ಅಂಬಲಪಾಡಿ: ಸರಣಿ ಅಪಘಾತ; ಮಹಿಳೆ ಸ್ಥಿತಿ ಗಂಭೀರ!

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಅಂಬಲಪಾಡಿ ಬೈಪಾಸ್ ಬಳಿ ಸರಣಿ ಅಪಘಾತದಿಂದ ಹಲವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಅಂಬಲಪಾಡಿ ಸಮೀಪದ ಹೋಂಡಾ ಬೈಕ್ ಶೋರೂಮ್ ಬಳಿ ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರೊಂದು ಬ್ರೇಕ್ ಹಾಕಿದ ಪರಿಣಾಮ ಅದರ ಹಿಂದುಗಡೆಯಲ್ಲಿ ಬರುತ್ತಿದ್ದ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು ಇದರಿಂದ ಹಲವರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಇನ್ನೋವಾ ವಾಹನ, ಮಹೀಂದ್ರಾ ಎಕ್ಸ್ ಯುವಿ 300 ಕಾರು, ಟಾಟಾ ನೆಕ್ಸಾನ್ ಕಾರು ಸಂಪೂರ್ಣ ಜಖಂ ಆಗಿದ್ದು ಮಹೀಂದ್ರಾ ಎಕ್ಸ್ ಯುವಿ 300 ಕಾರಿನಲ್ಲಿದ್ದ ಕುಟುಂಬವೊಂದು ಅಫಘಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.

ಅಪಘಾತದಿಂದ ಸ್ವಲ್ಪ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ಮುಕ್ತಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

 
 
 
 
 
 
 
 
 
 
 

Leave a Reply