ಶ್ರೀಕೃಷ್ಣ ಪರಮಾತ್ಮ ಅನೇಕ ಕಲೆಗಳನ್ನು ಮೈಗೂಡಿಸಿಕೊಂಡು ಜಗತ್ತಿಗೆ ಕಲೆಯನ್ನು ಪಸರಿಸಿದ್ದಾನೆ ~ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು

ಭಾರತೀಯ ಕಲೆಗಳು ಭಾರತದ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯಾಗಿ ಜಗತ್ತಿಗೇ ಪಸರಿಸಿದೆ. ಇದು ದೇಹ ಮತ್ತು ಮನಸ್ಸಿಗೆ ದೈವೀ ಶಕ್ತಿಯ ಜೊತೆಗೆ ಆನಂದ ಸಿಗುವುದು ಎಂದು ಕಾಣಿಯೂರು ಮಠಾಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. 
ಅವರು ಭಾನುವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ(ರಿ.) ಉಡುಪಿ ಇವರಿಂದ ಭರತಮುನಿ ಜಯಂತ್ಯು ತ್ಸವ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, ಶ್ರೀಕೃಷ್ಣ ಪರಮಾತ್ಮ  ಕಲಾವಿದನಾಗಿ, ಕಲಾ ಪೋಷಕನಾಗಿ ಅನೇಕ ಕಲೆಗಳನ್ನು ಮೈಗೂಡಿಸಿಕೊಂಡು ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ ಎಂದರು.
ಹಿರಿಯ ನ್ಯಾಯವಾದಿ ಎಸ್.ಎಸ್.ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ನಾಟ್ಯಾರಾಧನಾ ಕಲಾಕೇಂದ್ರ (ರಿ.) ಗುರು ವಿದುಷಿ ಸುಮಂಗಲಾ ರತ್ನಾಕರ್, ಕೊಡವೂರು ಉಡುಪ ರತ್ನ ಪ್ರತಿಷ್ಠಾನದ ನಿರ್ದೇಶಕಿ ಪೂರ್ಣಿಮಾ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನೃತ್ಯ ವಿಭಾಗದ ಮುಖ್ಯಸ್ಥ ಕರ್ನಾಟಕ ಕಲಾಶ್ರೀ ಡಾ ಕೆ. ಕುಮಾರ್ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ,ಮಂಗಳೂರು ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ , ಮೃದಂಗ ಮತ್ತು ಮೋರ್ಸಿಗ್ ವಾದಕ, ಕರ್ನಾಟಕ ಕಲಾಶ್ರೀ ಮೈಸೂರು ಎಂ.ಗುರುರಾಜ್ ಅವರಿಗೆ ಭರತ ಪ್ರಶಸ್ತಿ, ಚಿತ್ರ ಕಲಾವಿದ ಉದಯ ಕುಮಾರ್ ಅವರಿಗೆ ಕಲಾರ್ಪಣಾ ಪ್ರಶಸ್ತಿ ಮತ್ತು ವಿದುಷಿ ಅದಿತಿ ಸನ್ನಿ, ವಿದುಷಿ ಅಶ್ವಿನಿ ಮನೋಹರ್, ವಿದುಷಿ ಸ್ವಾತಿ ಉಪಾಧ್ಯ ಅವರುಗಳಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ಗುರು ವೈ.ವಿಶ್ವರೂಪ ಮಧ್ಯಸ್ಥ ಮತ್ತು ಗೋವಿಂದ ರಾವ್ ಬೆಂಗಳೂರು ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕೃಷ್ಣ ಮಠದ ಮುಂಬಾಗದಿಂದ  ರಥಬೀದಿಯಲ್ಲಿ ರಾಜಾಂಗಣದ ತನಕ ನಟರಾಜ ಮೂರ್ತಿ, ನಾಟ್ಯ ಶಾಸ್ತ್ರ ಗ್ರಂಥ, ಗಣ್ಯರನ್ನೊಳಗೊಂಡು ಭವ್ಯ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸಂಜೆ ನೀಲಾವರ ವೈ. ವೀಣಾ ಎಂ.ಸಾಮಗ ನೇತೃತ್ವದಲ್ಲಿ, ವಿಶ್ವರೂಪ ಮಧ್ಯಸ್ಥ ನಿರ್ದೇಶನದಲ್ಲಿ ಮತ್ತು ವಿದ್ವಾನ್ ಶ್ರೀಧರ ಆಚಾರ್ಯ ಸಂಯೋಜನೆಯಲ್ಲಿ ಭರತ ಯಕ್ಷ ನೃತ್ಯ ನವರಸ ಕೃಷ್ಣ ಪ್ರದರ್ಶನಗೊಂಡಿತು.
ರಾಧಾಕೃಷ್ಣ ನೃತ್ಯ ನಿಕೇತನ(ರಿ.)ದ ವಿದುಷಿ ವೀಣಾ ಎಂ.ಸಾಮಗ ಪ್ರಾಸ್ತಾವಿಸಿ, ಸ್ವಾಗತಿಸಿದರು. ಡಾ.ಸರಸ್ವತಿ, ಪವನ್ ರಾಜ್ ಸಾಮಗ, ಸಂಧ್ಯಾರಾಣಿ ಸನ್ಮಾನಿತರನ್ನು ಪರಿಚಯಿಸಿದರು. ಪೃಥ್ವೀರಾಜ್ ಸಾಮಗ ವಂದಿಸಿದರು. ಅಶ್ವಥ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply