ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ(ಟ್ರೀ ಪಾರ್ಕ್)ಕ್ಕೆ ಹೊಸ ರೂಪ

ಆ.31: ಮಣಿಪಾಲ ಸಮೀಪದ 80ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ(ಟ್ರೀ ಪಾರ್ಕ್)ಕ್ಕೆ ಹೊಸ ರೂಪ ನೀಡಲಾಗಿದ್ದು, ಪ್ರವೇಶ ದ್ವಾರದಲ್ಲಿ ಸಾಲುಮರದ ತಿಮ್ಮಕ್ಕ ಅವರ ಬೃಹತ್ ಆಕಾರದ ಕಲಾಕೃತಿಯನ್ನು ಅನಾವರಣಗೊಳಿಸಲಾಗಿದೆ. ಅರಣ್ಯ ಇಲಾಖೆ ಕುಂದಾಪುರ ವಿಭಾಗ ಉಡುಪಿ ವಲಯದ ವತಿಯಿಂದ ಈ ಟ್ರೀಪಾರ್ಕ್ 2018ರ ಫೆ.24ರಂದು ಉದ್ಘಾಟನೆಗೊಂಡಿತ್ತು.

ಸುಮಾರು 10 ಎಕರೆ ಪ್ರದೇಶ ಹೊಂದಿರುವ ಈ ಪಾರ್ಕ್‌ನಲ್ಲಿ ಎಲ್ಲ ವರ್ಗದವರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಾಕಿಂಗ್ ಟ್ರಾಕ್, ಪರಿಸರ ಹಾಗೂ ಪ್ರಾಣಿಪಕ್ಷಿಗಳ ಸಂಪೂರ್ಣ ಮಾಹಿತಿ ಹೊಂದಿರುವ ಫಲಕಗಳನ್ನು ಆಳವಡಿಸ ಲಾಗಿದೆ. ಮರದ ಹಟ್, ಜೋಕಾಲಿ, ಯಕ್ಷಗಾನ, ಹುಲಿ ಕುಣಿತ, ಭೂತ ಕೋಲ, ಕಂಬಳ, ಎತ್ತಿನಗಾಡಿಗ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಹೀಗೆ ಈ ಟ್ರೀಪಾರ್ಕ್ ಎಲ್ಲರ ಆಕರ್ಷಿತ ಕೇಂದ್ರವಾಗಿದೆ. ಕೊರೋನ ಲಾಕ್ ಡೌನ್‌ನಿಂದಾಗಿ ಬಂದ್ ಆಗಿದ್ದ ಈ ಪಾರ್ಕ್ ಇದೀಗ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಆರಂಭದಲ್ಲಿ ಬೆರಳೆಣಿಕೆಯ ಸಂಖ್ಯೆಯ ಜನ ಬರುತ್ತಿದ್ದರೆ, ಈಗ ಹೆಚ್ಚಿನ ಸಂಖ್ಯೆಯ ಜನ ಪಾರ್ಕ್‌ಗೆ ಆಗಮಿಸುತ್ತಿದ್ದಾರೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.

ಇತ್ತೀಚೆಗೆ ಟ್ರೀಪಾರ್ಕ್ ಪ್ರವೇಶದ್ವಾರದಲ್ಲಿ ಅನಾವರಣಗೊಳಿಸಲಾದ ಸಾಲು ಮರದ ತಿಮ್ಮಕ್ಕ ಅವರ ಫೈಬರ್ ಗ್ಲಾಸ್‌ನ ಕಲಾಕೃತಿಯು ಪಾರ್ಕ್‌ಗೆ ಹೊಸ ಲುಕ್ ನೀಡುವುದರೊಂದಿಗೆ ಎಲ್ಲರ ಗಮನ ಸೆಳೆಯುತ್ತದೆ. ಈ ಕಲಾಕೃತಿಯನ್ನು ಕಲಾವಿದ ಪುರುಷೋತ್ತಮ ಅಡ್ವೆ ನೇತೃತ್ವದ ಮೂವರು ಕಲಾವಿದರು ಎರಡು ವಾರಗಳ ಅವಧಿಯಲ್ಲಿ ತಯಾರಿಸಿದ್ದಾರೆ. ಹೊರಗಡೆ ತಯಾರಿಸಿ ತಂದ ಈ ಕಲಾಕೃತಿಯನ್ನು ಇದೀಗ ಪಾರ್ಕ್‌ನಲ್ಲಿ ಅಳವಡಿಸ ಲಾಗಿದೆ. ಈ ಕಲಾಕೃತಿಯು ಏಳು ಅಡಿ ಎತ್ತರ ಹಾಗೂ ಆರು ಅಡಿ ಅಗಲ ಹೊಂದಿದೆ.

ಬ್ಯಾಂಬು -ಬಟರ್‌ಫ್ಲೈ ಪಾರ್ಕ್ ನಿರ್ಮಾಣ : ಟ್ರೀಪಾರ್ಕ್‌ನಲ್ಲಿ ಈ ವರ್ಷ ಹೊಸದಾಗಿ ಬ್ಯಾಂಬು ಪಾರ್ಕ್ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಜಾತಿಯ ಬಿದಿರನ್ನು ನೆಟ್ಟು ವಿಶಿಷ್ಟ ರೀತಿಯಲ್ಲಿ ಪಾರ್ಕ್ ನಿರ್ಮಿಸಲಾಗುತ್ತದೆ. ಅದೇ ರೀತಿ ವಿವಿಧ ರೀತಿಯ ಸಸ್ಯಗಳು, ಹೂವಿನ ಗಿಡಗಳನ್ನು ನೆಡುವ ಮೂಲಕ ಚಿಟ್ಟೆ ಪಾರ್ಕ್ ಕೂಡ ನಿರ್ಮಿಸಲು ಯೋಜನೆ ಇಲಾಖೆ ಮುಂದೆ ಇದೆ. ಇದಕ್ಕಾಗಿ ಪಾರ್ಕ್ ಒಳಗೆ ಸಣ್ಣ ಕೆರೆಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆಲ್ಲ ಇನ್ನಷ್ಟೆ ಹಣ ಇಲಾಖೆಯಿಂದ ಬಿಡುಗಡೆಯಾಗಬೇಕಾಗಿದೆ.

ಕೊರೋನ ಲಾಕ್‌ಡೌನ್‌ನಿಂದಾಗಿ ಮಾಲ್‌ಗಳಲ್ಲಿ ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಮತ್ತು ಸಿನೆಮಾ ಥಿಯೇಟರ್‌ಗಳು ತೆರೆಯದಿರುವುದರಿಂದ ಟ್ರೀ ಪಾರ್ಕ್‌ಗೆ ಹೆಚ್ಚಿನ ಜನ ಬಂದು ಸಮಯ ಕಳೆಯುತ್ತಿದ್ದಾರೆ. ಆರಂಭಕ್ಕಿಂತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈಗಾಗಲೇ ಎಲ್ಲ ರೀತಿಯ ಹೊಸ ಸೌಲಭ್ಯ ಗಳನ್ನು ಒದಗಿಸಲಾಗಿದೆ. ಇನ್ನು ಹೊಸ ಯೋಜನೆ ಕೂಡ ಈ ವರ್ಷ ಮಾಡಲು ಉದ್ದೇಶಿಸಲಾಗಿದೆ.

-ಕ್ಲಿಫರ್ಡ್ ಲೋಬೊ, ಅರಣ್ಯಾಧಿಕಾರಿ, ಉಡುಪಿ ವಲಯ

 
 
 
 
 
 
 
 
 
 
 

Leave a Reply