ಪ್ಲಾಸ್ಟಿಕ್ ಬಳಕೆಗೆ ಕಡಿವಾಣ

ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ ಬೀಟ್ ದಿ ಪ್ಲಾಸ್ಟಿಕ್ ಪೊಲ್ಯೂಶನ್ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಬಟ್ಟೆ ಕೈ-ಚೀಲಗಳನ್ನು ವಿತರಣೆ ನಡೆಸುವ ಅಭಿಯಾನಕ್ಕೆ ವೈದ್ಯ ಡಾ. ಆರ್.ಎನ್. ಭಟ್ ಅವರು ಇಂದು ಅಜ್ಜರಕಾಡು ಉದ್ಯಾನವನದಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರೊನಾ ನಮಗೆ ಅನೇಕ ಪಾಠವನ್ನು ಕಲಿಸಿದೆ. ಪ್ರಕೃತಿಯ ಮೇಲೆ ಹಿಡಿತವನ್ನು ಸಾಧಿಸಿದ ಪರಿಣಾಮವಾಗಿ ನಿಸರ್ಗವೇ ನಮಗೆ ತಕ್ಕ ಉತ್ತರ ನೀಡಿದೆ. ದೈನಂದಿನ ಬದುಕಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸುಸ್ಥಿರ ಅಭಿವೃದ್ಧಿಯತ್ತ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು ಎಂದರು.

ಅಮೆರಿಕಾದಲ್ಲಿ ಹಲವಾರು ವರ್ಷಗಳ ಕಾಲ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪುಂಡಲೀಕ ಕಿಣಿ ಮಾತನಾಡುತ್ತಾ, ಅಮೆರಿಕಾದಲ್ಲಿ ಬಟ್ಟೆಯ ಕೈಚೀಲಗಳನ್ನು ಸ್ವತಃ ಗ್ರಾಹಕರೇ ತೆಗೆದುಕೊಂಡು ಖರೀದಿಗೆ ಹೋಗಗಿದ್ದರೆ ಬರಿಗೈಯಲ್ಲಿ ವಾಪಾಸು ಕಳುಹಿಸಲಾಗುತ್ತದೆ. ಸ್ವ-ಇಚ್ಛೆಯಿಂದ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವ ವಿಚಾರಕ್ಕೆ ಪೂರ್ಣವಿರಾಮ ಹಾಕಿ ಪರ್ಯಾಯ ವಸ್ತುಗಳತ್ತ ಒಲವು ವ್ಯಕ್ತಪಡಿಸಬೇಕು. ನಿಸರ್ಗವನ್ನು ಪ್ರೀತಿಸಿದರೆ ಅದು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು.

ಬಳಿಕ ಪರಿಸರದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಕೈಚೀಲಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕ್ಲೀನ್ ಉಡುಪಿ ಪ್ರಾಜೆಕ್ಟ್ ಸದಸ್ಯರಾದ ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ,  ಗಣೇಶ್ ಪ್ರಸಾದ್ ಜಿ. ನಾಯಕ್,  ಉದಯ್ ನಾಯ್ಕ್,  ಮಾಜಿ ಸೈನಿಕ ವಾದಿರಾಜ್ ಹೆಗ್ಡೆ,  ಪಿ.ಎಸ್. ನಾಯಕ್, ಶನ್ಮುಖ ಅತ್ರಿ,  ಹರ್ಶಿತಾ ಭಟ್,  ಮಹಾಲಕ್ಷ್ಮಿ ದೇವಾಡಿಗ,   ನವ್ಯಶ್ರೀ ಶೆಟ್ಟಿ,  ಕೆ.ಎನ್. ಕಾರ್ತಿಕ್ ಉಪಸ್ಥಿತರಿದ್ದರು.

 
 
 
 
 
 
 

Leave a Reply