ಯೋಗಾಭ್ಯಾಸ ಫ್ಯಾಶನ್ ಆಗದಿರಲಿ~  ಡಾ. ಶ್ರೀಕಾಂತ್ ಸಿದ್ದಾಪುರ.

ಯೋಗಾಭ್ಯಾಸದ ಆರಂಭದಲ್ಲಿ ಪತಂಜಲಿಯ ಕುರಿತು ಶ್ಲೋಕವೊಂದನ್ನು ಹೇಳುವ ಕ್ರಮ ಇದೆ.  ಇದರ ಆಶಯ ಹೀಗಿದೆ. ಯೋಗಾಭ್ಯಾಸದಿಂದ ಚಿತ್ತದ ಕೊಳೆಯನ್ನು ಕಳೆಯಬಹುದು. ವ್ಯಾಕರಣದ ಓದಿನಿಂದ ಮಾತಿನ ದೋಷವನ್ನು ಸರಿಪಡಿಸಬಹುದು. ಆಯುರ್ವೇದದಿಂದ ದೇಹಕ್ಕೆ ಅಂಟಿದ ರೋಗವನ್ನು ನಿವಾರಿಸಬಹುದು.

ವಾಸವದತ್ತ ಎಂಬ ಕಾವ್ಯಕ್ಕೆ ಬರೆದ ಟೀಕೆಯಲ್ಲಿ ಈ ಶ್ಲೋಕವನ್ನು ಶಿವರಾಮ ಎಂಬವನು ಉಲ್ಲೇಖಿಸಿದ್ದಾನೆ ಎಂಬುದು ಸಂಶೋಧಕರ ನಿಲುವು. ಈ ಶ್ಲೋಕದಿಂದ ಯೋಗದ ಮುಖ್ಯ ಉದ್ದೇಶ ಸ್ಪಷ್ಟವಾಗುತ್ತಿದೆ. ಚಿತ್ತ ಶುದ್ಧಿ. ಪತಂಜಲಿ ಮುನಿಗಳೂ ಯೋಗ ಎಂದರೆ ಚಿತ್ತವೃತ್ತಿ ನಿರೋಧ ಎಂದಿರುತ್ತಾರೆ.

ಮನಸ್ಸಿನ ನಿಯಂತ್ರಣಕ್ಕೆ ಯೋಗಾಭ್ಯಾಸ ಒಂದು ಸಾಧನ. ಆದರೆ ಅದೇ ಸರ್ವಸ್ವವಲ್ಲ. ಅಂದರೆ ಯೋಗಾಭ್ಯಾದೊಂದಿಗೆ ನಮ್ಮ ಶ್ರಮವೂ ಮುಖ್ಯ. ಹಾಗಾಗಿ ಅಷ್ಟಾಂಗ ಯೋಗದ ಆರಂಭದಲ್ಲಿ ಯಮ, ನಿಯಮಗಳ ವಿವರಗಳಿವೆ. ಇಂದು ಹೆಚ್ಚಿನ ಯೋಗಾಭ್ಯಾಸಿಗಳು ಆಸನ, ಪ್ರಾಣಾಯಾಮ, ಧ್ಯಾನಗಳಿಗೇ ಪ್ರಾಶಸ್ತ್ಯ  ಕೊಡುತ್ತಾರೆ. ಆದರೆ ಮನಸ್ಸಿನ ನಿಯಂತ್ರಣದ ಮೊದಲ ಹಂತವೇ ಈ ಎರಡು ಮೆಟ್ಟಿಲುಗಳು.

ಚಿತ್ತಶುದ್ಧಿಗೆ ಇವುಗಳನ್ನು ಅನುಷ್ಠಾನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯ.. ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ, ಅಪರಿಗ್ರಹ ಇವುಗಳು ಯಮ. ಶುಚಿತ್ವ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ ಇವು ನಿಯಮಗಳು. ಇವುಗಳನ್ನು ಅನುಷ್ಠಾನ ಮಾಡುವುದು ಸುಲಭದ ಮಾತಲ್ಲ. ಮನಸ್ಸನ್ನು ನಿಯಂತ್ರಿಸುವಲ್ಲಿ ಸಹಕರಿಸುವ ಈ ಎರಡನ್ನು ಮೊದಲ ಹಂತವಾಗಿ ಅಳವಡಿಸಿಕೊಳ್ಳಲೇಬೇಕು.

ಆಸನಗಳು ಏಕೆ ಬೇಕು? ಮನಸ್ಸಿಗೂ ಮತ್ತು ದೇಹಕ್ಕೂ ಸಂಬ೦ಧವಿದೆ.  Sound mind is in a sound body. ದೇಹದ ತೂಕ ಹಗುರವಾದಷ್ಟು ಮನಸ್ಸಿನ ನಿಯಂತ್ರಣ ಸುಲಭ. ದೇಹವು ಹೆಚ್ಚು ಶಿಥಿಲವಾಗಿ  (Flexible) ನಮಗೆ ಬೇಕಾದಂತೆ ಬಾಗಿಸುವಂತಿದ್ದರೆ ಮನಸ್ಸು ಚುರುಕಾಗಿರುತ್ತದೆ. ಹಾಗಾಗಿ ದೇಹದ ನಿಯಂತ್ರಣಕ್ಕೆ ಆಸನಗಳು. ಆದರೆ ಇತರ ವ್ಯಾಯಾಮಗಳಿಗಿಂತ ಯೋಗಾಸನಗಳು ಭಿನ್ನ. ಪ್ರತಿಯೊಂದು ಆಸನವನ್ನು ಮಾಡುತ್ತಿರುವಂತೆ ಉಸಿರಾಟದತ್ತ ನಮ್ಮ ಗಮನ ಹರಿಯುತ್ತಿರಬೇಕು.

ಆಸನವನ್ನು ಮಾಡುವಾಗ ದೇಹದ ಅತಿಯಾದ ದಂಡನೆಯೂ ಸೂಕ್ತವಲ್ಲ. ದೇಹವನ್ನು ಹಂತ ಹಂತವಾಗಿ ಪಳಗಿಸಬೇಕು. ಪ್ರತಿ ಆಸನವನ್ನು ಮಾಡಿದ ಮೇಲೆ ಕೆಲವು ನಿಮಿಷ ದೀರ್ಘ ಉಸಿರಾಟ ನಡೆಸುತ್ತಾ ಅದೇ ಆಸನದಲ್ಲಿರಬೇಕು. ಆಸನ ಸಿದ್ದಿಯ ಲಕ್ಷಣ ಎಂದರೆ ಸುಖ ಹಾಗೂ ಸ್ಥಿರವಾಗಿರುವುದು.  ಪತಂಜಲಿಯವರ ಪ್ರಕಾರ ಸ್ಥಿರಸುಖಮಾಸನಂ.

ಪ್ರಾಚೀನ ಕಾಲದಲ್ಲಿ ಯೋಗಿಗಳ ಮುಖ್ಯ ಉದ್ದೇಶ ಮನಸ್ಸನ್ನು ನಿಯಂತ್ರಿಸಿ ಅದನ್ನು ಮೋಕ್ಷ ಸಾಧನೆಗೆ ಬಳಸುವುದು. ಆಸನಗಳ ಮೂಲಕ ದೇಹದ ಮೇಲಿನ ಹಿಡಿತ.  ಪ್ರಾಣಾಯಾಮದ ಮೂಲಕ ಉಸಿರಿನ ಮೇಲಿನ ಹತೋಟಿ. ಪ್ರಾಣಾಯಾಮ ಎಂದರೆ ದೀರ್ಘ ಉಸಿರಾಟ. ಉಸಿರಾಟದತ್ತ ಗಮನ. ಪೂರಕ, ಕುಂಭಕ ಹಾಗೂ ರೇಚಕಗಳ ಮೂಲಕ ಉಸಿರಾಟದ ಅಭ್ಯಾಸ. ಮನಸ್ಸಿಗೂ, ಉಸಿರಾಟಕ್ಕೂ ನೇರ ಸಂಬ೦ಧ.

ಮನಸ್ಸು ಉದ್ವೇಗಕ್ಕೆ ಒಳಗಾದಂತೆ ಉಸಿರಾಟದ ವೇಗವೂ ಜಾಸ್ತಿಯಾಗುತ್ತದೆ. ಹಾಗಾಗಿ ಸಮತ್ವಕ್ಕೆ ಬೇಕಾದುದು ಲಯಬದ್ಧವಾದ ಉಸಿರಾಟ. ಪ್ರಾಣ ವಾಯುವಿನ ಮೇಲೆ ಹಿಡಿತ ಸಾಧಿಸಲು ಸತತ ಪ್ರಯತ್ನ ಮತ್ತು ಅಭ್ಯಾಸ ಅಗತ್ಯ.ನಿದರಲ್ಲಿ ಯಶಸ್ವೀಯಾದ ಯೋಗಿಗಳು ಪ್ರಾಣವಾಯುವನ್ನು ಸುಷುಮ್ನಾ ನಾಡಿಯಲ್ಲಿ ಹರಿಸುತ್ತಾರೆ.  ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತಾರೆ. ಸುಷುಮ್ನಾ ನಾಡಿಯಲ್ಲಿ ಹರಿಸಿ ಅದರಲ್ಲಿರುವ ಷಟ್ ಚಕ್ರಗಳ ಮೂಲಕ ನತ್ತಿಯಲ್ಲಿರುವ ಸಹಸ್ರಾರ ಚಕ್ರಕ್ಕೆ ತಲುಪಿಸುತ್ತಾರೆ. ಇದೇ ಸಮಾಧಿ ಸ್ಥಿತಿ. ಮೂಲಾಧಾರ, ಸ್ವಾಧಿಷ್ಠಾನ, ಅನಾಹತ, ವಿಶುದ್ಧಿ, ಆಜ್ಞಾ ಉಳಿದ ಚಕ್ರಗಳು.

 ಈ ಸ್ಥಿತಿಯಲ್ಲಿ ಪಡೆಯುವ ಆನಂದ ವರ್ಣನಾತೀತವಾದುದು. ಕೆಲವು ತಿಂಗಳುಗಳ ಕಾಲ ಈ ಸಮಾಧಿಯಲ್ಲಿ ಯೋಗಿಗಳಿ ರುತ್ತಾರೆ. ಪ್ರಾಣವಾಯುವನ್ನು ಸಹಸ್ರಾರದ ಮೂಲಕ ಹೊರಹರಿಸಿ ಇಚ್ಛೆ ಬಂದಾಗ ದೇಹತ್ಯಾಗ ಮಾಡುವ ಶಕ್ತಿಯೂ ಈ ಯೋಗಿಗಳಿಗಿದೆ. ಭೀಷ್ಮನು ಇಚ್ಛಾಮರಣಿ. ಇದೇ ಅಷ್ಟಾಂಗ ಯೋಗ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,ಧ್ಯಾನ, ಸಮಾಧಿ. ನಮ್ಮ ಪ್ರಾಚೀನ ಮುನಿಗಳು ಅಂತಿಮ ಗುರಿಯಾದ ಆತ್ಮಸಾಕ್ಷಾತ್ಕಾರಕ್ಕೆ ಯೋಗವನ್ನೇ ಆಧಾರವಾಗಿಟ್ಟುಕೊಂಡಿದ್ದರು. ಆತ್ಮಸಾಕ್ಷಾತ್ಕಾರ ಅಥವಾ ಮೋಕ್ಷವೇ ಜೀವನ ಸಾಧನೆ.

ವರ್ತಮಾನಕ್ಕೆ ಬಂದರೆ ಯೋಗದ ಮಹತ್ವ ಹೆಚ್ಚುತ್ತಿದೆ. ವಿದೇಶಗಳಲ್ಲೂ ಜನ ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಈಗಿನ ಯೋಗದ ಉದ್ದೇಶ ಲೌಕಿಕ ಸಾಧನೆ. ದೇಹದ ಬೊಜ್ಜನ್ನು ಕರಗಿಸುವುದು, ಸ್ಲಿಮ್ ಬಾಡಿಯನ್ನು ಕಾಪಾಡಿಕೊಳ್ಳುವುದು, ಮುಪ್ಪನ್ನು ಮರೆಮಾಚುವುದು. ಇದರೊಂದಿಗೆ ಮಾನಸಿಕ ಒತ್ತಡಗಳ ನಿರ್ವಹಣೆ. ಆದರೆ ಗ್ರಾಮೀಣ ಭಾಗದ ಶ್ರಮಜೀವಿಗಳು ತಮ್ಮ ದೇಹದ ಆರೋಗ್ಯವನ್ನು ಶ್ರಮಾಧಾರಿತ ಕೆಲಸಗಳ ಮೂಲಕವೇ ನಿರ್ವಹಿಸುತ್ತಾರೆ. ಶ್ರಮವು ಅವರಿಗೆ ಅನ್ನದ ಪ್ರಶ್ನೆ. ಹೊಲದಲ್ಲಿ ಬೆವರಿಳಿಸಿ ದುಡಿದರೆ ಫಲ.

ಅದೇ ಅವರ ದೃಷ್ಟಿಯಲ್ಲಿ ವ್ಯಾಯಾಮ. ಹಿಂದೆ ಪ್ರತೀ ಮನೆಯಲ್ಲೂ ಕಾಣಿಸುತ್ತಿದ್ದ ಮನೆ ಗುಡಿಸುವುದು, ಸಾರಿಸುವುದು, ನೆಲ ಒರೆಸುವುದು, ನೀರನ್ನು ಬಾವಿಯಿಂದ ಹಗ್ಗದ ಮೂಲಕ ಎಳೆಯುವುದು ಮೊದಲಾದ ದೈಹಿಕ ಶ್ರಮದ ಕೆಲಸಗಳು ದೈನಂದಿನ ಬದುಕಿನಿಂದ ದೂರವಾಗಿವೆ.  ಸರಕಾರಿ ಹಾಗೂ ಖಾಸಗಿ ರಂಗದ ಉದ್ಯೋಗಿಗಳಿಗೂ ಮಾನಸಿಕ ಒತ್ತಡಗಳು ಅಧಿಕವಾಗಿವೆ. ದೈಹಿಕ ಶ್ರಮವೂ ಈ ಉದ್ಯೋಗಗಳಲ್ಲಿ ಕಡಿಮೆ. ನಮ್ಮ ಅತಿಯಾದ ನಿರೀಕ್ಷೆಗಳೂ ನಮ್ಮ ನೆಮ್ಮದಿಗೆ ಮುಳುವಾಗಿವೆ. ಹಾಗಾಗಿ ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಲು ನಡಿಗೆ, ಜಿಮ್, ಯೋಗ ಮೊದಲಾದ ವ್ಯಾಯಾಮಗಳ ಮೊರೆ ಹೋಗುತ್ತಾರೆ. ವಿಶೇಷವಾಗಿ ಯೋಗಕ್ಕೆ ಆಧುನಿಕ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ.

ಆರೋಗ್ಯ ಮತ್ತು ಅಲಂಕಾರದ ನಿರೀಕ್ಷೆ. ಅಲ್ಲಲ್ಲಿ ಯೋಗತರಗತಿಗಳು ಹುಟ್ಟಿಕೊಳ್ಳುತ್ತಿವೆ. ಯೋಗ ಶಿಕ್ಷಕರಿಗೂ ಬೇಡಿಕೆ. ಒಂದು ವಾರ ಯೋಗ ತರಗತಿಗೆ ಹಾಜರಾದವರೂ ಸ್ವಯಂಘೋಷಿತ ಶಿಕ್ಷಕರು. ಹೀಗೇ ಮುಂದುವರಿದಲ್ಲಿ ಯೋಗದ ಉದ್ದೇಶ ಈಡೇರೀತೇ?. ಯೋಗ ಕಲಿಸುವ ಶಿಕ್ಷಕರಲ್ಲಿ ಆ ಕುರಿತು ಆಳವಾದ ಅನುಭವವಿಲ್ಲದಿದ್ದರೆ ಪ್ರತಿಕೂಲ ಪರಿಣಾಮ ಬೀರದೇ?.  ಈ ನಡುವೆ ಒಂದು ಪ್ರಶ್ನೆ. ಕಲಿಕೆಯ ಈ ಬಿರುಸುಗಳ ನಡುವೆಯೂ ಮಾನಸಿಕ ಆರೋಗ್ಯವು ದೊಡ್ಡ ಸವಾಲಾಗಿದೆ. ಯೋಗಕ್ಕೆ ಕೊಟ್ಟ ಪ್ರಾಶಸ್ತ್ಯ ಕಡಿಮೆಯಾಗುತ್ತಿದೆಯೇ?. ಕಲಿಯುವಿಕೆ ಹಾಗೂ ಕಲಿಸುವಿಕೆಯಲ್ಲಿ ಎಡವುತ್ತಿದ್ದೇವೆಯೇ? ಯೋಗ ಕಲಿಕೆಯೊಂದಿಗೆ ಇದಕ್ಕೆ ಪೂರಕವಾಗಿ ಇತರ ಕಲಿಕಾ ಪರಿಸರಗಳು ಬೇಕೇ? …. ಚಿಂತನಾರ್ಹ.

ಡಾ. ಶ್ರೀಕಾಂತ್ ಸಿದ್ದಾಪುರ.

 
 
 
 
 
 
 
 
 
 
 

Leave a Reply