Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಭೂಮಿ ಹುಣ್ಣಿಮೆ.. ಭೂಮಿ ತೂಕದ ಹೆಣ್ಣು.~ಮಲ್ಲಿಕಾ ಬಲ್ಲಾಳ್ 

ಹಚ್ಚ ಹಸುರಿನ ಪ್ರಕೃತಿಯ ಮಡಿಲಿನಲ್ಲಿ ಎರಡಂತಸ್ತಿನ ದೊಡ್ಡ ಚೌಕಿಮನೆಯ ಒಡತಿ ಹಾಗೂ ಸುತ್ತ ಹತ್ತೂರಿಗೆ ಹೆಸರುವಾಸಿಯಾದ ದೊಡ್ಡ ಜಮೀನ್ದಾರನ ಧರ್ಮಪತ್ನಿ ನನ್ನ ಅಮ್ಮಮ್ಮ. ದೊಡ್ಡ ಚೌಕಿಮನೆಯ ಒಡತಿ, ಜಮೀನ್ದಾರನ ಹೆಂಡತಿಯಾಗಿದ್ದರೂ ನನ್ನ ಅಮ್ಮಮ್ಮ ಮಾತ್ರ ಯಾವ ಆಡಂಬರವಿಲ್ಲದೇ ಅತೀ ಸರಳವಾಗಿ ಬದುಕಿ ಬಾಳಿದವರು. ತಾಳ್ಮೆ-ಸಹನೆಗೆ ಮತ್ತೊಂದು ಹೆಸರೇ ಅಮ್ಮಮ್ಮನೇನೋ ಎಂಬಂತೆ ಸಹನಾಮೂರ್ತಿಯಾಗಿದ್ದರು. ಗಂಡನ ದರ್ಪದ ನಡೆ- ಡಿಗಾಗಲೀ, ಅನ್ಯರ ಕುಹಕ ನುಡಿಗಾಗಲೀ ಯಾವುದಕ್ಕೂ ಕೋಪಿಸಿಕೊಂಡಿದ್ದು, ಅಸಮಧಾನಗೊಂಡಿದ್ದು ನಾನಂತೂ ಕಂಡಿಲ್ಲ.

ಅಮ್ಮಮ್ಮ ಮನಸ್ಸು ಮಾಡಿದ್ದರೆ ಪ್ರತಿದಿನ ಜರತಾರಿ ಸೀರೆ ಉಡಬಹುದಿತ್ತು. ಆದರೆ ಅಮ್ಮಮ್ಮ ಉಡುತಿದ್ದುದು ಯಾವಾಗಲೂ ಮಗ್ಗದ ಸೀರೆಗಳನ್ನು ಮಾತ್ರ. ಇನ್ನು ಸಮಾರಂಭಗಳಿಗೆ ಹೋಗುವಾಗ ಮಾತ್ರ ರೇಶಿಮೆ ಸೀರೆ ಉಡುತ್ತಿದ್ದರು. ಮನೆಮಂದಿಗೆಲ್ಲಾ ಎಷ್ಟೇ ಚಿನ್ನಾಭರಣ ಮಾಡಿಸಿದರೂ ಅಮ್ಮಮ್ಮ ಮಾತ್ರ ದಾರದಲ್ಲಿ ಸುರಿದ ಕರಿಮಣಿ ಸರವನ್ನೇ ಹಾಕುತ್ತಿದ್ದರು. ನಾನು ಕಂಡಂತೆ ಅಮ್ಮಮ್ಮ ಹಾಕುತ್ತಿದ್ದ ಚಿನ್ನದ ಒಡವೆ ಎಂದರೆ ಎರಡು ಎಳೆ ಅವಲಕ್ಕಿ ಸರ ಮತ್ತು ಕೈಗೆ ಎರಡು ಚಿನ್ನದ ಬಳೆ ಮಾತ್ರ.

ಸಾಮಾನ್ಯವಾಗಿ ಎಲ್ಲರೂ ಹಣೆಗೆ ಕುಂಕುಮವನ್ನಿಟ್ಟರೆ ಅಮ್ಮಮ್ಮ ಮಾತ್ರ ಕಾಫಿ ಪುಡಿ ಹಣೆಗೆ ಇಡುತ್ತಿದ್ದರು. ( ಕುಂಕುಮ ಅವರಿಗೆ ಅಲರ್ಜಿ..) ಅಮ್ಮಮ್ಮ ತಲೆಗೆ ,ತಲೆಕೂದಲಿಗೆ ಎಂದೂ ಎಣ್ಣೆ ಹಚ್ಚುತ್ತಿರಲಿಲ್ಲ. ಆದರೂ ವರ್ಷ 7೦ ಆದರೂ ಅವರ ಕೂದಲು ಕಪ್ಪಾಗೇ ಕಾಣುತ್ತಿತ್ತು, ಮತ್ತು ನೀಳವಾಗಿತ್ತು. ಉದ್ದ ಕೂದಲನ್ನು ಒಮ್ಮೆ ಸಿಕ್ಕುಬಿಡಿಸಿಕೊಂಡು ನೀಟಾಗಿ ಬಾಚಿಕೊಂಡು ಜಡೆ ಹೆಣೆದುಕೊಳ್ಳುವಾಗ ನಾನು ಓಡಿಹೋಗಿ ಜಡೆಯನ್ನು ನನ್ನ ಹೆಗಲಮೇಲೆ ಹಾಕಿಕೊಂಡು ” ಎಷ್ಟು ಉದ್ದದ ಜಡೆ ಅಮ್ಮಮ್ಮ ನೀನೇಕೆ ತುರುಬು (ಸೂಡಿ) ಕಟ್ಟಿಕೊಳ್ಳುವುದು ಹಾಗೇ ಉದ್ದ ಬಿಡು” ಎಂದು ಗೋಗರೆಯುತ್ತಿದ್ದೆ.

ಈಗ ನನ್ನ ಎರಡೂವರೆ ವರ್ಷದ ಚಿಕ್ಕ ಮಗಳು ರೆಡಿಮೇಡ್ ಜಡೆ ಹಾಕಿಕೊಂಡು ಸಂಭ್ರಮಿಸು ವುದನ್ನು ಕಂಡಾಗ ನನಗೆ ನಾನು ಅಮ್ಮಮ್ಮನ ಜಡೆ ಹೆಗಲಮೇಲೆ ಹಾಕಿಕೊಳ್ಳುತ್ತಿದ್ದುದು ನೆನಪಿಗೆ ಬರುತ್ತದೆ.

ಸಾಮಾನ್ಯವಾಗಿ ಮಲೆನಾಡುಕಡೆಗಳಲ್ಲಿ ಮೊದಲೆಲ್ಲಾ ಗೌರಿಹಬ್ಬದ ಮೊದಲು ಬಳೆಗಾರರು ಮನೆ-ಮನೆಗೆ ಬಂದು ಹೆಂಗಳೆಯರಿಗೆ ಬಳೆ ತೊಡಿಸುತ್ತಿದ್ದರು. (ಈಗಿನಂತೆ ಅಂಗಡಿಗಳಿರಲಿಲ್ಲ, ಇದ್ದರೂ ಹೆಣ್ಣು ಮಕ್ಕಳು ಹೊರಗೆ ಬಳೆ ಇಡುತ್ತಿದ್ದುದು ಅಪರೂಪ) ನನ್ನ ಅಮ್ಮಮ್ಮ ಎರಡೂ ಕೈತುಂಬಾ ಗಾಜಿನ ಬಳೆ ತೊಡುತ್ತಿದ್ದರು. ಆಶ್ಚರ್ಯವೆಂದರೆ ಅಮ್ಮಮ್ಮ ಒಮ್ಮೆ ಗೌರಿಹಬ್ಬಕ್ಕೆ ಇಟ್ಟ ಬಳೆ ಮುಂದಿನ ವರ್ಷ ಗೌರಿಹಬ್ಬ ಬರುವವರೆಗೂ ಹಾಗೇ ಇರುತ್ತಿದ್ದವು, ಒಂದೂ ಬಳೆ ಒಡೆದಿರುತ್ತಿ ರಲಿಲ್ಲ. (ನನ್ನ ಕೈಲಿ ಮಾತ್ರ ಎರಡು ದಿನ ಇದ್ದರೆ ಹೆಚ್ಚು…!!!)

ಕಾಫಿ ಪ್ರಿಯರಾದ ಅಮ್ಮಮ್ಮನಿಗೆ ಬೆಳಿಗ್ಗೆ ಎರಡು ಲೋಟ ಕಾಫಿ (ಬೆಲ್ಲದ ಕಾಫಿ) ಕುಡಿಯದಿದ್ದರೆ ಕೈಕಾಲೇ ಆಡುತ್ತಿರಲಿಲ್ಲ. ನಾವೆಲ್ಲಾ ದಿನದ ಮೂರು ಹೊತ್ತು ಹೊಟ್ಟೆ ತುಂಬಿಸಿಕೊಂಡರೂ ಮಧ್ಯ- ಮಧ್ಯ ಅದೂ ಇದೂ ಬಾಯಾಡುತ್ತಿರಬೇಕೆಂಬ ಬಯಕೆ ಆಗುತ್ತಿರುತ್ತದೆ. ( ಬಾಯಿ ಚಪಲ…) ಆದರೆ ನನ್ನ ಅಮ್ಮಮ್ಮ ಮಾತ್ರ ಬೆಳಿಗ್ಗೆ ಕಾಫಿ-ತಿಂಡಿ, ಮಧ್ಯಾಹ್ನ ಊಟ ಮಾಡಿದ ನಂತರ ಮತ್ತೆ ಹೊಟ್ಟೆ ತುಂಬಿಸುತ್ತಿದ್ದುದು ಮರುದಿನ ಬೆಳಿಗ್ಗೆ.

ಅಲ್ಲಿಯವರೆಗೂ ಕೇವಲ ಕಾಫಿಯೇ ಅವರ ಜೀವಾಳ. ಒಪ್ಪತ್ತು ಊಟ ಮಾಡಿದರೂ ಅಮ್ಮಮ್ಮ ಗುಂಡು-ಗುಂಡಾಗಿದ್ದರು. ವಯೋಸಹಜವಾಗಿ ಅಧಿಕ ರಕ್ತದೊತ್ತಡ ಹಾಗೂ ಕೊನೆಯಲ್ಲಿ ಮಧುಮೇಹ ರೋಗ ಕಾಡಿದರೂ ಯಾವುದೇ ಪತ್ಯ ಮಾಡಿದವರಲ್ಲ.

ನನ್ನ ಅಮ್ಮಮ್ಮ ಸಹನಾಮೂರ್ತಿಯಾಗಿದ್ದಂತೆ ಸ್ನೇಹಪರ ಜೀವಿಯೂ ಆಗಿದ್ದರು. ಸ್ನೇಹಕ್ಕೆ ಯಾವುದೇ ಜಾತಿ-ಭೇದ, ಮೇಲು-ಕೀಳು ಇಲ್ಲ. ಅಡಿಕೆ ಸಿಪ್ಪೆಯ ರಾಶಿಯಲ್ಲಿ ಅಣಬೆ ಹುಡುಕಲು ಬರುತ್ತಿದ್ದ ಆಲಿ ಸಾಹೇಬರ ಪತ್ನಿ ಬೀಬಮ್ಮ , ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಾಣಂತನ ಮಾಡಿಸುತ್ತಿದ್ದ ಬುಳ್ಳಮ್ಮ , ಮನೆಯ ಅಂಗಳ ಗುಡಿಸಲು ಬರುತ್ತಿದ್ದ ಈರಿ, ಬಾಯಿ ಬಡಕಿ ಚಂದು ಇವರೆಲ್ಲರೂ ಅಮ್ಮಮ್ಮನ ಪಟ್ಟಾಂಗ ಪರಿಚಾರಿಕೆಯರು.

ಇನ್ನು ಅಡುಗೆಯ ವಿಚಾರದಲ್ಲಂತೂ ಕೇಳುವುದೇ ಬೇಡ ಅಮ್ಮಮ್ಮನ ಕೈ ರುಚಿ ಸವಿದವರೇ ಬಲ್ಲರು. ಕಲ್ಲಿನ ಗಡಿಗೆಯಲ್ಲಿ ಮಾಡುತ್ತಿದ್ದ ಕಾಯಿರಸ, ಪಿಂಗಾಣಿ ಜಾಲಿಯಲ್ಲಿ ಹಾಕಿಡುತ್ತಿದ್ದ ಮಾವಿನ ಮಿಡಿ ಉಪ್ಪಿನಕಾಯಿ, ದಿಂಡಿನಕಾಯಿ ಗೊಜ್ಜು, ಹಿಂದಿನ ದಿನದ ಮಿಕ್ಕಿದ ದೋಸೆಹಿಟ್ಟಿನಿಂದ ಮಾಡಿದ ಹೆಸರು ಗೊತ್ತಿಲ್ಲದ ಎಣ್ಣೆ ತಿಂಡಿ, ಬಾಣಂತಿಯರಿಗೆ ಮಾಡುತ್ತಿದ್ದ ಶುಂಠಿ ಲೇಹ, ಗಸಗಸೆ ಲೇಹ ಇವುಗಳೆಲ್ಲಾ ಅಮ್ಮಮ್ಮನ ಕೈ ರುಚಿಗೆ ನಿದರ್ಶನಗಳು.

ಇನ್ನು ದೇವರಮುಂದೆ ಹಾಕುತ್ತಿದ್ದ ರಂಗೋಲಿಗಳು, ಗೌರಿಹಬ್ಬಕ್ಕೆ ಗೌರಿದೇವಿಗೆ ಅರ್ಪಿಸಲು ಮಾಡುತ್ತಿದ್ದ ವಿವಿಧ ಬಗೆಯ ಗೆಜ್ಜೆವಸ್ತçಗಳು, ಗದ್ದೆಗಳಲ್ಲಿ ಕಂಡುಬರುತ್ತಿದ್ದ ಹಿಟ್ಟುಂಡೆ ಎಂಬ ಜಾತಿಯ ಗಿಡದಿಂದ ಮಾಡುತ್ತಿದ್ದ ತಟ್ಟೆ, (ಆಗಿನ ಕಾಲದಲ್ಲಿ ಬಿಸಿ ಹಾಲಿಗೆ ಮುಚ್ಚಲು ಉಪಯೋಗಿಸುತ್ತಿದ್ದರು.) ದೇವರ ಮನೆ ಗುಡಿಸಲು ಮಾಡುತ್ತಿದ್ದ ಹಿಟ್ಟುಂಡೆ ಹಿಡಿ, ಹಾಲು ಕಾಯಿಸಲು ಮಣ್ಣಿನಿಂದ ಮಾಡುತ್ತಿದ್ದ ಕೆಂಡದ ಒಲೆ ಇವುಗಳೆಲ್ಲಾ ಅಮ್ಮಮ್ಮನ ಕರಕುಶಲ ಕೈಚಳಕಕ್ಕೆ ಉದಾಹರಣೆಗಳಾಗಿವೆ.

ತನ್ನ ಹತ್ತನೇಯ ವಯಸ್ಸಿಗೇ ತನಗಿಂತ ಹತ್ತು ವರ್ಷದ ದೊಡ್ಡ ಹುಡುಗನನ್ನು ಮದುವೆಯಾದ ಅಮ್ಮಮ್ಮ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ನೊಗಹೊತ್ತು, ಸಂಸಾರದಲ್ಲಿ ಅನೇಕ ಏರು-ಪೇರುಗಳನ್ನು, ನೋವು ನಲಿವುಗಳನ್ನು ಅನುಭವಿಸಿದರು. ಹುಲಿಯಂತೆ ಘನತೆ-ಗಾಂಭೀರ್ಯ ದಿಂದ ಬದುಕಿ ಬಾಳಿದ ನನ್ನಜ್ಜನೊಂದಿಗೆ ತುಂಬು ಜೀವನ ನಡೆಸಿದ ಅಮ್ಮಮ್ಮ ತನ್ನ ಮನೆಯ ಸಮೀಪವೇ ನೈಜ ಹುಲಿಯನ್ನು ನೋಡಿ ಹೆದರಿಕೊಂಡಿದ್ದರು.

ಹೀಗೆ ಅಮ್ಮಮ್ಮನ ಬಗ್ಗೆ ಬರೆದಷ್ಟೂ ಕಡಿಮೆಯೇ. ಎಲ್ಲರಿಗೂ ಅವರವರ ಅಜ್ಜಿಯಂದಿರು ಎಂದಿಗೂ ಶ್ರೇಷ್ಠವೇ, ಆದರೂ ನನ್ನ ಅಮ್ಮಮ್ಮ ಅವರೆಲ್ಲರಿಗಿಂತ ಒಂದು ಕೈ ಮೇಲು ಎಂಬುದು ನನ್ನನಿಸಿಕೆ. ಸಾಮಾನ್ಯವಾಗಿ ತಾಳ್ಮೆ- ಸಹನೆಗೆ ಭೂಮಿತಾಯನ್ನು ನಿದರ್ಶನವನ್ನಾಗಿ ಹೇಳುತ್ತಾರೆ. ಅದಕ್ಕೆ ನಾನಿಲ್ಲಿ ನನ್ನ ಅಮ್ಮಮ್ಮನನ್ನು ಭೂಮಿ ತೂಕದ ಹೆಣ್ಣು ಎಂದು ಬಣ್ಣಿಸಿರುವುದು.

ಇಂತಹ ಅಮ್ಮಮ್ಮನನ್ನು ಕಂಡು ಭೂಮಿತಾಯಿಗೂ ಅನಿಸಿತಿರಬೇಕು ಸಾಕಿನ್ನು ಭೂಮಿಯ ಋಣ ಇವಳಿಗೆ ಎಂದು, ಅದಕ್ಕಾಗಿ ಭೂಮಿ ಹುಣ್ಣಿಮೆಯ ಪರ್ವದಿನದಂದು ಅವಳಿಂದ ಪೂಜಿಸಿಕೊಂಡು, ನೈವೇದೈ ಸ್ವೀಕರಿಸಿ ಅಂದೇ ರಾತ್ರಿ ಅಮ್ಮಮ್ಮನ ಉಸಿರನ್ನು ತನ್ನೊಳಗೆ ಸೇರಿಸಿಕೊಂಡು ಬಿಟ್ಟಳು. ಭೂಮಿ ತೂಕದ ಹೆಣ್ಣು ಭೂಗರ್ಭದೊಳಗೆ ಶಾಶ್ವತವಾಗಿ ಸೇರಿಬಿಟ್ಟಳು.

ಚಿತ್ರ​ ಕೃಪೆ: ರಾಮ್ ಅಜೆಕಾರ್ ​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!