ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಟ್ಯಾಂಕರ್ ಪಲ್ಟಿ; ಬೆಂಕಿಯ ಕೆನ್ನಾಲಗೆಗೆ ಮೂವರು ಬಲಿ!

ಪುಣೆ – ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ರಾಸಾಯನಿಕ ಪದಾರ್ಥ ತುಂಬಿದ್ದ ಟ್ಯಾಂಕರ್ ಒಂದು ಸೇತುವೆ ಮೇಲೆ ಪಲ್ಟಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಖಂಡಾಲಾ ಘಾಟ್‌ ಪ್ರದೇಶದಲ್ಲಿ ಸಂಭವಿಸಿದ ಈ ದುರಂತದಲ್ಲಿ ಕನಿಷ್ಟ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ಧಾರೆ.

ಈ ಘಟನೆಯಿಂದಾಗಿ ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಸಂಚಾರ ಕೆಲ ಕಾಲ ಸ್ಥಗಿತಕೊಂಡಿತ್ತು. ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದ ಟ್ಯಾಂಕರ್‌ ಅನ್ನು ತೆರವುಗೊಳಿಸಿ, ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ ನಡೆಸಿತು. ಈ ವೇಳೆ, ಎಕ್ಸ್‌ಪ್ರೆಸ್ ವೇ ಬಳಿಕ ಕುಣೆ ಎಂಬ ಗ್ರಾಮದ ರಸ್ತೆಯನ್ನು ಪರ್ಯಾಯವಾಗಿ ವಾಹನ ಸಂಚಾರಕ್ಕೆ ಬಳಸಿಕೊಳ್ಳಲಾಗಿತ್ತು.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಮೂರರಿಂದ ನಾಲ್ಕು ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿದ್ದವು. ಜೊತೆಗೆ ಹಲವು ಆಂಬುಲೆನ್ಸ್‌ಗಳೂ ಏಕಕಾಲಕ್ಕೆ ಘಟನಾ ಸ್ಥಳಕ್ಕೆ ರವಾನೆ ಆಗಿದ್ದವು. ಆದಷ್ಟು ಬೇಗ ಎಕ್ಸ್‌ಪ್ರೆಸ್ ವೇನಲ್ಲಿ ಬೆಂಕಿಗೆ ತುತ್ತಾಗಿದ್ದ ವಾಹನವನ್ನು ತೆರವುಗೊಳಿಸಿ, ಬೆಂಕಿ ನಂದಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲು ಸಿಬ್ಬಂದಿ ಶ್ರಮಿಸಿದರು.

ರಾಸಾಯನಿಕ ಪದಾರ್ಥ ತುಂಬಿದ್ದ ಟ್ಯಾಂಕರ್‌ ಉರುಳಿದ ಕೂಡಲೇ ಬೆಂಕಿ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ಯಾಂಕರ್‌ನ ಸಮೀಪದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ಬೆಂಕಿ ತಗುಲಿತ್ತು. ಟ್ಯಾಂಕರ್‌ನಲ್ಲಿ ಸಂಗ್ರಹಿಸಿದ್ದ ರಾಸಾಯನಿಕಗಳು ಅತ್ಯಂತ ಸೂಕ್ಷ್ಮ ಪದಾರ್ಥಗಳಾಗಿದ್ದು, ಬೆಂಕಿ ತಗುಲುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಕುಣೆ ಗ್ರಾಮದ ಬಳಿ ಸೇತುವೆ ಮೇಲೇ ಈ ಟ್ಯಾಂಕರ್ ಹೊತ್ತಿ ಉರಿದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡೋಕೆ ತುಂಬಾ ಸಮಯ ಬೇಕಾಗಿತ್ತು. ಹೀಗಾಗಿ, ಪರ್ಯಾಯ ರಸ್ತೆ ಹುಡುಕುವವರೆಗೆ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿತ್ತು.

ಮೊದಲಿಗೆ ಈ ಟ್ಯಾಂಕರ್ ವಾಹನ ಪಲ್ಟಿ ಹೊಡೆದ ಸಂದರ್ಭದಲ್ಲಿ ವಾಹನದ ಡೀಸೆಲ್ ಟ್ಯಾಂಕ್‌ನಿಂದ ಇಂಧನ ಸೋರಿಕೆ ಆಯ್ತು. ವಾಹನ ರಸ್ತೆಯಲ್ಲಿ ಉಜ್ಜಿಕೊಂಡು ಬಂದ ಕಾರಣ ಘರ್ಷಣೆ ಸಂಭವಿಸಿ ಬೆಂಕಿಯ ಕಿಡಿ ಡೀಸೆಲ್‌ಗೆ ತಗುಲಿತ್ತು. ಇದರಿಂದ ಆರಂಭವಾದ ಬೆಂಕಿ ನಂತರ ಟ್ಯಾಂಕರ್ ಒಳಗಿದ್ದ ರಾಸಾಯನಿಕದ ಸಂಪರ್ಕಕ್ಕೆ ಬಂತು. ಕೂಡಲೇ ಟ್ಯಾಂಕರ್ ಸ್ಫೋಟಗೊಂಡ ರೀತಿ ಅಗ್ನಿಯ ಕೆನ್ನಾಲಗೆ ಚಾಚಿತು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಪುಣೆ ಗ್ರಾಮಾಂತರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಿತೇಶ್ ಘಟ್ಟೆ ತಿಳಿಸಿದ್ದಾರೆ.

ಟ್ಯಾಂಕರ್ ಪಕ್ಕದಲ್ಲಿ ಸ್ಕೂಟರ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಆಕೆಯ ಮಕ್ಕಳಿಗೆ ಬೆಂಕಿ ತಗುಲಿದ ಪರಿಣಾಮ ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಹೆದ್ದಾರಿ ಸುರಕ್ಷತಾ ಗಸ್ತು ಪಡೆಯ ಸಹಾಯಕ ಇನ್ಸ್‌ಪೆಕ್ಟರ್ ಸುಮಯ್ಯ ಭಗವಾನ್ ಅವರು ಜಾಗೃತರಾದರು. ಕೊಲ್ಲಾಪುರ ಟೋಲ್ ಪ್ಲಾಜಾ ಹಾಗೂ ಉರ್ಸೆ ಟೋಲ್ ಪ್ಲಾಜಾದನಲ್ಲಿ ಭಾರೀ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಯ್ತು. ಕಾರು ಹಾಗೂ ಬಸ್‌ಗಳನ್ನು ಪುಣೆ – ಮುಂಬೈ ಹೆದ್ದಾರಿ ಮೂಲಕ ಲೋನಾವಲಾ ಎಗ್ಸಿಟ್‌ಗೆ ತೆರಳುವಂತೆ ನೋಡಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು. ಇದೀಗ ಪುಣೆ – ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಸುಗಮ ಸಂಚಾರ ಪುನಾರಂಭವಾಗಿದ್ದು, ಘಟನಾ ಸ್ಥಳದಲ್ಲಿ ಅವಶೇಷಗಳನ್ನು ತೆರವು ಮಾಡಿ ದುರಸ್ತಿ ಕೆಲಸವನ್ನೂ ಪೂರ್ಣಗೊಳಿಸಲಾಗಿದೆ.

 
 
 
 
 
 
 
 
 
 
 

Leave a Reply