ದೇಶಸೇವೆಯೇ ಈಶ ಸೇವೆ: ಸವಿತಾ ಎರ್ಮಾಳ್

ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ” ಅಗ್ನಿಪಥ್ ಪ್ರೇರಣಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಮಂಗಳೂರು ವಿಭಾಗದ ವಿಭಾಗಾಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯೋಧರು ಭಾರತ ಮಾತೆಯ ಮುದ್ದಿನ ಮಕ್ಕಳು. ತಮ್ಮ ತಾಯಿ ನೆಲಕ್ಕಾಗಿ ಸರ್ವಸ್ವವನ್ನೂ ಬಲಿ ನೀಡುವ ಇವರು ಪ್ರಾತ: ಸ್ಮರಣೀಯರು. ದೇಶಕ್ಕೆ ಅವರು ಮಾಡುವ ಸೇವೆಯೇ ನಿಜವಾದ ಈಶ ಸೇವೆ ಎಂದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ಹದಿನೇಳು ವರ್ಷ ಯೋಧನಾಗಿ ದೇಶದ ರಕ್ಷಣೆಯಲ್ಲಿ ತೊಡಗಿ ಅಪೂರ್ವ ಅನುಭವ ಪಡೆದು ನಿವೃತ್ತಿ ಹೊಂದಿ ಪ್ರಸ್ತುತ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಹನೆಹಳ್ಳಿ ಬಾರ್ಕೂರು ಇಲ್ಲಿನ ತರಬೇತುದಾರರಾದ ಲ್ಯಾನ್ಸ್ ನಾಯಕ್ ರವಿಚಂದ್ರ ಶೆಟ್ಟಿ ಮಾತನಾಡಿ ದೇಶದ ಸಂರಕ್ಷಣೆಗಾಗಿ ದುಡಿಯುವುದು ಪುಣ್ಯದ ಕಾರ್ಯ ಎಂದರು. ಸಿಯಾಚಿನ್ ನಲ್ಲಿ ವಾತಾವರಣದೊಂದಿಗಿನ ಹೋರಾಟದ ಅನುಭವವನ್ನು ಹಂಚಿಕೊಳ್ಳುತ್ತಾ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಅನುಭವಗಳು, ಆಗುವ ಉಪಯೋಗಗಳನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಕೆಚ್ಚನ್ನು ಹೆಚ್ಚಿಸಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸಂಜೀವ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ನ ನೋಡಲ್ ಅಧಿಕಾರಿಯಾದ ಶ್ರೀಯುತ ಜಯಶಂಕರ್ ಕಂಗಣ್ಣಾರು, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಶ್ರೀಕಾಂತ್ ರಾವ್ , ವಿದ್ಯಾರ್ಥಿ ನಾಯಕರಾದ ಧನ್ಯ , ರಂಜಿತ್, ಉಪನ್ಯಾಸಕರು ಉಪಸ್ಥಿತರಿದ್ದರು.‌

 
 
 
 
 
 
 
 
 
 
 

Leave a Reply