ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇರಲಿದೆ ಬಿಗಿ ಪೊಲೀಸ್ ಬಂದೋಬಸ್ತ್

ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ರೈತ ಪರ ಸಂಘಟನೆಗಳು ಸೆಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಸರ್ಕಾರ ಜಾರಿಗೆ ತರಲು ಬಯಸಿದ್ದ ಕೃಷಿ ಮಸೂದೆಯ ವಿರುದ್ಧ ರೈತ ಸಂಘಟನೆಗಳು ವಿವಿಧ ಸಂಘಟನೆಗಳೊಂದಿಗೆ ಸೇರಿ ಬಂದ್ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಕಲ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೀಗೆಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ಎಸ್ಪಿ ,ನಾಳೆ ಕರ್ನಾಟಕ ಬಂದ್ ಇರುವ ಕಾರಣ ಹೆಚ್ಚುವರಿಯಾಗಿ 1 ಕೆಎಸ್ಆರ್ ಪಿ ತುಕಡಿ ಹಾಗೂ 6 ಡಿಎಆರ್ ತುಕಡಿಗಳನ್ನು ಈಗಾಗಲೇ ಸಿದ್ಧಗೊಳಿಸ ಲಾಗಿದೆ.ಸದ್ಯದ ವರೆಗೆ ಯಾವ ಸಂಘಟನೆಗಳು ಕೂಡ ಆಗಮಿಸಿ ಬಂದ್ ಕುರಿತು ಅಧಿಕೃತ ಪರವಾನಿಗೆ ಪಡೆದು ಕೊಂಡಿಲ್ಲ. ಸಂಜೆಯೊಳಗೆ ಸೂಕ್ತ ಮಾಹಿತಿ ಸಿಗಲಿದ್ದು ಅದನ್ನು ಆಧಾರವಾಗಿಟ್ಟುಕೊಂಡು ಬಂದ್ ಗೆ ಬೇಕಾದ ಬಂದೋಬಸ್ತ್ ನ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ರೈತಸಂಘಟನೆಗಳು ಕರೆ ಕೊಟ್ಟ ಕರ್ನಾಟಕ ಬಂದ್ ಗೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನತಾದಳ, ದಲಿತ ಸಂಘರ್ಷ ಸಮಿತಿ, ಭಾರತ ಕಮ್ಯುನಿಷ್ಟ್ ಪಕ್ಷ, ಸಹಬಾಳ್ವೆ, ವೆಲ್ಫೇರ್ ಪಾರ್ಟಿ, ಮುಸ್ಲಿಂ ಒಕ್ಕೂಟ, ಕ್ರಿಶ್ಚಿಯನ್ ಒಕ್ಕೂಟ, ಟ್ರೆಡ್ ಯೂನಿಯನ್, ಅಂಬೇಡ್ಕರ್ ಯುವಸೇನೆ ಸೇರಿ ಒಟ್ಟು 14ಸಂಘಟನೆಗಳು ಸಾಥ್ ನೀಡಿವೆ ಎಂಬುದು ತಿಳಿದುಬಂದಿದೆ.

ಸದ್ಯ ಜಿಲ್ಲೆಯ ಕಾರ್ಮಿಕರು, ವ್ಯಾಪಾರಿಗಳು, ಬಸ್ ಮಾಲಕರು, ನೌಕರರು ಬಂದ್ ಗೆ ಬೆಂಬಲಿಸುವಂತೆ ಮನ ವೊಲಿಸುತ್ತಿದ್ದು ಜಿಲ್ಲೆಯ ಬಸ್, ಆಟೋ, ಟ್ಯಾಕ್ಸಿ ಮಾಲಕರು ಬಂದ್ ಗೆ ಬೆಂಬಲ ನೀಡುವ ಕುರಿತು ಅಧಿಕೃತ ಮಾಹಿತಿಯನ್ನು ಇದುವರೆಗೆ ನೀಡಿಲ್ಲ.

 
 
 
 
 
 
 

Leave a Reply