ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಯಿಂದಲೆ ಪ್ರತಿಭಟನೆ

ಬೆಂಗಳೂರು: ರೈತ ಸಂಘಟನೆಗಳು ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ ಗೆ 110ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರಲ್ಲಿ ಕೆಲವೂ ರಾಜಕೀಯ ಪಕ್ಷಗಳ ಬೆಂಬಲವೂ ಇದೆ‌.ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಯಿಂದಲೆ ಕೆಲವೆಡೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.ಕರವೇ ಕಾರ್ಯಕರ್ತರು ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.ಈ ಕುರಿತು ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿದೆ.ಈ ಹಿನ್ನೆಲೆ ರೈತ ಸಂಘಟನೆಗಳು ನೀಡಿದ್ದ ರಾಜ್ಯ ಬಂದ್ ಕರೆಗೆ ಕರವೇ ಬೆಂಬಲವಿದೆ. ರಾಜ್ಯಾದ್ಯಂತ ನಮ್ಮ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಮತ್ತು ಇತರೆ ಹಲವು ಸಂಘಟನೆಗಳು ಮೆಜೆಸ್ಟಿಕ್​ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ರಸ್ತೆಯಲ್ಲಿ ಮಲಗಿ ಬಸ್​ ತಡೆ ನಡೆಸಿ ಬಸ್ ಚಲಾಯಿಸದಂತೆ ಮನವಿ ಮಾಡಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕರವೇ ಕಾರ್ಯಕರ್ತರನ್ನು ಬಂಧಿಸಿ ಆಡುಗೋಡಿಯ ಸಿಎಆರ್ ಗ್ರೌಂಡ್​ಗೆ ಕರೆದೊಯ್ದಿದ್ದಾರೆ.

ಇನ್ನು ಮೆಜೆಸ್ಟಿಕ್ ರೈಲ್ವೆ ಫ್ಲಾಟ್​ಫಾರಂಗಳಿಗೆ ಹೋಗುವ ಎಲ್ಲಾ ದ್ವಾರಗಳಲ್ಲೂ ಬ್ಯಾರಿಕೇಡ್ ಇರಿಸಲಾಗಿದ್ದು, ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದೊಳಗೆ ಹೋಗದಂತೆ ರೈಲ್ವೆ ನಿಲ್ದಾಣದ ಬಳಿ ಫುಲ್ ಸೆಕ್ಯೂರಿಟಿ ಸಿದ್ಧ ಮಾಡಲಾಗಿದೆ. ರೈಲ್ವೆ ಪೊಲೀಸ್ ಫೋಸ್೯, ಉಪ್ಪಾರ ಪೇಟೆ ಪೊಲೀಸ್, ಕೆ.ಎಸ್.ಆರ್.ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.ಸದ್ಯ ಟಿಕೆಟ್ ಇದ್ದರೆ ಮಾತ್ರ ಪ್ಲಾಟ್ ಫಾರಂ ಪ್ರವೇಶಿಸಲು ಅವಕಾಶವಿದ್ದು, ರೈಲ್ವೆ ನಿಲ್ದಾಣ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ನಡೆಸಿ ಒಳಗೆ ಹೋಗಲು ಅನುಮತಿಸಲಾಗುತ್ತಿದೆ. ಇನ್ನು ಪ್ರಯಾಣಿಕರನ್ನ ಬೀಳ್ಕೊಡಲು ಬರುತ್ತಿರುವ ಇತರರನ್ನು ಒಳಗೆ ಹೋಗಲು ಬಿಡುತ್ತಿಲ್ಲ.

ಸ್ಯಾಟಲೈಟ್ ಬಸ್​ ನಿಲ್ದಾಣದಲ್ಲಿ ಎಂದಿನಂತೆ ಬಸ್​ ಸಂಚಾರ ಆರಂಭವಾಗಿದ್ದು, ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ ಸಂಚಾರದಲ್ಲಿ ಇದುವರೆಗೆ ಯಾವುದೇ ವ್ಯತ್ಯಯವಾಗಿಲ್ಲ. ಬಂದ್ ಹಿನ್ನಲೆಯಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆ ಯಾಗಿದೆ.

 
 
 
 
 
 
 
 
 
 
 

Leave a Reply