಲಕ್ಷ್ಮಿಯರು(ಹ್ಯಾಪೀ ಡಾಟರ್ಸ್ ಡೇ)~ಪೂರ್ಣಿಮಾ ಜನಾರ್ದನ್

ಇಂದು ಪುತ್ರಿಯರ ದಿನವಂತೆ. ಈಗಿನ ತಲೆಮಾರಿನ ಅಪ್ಪ ಅಮ್ಮಂದಿರು ನಮಗೆ ಹೆಣ್ಣು ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ದಿನಗಳು ಈಗ‌. ಮೊದಲಿನಿಂದಲೂ ನಮ್ಮಭಾರತೀಯ ಸಂಸ್ಕ್ರತಿಯಲ್ಲಿ ಹೆಣ್ಣು ಅಂದರೆ ಆದರಣೀಯ, ಪೂಜ್ಯನೀಯ. ಆದರೆ ಮನೆಯಲ್ಲಿ ಹುಟ್ಟಿದ ಮಗು ಹೆಣ್ಣಾದಾಗ ಸಂಭ್ರಮದೊಂದಿಗೆ ಒಂದು ರೀತಿಯಲ್ಲಿ ಯೋಚನೆ‌.

ಅದನ್ನು ಬೆಳೆಸುವ ವಿಷಯ, ಸಮಾಜದಲ್ಲಿ ಆಕೆಯ ರಕ್ಷಣೆ, ವಿದ್ಯಾಭ್ಯಾಸ, ಉದ್ಯೋಗ, ಮದುವೆ ಹೀಗೆ ಜೀವನದ ಪ್ರತಿ ಹಂತದಲ್ಲೂ ಒಂದು ರೀತಿಯ ಆತಂಕ ಇದ್ದದ್ದೇ. ಆದರೆ ಈಗೀಗ ಅಕ್ಷರಸ್ಥರಾಗುತ್ತಿರುವ ತಙದೆ ತಾಯಿಗಳಿಗೆ ಮನೆಯ ಲ್ಲೊಂದು ಹೆಣ್ಣು ಮಗು ಬೇಕೆಂಬ ಉತ್ಕಟ ಆಸೆ. ಆ ಮಗುವನ್ನು ಅಕ್ಕರೆಯಿಂದ ಬೆಳೆಸಿ, ಒಳ್ಳೆಯ ವಿದ್ಯಾಭ್ಯಾಸ ನೀಡಿ, ಉತ್ತಮ ಉದ್ಯೋಗ ಗಳಿಸಿ, ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದ ಹೆಣ್ಣು ಮಗುವಿನ ತಂದೆ ಅನಿಸಿಕೊಳ್ಳುವ ಆತುರ.

ತಮ್ಮ ಜೀವನದುದ್ದಕ್ಕೂ ಪ್ರೀತಿ ಪ್ರೇಮ ಅಕ್ಕರೆ ವಾತ್ಸಲ್ಯ ಭರಿತ ಒಡನಾಡಿಯಾಗಲು ಹೆಣ್ಣು ಹುಟ್ಟದಿದ್ದರೂ ದತ್ತು ತೆಗೆದುಕೊಂಡಾದರೂ ಹೆಣ್ಣು ಮಗುವಿನ ತಾಯ್ತಂದೆ ಎಂದು ಅನಿಸಿಕೊಳ್ಳುವ ಹಂಬಲ. ನಮ್ಮಲ್ಲಿ ಹೆಣ್ಣು ಮಗಳು ಎಂದರೆ ದೇವರು ನೀಡಿದ ಉಡುಗೊರೆ ಎಂದೇ ಭಾವಿಸಿ ಇನ್ನಷ್ಟು ಮುಚ್ಚಟೆಯಿಂದ ಬೆಳೆಸುವ ಕನಸು.. ನಮ್ಮ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸಿ ಸಮಾಜದಲ್ಲಿ ಒಳ್ಳೆಯ ಹೆಸರು ತರುವ ಹೆಣ್ಣು ಮಕ್ಕಳೇ ನಮಗೆ ದೊಡ್ಡ ಆಸ್ತಿ.ಎಷ್ಟೆಂದರೂ ಸ್ವಭಾವತಃ ಗಂಡು ಮಕ್ಕಳಿಗಿಂತ ಅಂತಃ ಕರಣ ಸ್ವಲ್ಪ ಜಾಸ್ತಿ ಇರುವುದು, ತೋರ್ಪಡಿಸುವುದು ಸಹಜವಾಗಿ ಹೆಣ್ಣುಮಕ್ಕಳೇ ಅಲ್ವೇ. ಒಟ್ಟಾರೆಯಾಗಿ ಹೇಳುವುದಾದರೆ.  ನಮಗೆ ಅನಾರೋಗ್ಯ ಕಾಡಿದಾಗ, ರುಚಿ ರುಚಿಯಾದ ಊಟ ತಿನಿಸು ತಿನಬೇಕೆನಿಸಿದಾಗ, ಚೆಂದ ಚೆಂದದ ವಸ್ತ್ರ, ವಿಧ ವಿಧ ಆಭರಣ ತೊಡಿಸಿ ಕಣ್ಣಿಗೆ ತಂಪೆರೆಯಲು, ಯಾರಿಗೋ ಒಂದಷ್ಟು ಉಪಕಾರ ಮಾಡಿ ಅದರ ಬಗ್ಗೆ ಹೊಗಳಿಕೆ ಗಿಟ್ಟಿಸಲು.

ಆಗಾಗ ಸಿಲುಕುವ ಸೋಲಿಗೆ ಸ್ವಾಂತನದ ಮಾತು ಕೇಳಲು.. ಚೆಂದ ಚೆಂದ ಶರ್ಟ್ ಅಥವಾ ಸೀರೆ ಧರಿಸಿ ತಾನೇ ಹೀರೋ ಎಂದು ತೋರಿಸಿಕೊಳಲು.. ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಾಗ ತನ್ನ ಮಗಳು ಎಂದು ಗರ್ವದಿಂದ ಕರೆದುಕೊಂಡು ಸುತ್ತಾಡಲು.. ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಬಂಧು ಬಳಗದ ವಲಯದಲ್ಲಿ ಅವಳು ತನ್ನ ಮಗಳು ಎಂದು ಖುಷಿ ಪಡಲು..

ಬೆಳ್ಳಂಬೆಳಗ್ಗೆ ಎದ್ದು ಒಂದಷ್ಟು ಗೋಳು ಹೊಯ್ದುಕೊಳ್ಳಲು. ಆಗಾಗ್ಗೆ ಚಹಾ, ಕಾಫಿ, ನೀರು ಮಜ್ಜಿಗೆ ಮಾಡಿ ಕೊಡು ಎಂದು ಅಲವತ್ತುಕೊಳ್ಳಲು. ಗಡಿಬಿಡಿಯಲ್ಲಿದ್ದಾಗ ಮಗಳೇ ಸ್ವಲ್ಪ ಐರನ್ ಮಾಡಿ ಕೊಡು ಎಂದು ಪೂಸಿ ಹಾಕಲು. ಕೆಲಸಕ್ಕೆ ಹೊರಡುವಾಗ ಮೊಬೈಲ್, ಕೀ, ನೀರು ಬಾಟಲ್ ನೆನಪಿಸಲು, ಸರಿಯಾದ ಸಮಯಕ್ಕೆ ಎಲ್ಲವನ್ನೂ ರೆಡಿ ಮಾಡಿಟ್ಟು ಊಟ ಹಾಕಿ ಬನ್ನಿ ಬೇಗ ಆರೋಗುತ್ತೆ ಎಂದು ಒತ್ತಾಯಿಸಿಕೊಳ್ಳಲು…

ಯುಟ್ಯೂಬ್ ನೋಡಿ ಹೊಸ ಹೊಸ ತಿಂಡಿ‌ ಮಾಡಿ ತಿಂದ ಬಳಿಕವೂ ಅದರ ಬಗ್ಗೆ ಒಂದಷ್ಟು ಕಿಚಾಯಿಸಲು. ತಡ ರಾತ್ರಿ ಕಂಪ್ಯೂಟರ್ ರೂಮ್ ನಲ್ಲಿ ಕೆಲಸ ಸಾಗುತ್ತಿದ್ದಾಗ ಸಾಕು ನಿಮ್ಮ ನಾಟಕ, ಮಲಗಿ ಬೇಗ ಎಂದು ಗದರಲು. ತಡ ರಾತ್ರಿ ಮನೆಗೆ ಬಂದಾಗ, ಏನು ನಿಮಗೆ ಅರ್ಥ ಆಗೋದಿಲ್ಲವಾ, ಪ್ರಾಯ ಆಯ್ತು ಬೇಗ ವಿಶ್ರಾಂತಿ ತಗೊಳ್ಳಿ ಎಂದು ವಾಂಛೆ ತೋರಿಸಲು… ಅರೆ ಅರೆ‌ಪಟ್ಟಿ ದೊಡ್ಡದಿದೆ.

ಒಂದಷ್ಟು ಜಗಳ, ಮತ್ತೊಂದಿಷ್ಟು ಖುಷಿ ಮತ್ತಿನಷ್ಟು ಹುಸಿ‌ಕೋಪ, ನಸು ನಗು, ಆಪ್ಯಾಯತೆ, ಅಕ್ಕರೆ, ವಾತ್ಸಲ್ಯ, ಮಮತೆ ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪಾ.. ಅಮ್ಮಾ ಎಂದು ಬೊಗಸೆ ತುಂಬ ಪ್ರೀತಿ ತುಂಬಿ ಕರೆದು ಬದುಕಲ್ಲಿ ಸಾರ್ಥಕತೆ ತರುವ ಎಲ್ಲ ಪುತ್ರಿಯರಿಗೂ ವಿಶ್ವ ಪುತ್ರಿಯರ ದಿನದ ‌ ಶುಭಾಶಯಗಳು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply