ಬಸ್ ಸಂಚಾರಕ್ಕೆ ತಡೆ, ಉಡುಪಿಯಲ್ಲಿ ಪ್ರತಿಭಟನಾಕಾರರ ಬಂಧನ

ಉಡುಪಿ: ಇಂದು ಕರ್ನಾಟಕದಾದ್ಯಂತ ರೈತ ಪರ ಸಂಘಟನೆಗಳು ಬಂದ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಇಂದು ಬೆಳಗ್ಗೆ ರಸ್ತೆ ತಡೆ ನಡೆಸಿದ್ದು,  ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಂದ್ ಗೆ ಕರೆ ನೀಡಿದ್ದರು ಸಿಟಿ  ಹಾಗೂ ಸರ್ವಿಸ್ ಬಸ್ಸುಗಳು ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿದ್ದು, ಈ ಕಾರಣಕ್ಕೆ ಬೆಂಬಲ ಕೊಟ್ಟ ವಿವಿಧ ಸಂಘಟನೆಯವರು ಬಸ್ ಸಂಚಾರ ನಡೆಸದಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಸಮಯದಲ್ಲಿ ಬಸ್ ನಿರ್ವಾಹಕರು, ಚಾಲಕರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಕಿಡಿ ಹತ್ತಿದು ವಾಗ್ವಾದ ನಡೆಯಿತು. ಬಸ್ ಸಂಚಾರ ನಡೆಸುತ್ತೇವೆ ಎಂದು ಪಟ್ಟು ಹಿಡಿದ ಚಾಲಕರ ಹಾಗೂ ನಿರ್ವಾಹಕರನ್ನು ವಿರೋಧಿಸಿ ಪ್ರತಿಭಟನಾಕಾರರು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ನಡೆಸದಂತೆ ರಸ್ತೆ ತಡೆ ಹಿಡಿದರು. ತಕ್ಷಣ  ಅಲ್ಲಿಗೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಇನ್ನು ಬಂಧಿತರಲ್ಲಿ ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ನಗರಸಭಾ ಸದಸ್ಯ ರಮೇಶ್ ಕಾಂಚನ್,  ಅನ್ನದಾತ ಆಟೋ ಯೂನಿಯನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ದಸಂಸ ಮುಖಂಡ ಸುಂದರ್ ಮಾಸ್ಟರ್, ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಆರ್.ಕೆ.ರಮೇಶ್, ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ  ಅಬ್ದುಲ್ ಅಝೀಝ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಧನುಷ್ ಶೆಟ್ಟಿ, ಅಬ್ದುಲ್ ರಹ್ಮಾನ್, ಸಾಯಿರಾಜ್ ಕೋಟ್ಯಾನ್,  ಹಮೀದ್ ಸೇರಿದ್ದಾರೆ.

ಸದ್ಯ ಉಡುಪಿಯಲ್ಲಿ ಬಿಗಿ ಪೊಲೀಸ್ ಕಣ್ಗಾವಲಿದ್ದು ಸರ್ವಿಸ್ ಹಾಗೂ ಸಿಟಿ ಬಸ್ ಗಳ ಸಂಚಾರ ಮುಂದುವರಿಯುತ್ತಿದೆ.

 
 
 
 
 
 
 
 
 
 
 

Leave a Reply