ಕುಂದಾಪುರ: ಗಮಕ ಗಾಯನ ಮತ್ತು ವ್ಯಾಖ್ಯಾನ~ ಡಾ. ಪಾರ್ವತಿ ಜಿ.ಐತಾಳ್

ಪುರಾಣ ವಾಚನ ಹಾಗೂ ವ್ಯಾಖ್ಯಾನಗಳನ್ನು ಮಾಡುವ ಪದ್ಧತಿ ಭಾರತದ ಎಲ್ಲೆಡೆ ಬಹಳ ಕಾಲದಿಂದ ಪರಂಪರಾಗತವಾಗಿ ನಡೆದುಕೊಂಡು ಬಂದಿದೆಯಾದರೂ ಕರ್ನಾಟಕದ ಗಮಕ ಕಲೆಗೆ ಅದರದೇ ಆದ ವಿಶೇಷ ಮಹತ್ವವಿದೆ. ಈ ಪ್ರಾಚೀನ ಕಲೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರವು ಗಮಕ ಕಲಾ ಪರಿಷತ್ತನ್ನು ಸ್ಥಾಪಿಸಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಗಮಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾಯಿತು.

ಇಂಥ ಒಂದು ಗಮಕ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ಗಮಕ ಕಲಾ ಪರಿಷತ್ತಿನ ಘಟಕಗಳು ಆಶ್ರಯದಲ್ಲಿ ಕುಂದಾಪುರದ ಪ್ರಸಿದ್ಧ ನ್ಯಾಯವಾದಿ ಹಾಗೂ ಕಲಾಪೋಷಕರಾದ ಎಂ.ಎಸ್.ಎನ್ .ಹೆಬ್ಬಾರ್ ಅವರ ಮನೆಯ ವಿಶಾಲವಾದ ಚಾವಡಿಯಲ್ಲಿ ಸುಮಾರು ನೂರು ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ಗಮಕ ಗಾಯಕಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಹಾಗೂ ಪ್ರಸಿದ್ಧ ವ್ಯಾಖ್ಯಾನಕಾರರಾದ ರಾಘವೇಂದ್ರ ರಾವ್ ಪಡುಬಿದ್ರಿಯವರ ಮೂಲಕ ನಡೆಯಿತು. ಕಾಳಿದಾಸನ ‘ಮೇಘದೂತ’ದ ಕಥೆಯನ್ನು (ದ.ರಾ.ಬೇಂದ್ರೆಯವರ ಅನುವಾದ) ಆಧರಿಸಿದ ಈ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರನ್ನು ಅಪಾರವಾಗಿ ಮುದಗೊಳಿಸಿತು.

ಕಾಳಿದಾಸನ ಖಂಡಕಾವ್ಯ ‘ಮೇಘದೂತ’ವು ಕುಬೇರನ ಅರಮನೆಯ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಯಕ್ಷನೊಬ್ಬ ತನ್ನ ಒಡೆಯನ ಶಾಪಕ್ಕೆ ಈಡಾಗಿ ಪಾಡು ಪಟ್ಟ ಕಥೆಯನ್ನು ಹೇಳುತ್ತದೆ. ಶಾಪಕ್ಕೆ ಕಾರಣವು ಕಾವ್ಯದಲ್ಲಿ ಸ್ಪಷ್ಟವಾಗಿಲ್ಲ. ಶಾಪದ ಪ್ರಕಾರ ಹೊಸದಾಗಿ ಮದುವೆಯಾದ ಯಕ್ಷನು ತಾನು ಅಪಾರವಾಗಿ ಪ್ರೀತಿಸುವ ಹೆಂಡತಿಯಿಂದ ಒಂದು ವರ್ಷದ ಕಾಲ ದೂರವಿರಬೇಕು. ಹಾಗೆ ಶಾಪ ತಾಗಿದ ಕ್ಷಣವೇ ಯಕ್ಷನು ಉತ್ತರದ ಹಿಮಾಲಯದ ಬಳಿಯ ಕುಬೇರನ ಅರಮನೆಯಿರುವ ಅಲಕಾಪುರಿಯಿಂದ ದಕ್ಷಿಣದ ಚಿತ್ರಕೂಟದ ಬಳಿಯ ರಾಮಗಿರಿಗೆ ಬಂದು ಬೀಳುತ್ತಾನೆ.

(ಇದು ಶ್ರೀರಾಮನು ಸೀತೆಯು ಅಪಹರಣದ ಸಂದರ್ಭದಲ್ಲಿ ವಿರಹ ವೇದನೆಯನ್ನು ಅನುಭವಿಸಿದ ಸ್ತಳವೂ ಹೌದು.). ಪ್ರಿಯತಮೆಯ ವಿರಹದ ಉರಿಯನ್ನು ತಾಳಲಾರದೆ ಯಕ್ಷನು ಸಂಕಟದಲ್ಲಿ ಬೇಯುತ್ತಾ ದಿನಗಳೆಯುತ್ತಾನೆ. ಆಷಾಢ-ಶ್ರಾವಣದ ಕಾರ್ಮೋಡಗಳು ಆಕಾಶವನ್ನು ಕವಿದಾಗ ಅವನ ಸಂಕಟ ಉಲ್ಬಣಿಸುತ್ತದೆ. ಆದರೆ ಅವುಗಳ ನಡುವೆ ಆನೆಯಾಕಾರದ ಒಂದು ಮೋಡವನ್ನು ಕಂಡಾಗ ಅದು ಶುಭಶಕುನ ಎಂಬ ನಂಬಿಕೆಯು ಆತನಲ್ಲಿ ಆಶಾಭಾವ ಮೂಡಿಸುತ್ತದೆ. ಆ ಮೋಡದ ಮೂಲಕ ತನ್ನ ಪ್ರಿಯತಮೆಗೆ ತನ್ನ ಪ್ರೀತಿಯ ಸಂದೇಶವನ್ನು ಕಳುಹಿಸುವ ಆಲೋಚನೆ ಬರುತ್ತದೆ.

ಹಾಗೆ ಆ ಮೋಡವನ್ನು ಉದ್ದೇಶಿಸಿ ಅವನು ಭಕ್ತಿ -ಪ್ರೀತಿಗಳನ್ನು ವ್ಯಕ್ತಪಡಿಸಿ ಮಾತನಾಡುತ್ತಾನೆ. ತನ್ನ ಪ್ರಿಯತಮೆಯ ಬಳಿಗೆ ಹೋಗಿ ತನ್ನ ಪ್ರೀತಿಯ ಬಗ್ಗೆ ಅವಳಿಗೆ ತಿಳಿಸಬೇಕೆಂದು ಯಕ್ಷನು ಮೋಡವನ್ನು ಬೇಡಿಕೊಳ್ಳುತ್ತಾನೆ. ಹಾಗೆ ಅಲಕಾಪುರಿಗೆ ಹೋಗುವಾಗ ದಾರಿಯುದ್ದಕ್ಕೂ ಮೋಡವು ಸುರಿಸುವ ಮಳೆಯ ನೀರಿಗಾಗಿ ಬಾಯ್ದೆರೆದು ಚಾತಕ ಪಕ್ಷಿಗಳಂತೆ ಕಾದು ನಿಂತ ಪರ್ವತಗಳು, ನದಿಗಳು, ವೃಕ್ಷಗಳು, ಪ್ರಾಣಿ-ಪಕ್ಷಿಗಳನ್ನು ಭೇಟಿಯಾಗಿ, ಎಲ್ಲರನ್ನೂ ತೃಪ್ತಿ ಪಡಿಸಿ ಹೋಗಬೇಕೆಂದೂ, ಉಜ್ಜಯಿನಿ ತಲುಪಿದಾಗ ಅಲ್ಲಿನ ಚಂದ್ರಮೌಳೀಶ್ವರನ ಗುಡಿಯಲ್ಲಿ ಪೂಜೆ ಸಲ್ಲಿಸಿ ಅನಂತರ ಅಲಕಾಪುರಿಗೆ ಹೋಗಿ ಕುಬೇರನ ಅರಮನೆಯ ಉಪ್ಪರಿಗೆಯಲ್ಲಿ ವಿರಹದ ಬೇಗೆಯಿಂದ ಬಳಲುತ್ತಿರುವ ತನ್ನ ಪ್ರಿಯತಮೆಗೆ ತನ್ನ ಪ್ರೀತಿಯ ಸಂದೇಶವನ್ನು ನೀಡಬೇಕೆಂದು ಆರ್ತನಾಗಿ ಬೇಡುತ್ತಾನೆ.

ಹೀಗೆ ಬೇಡುವ ನೆಪದಲ್ಲಿ ಕಾಳಿದಾಸನು ದೇಶದ ಉದ್ದಗಲಕ್ಕೂ ಕಾಣುವ ಪ್ರಾಕೃತಿಕ ಸೌಂದರ್ಯವನ್ನು ಚಿತ್ರಿಸುತ್ತಾನೆ. ಜೊತೆಗೆ ಆಕಾಶ-ಭೂಮಿಗಳ ನಡುವಣ ಪ್ರಣಯ ಬಂಧವನ್ನು ರೂಪಕವನ್ನಾಗಿಸಿ ಗಂಡು-ಹೆಣ್ಣುಗಳ ಮಿಲನ-ವಿರಹಗಳಿಗೆ ಪರೋಕ್ಷವಾಗಿ ಹೋಲಿಸುತ್ತಾನೆ. ಅಚೇತನ ಮೋಡಕ್ಕೆ ಚೇತನವನ್ನು ಕೊಟ್ಟು ಈ ರೀತಿ ಚಿತ್ರಿಸುವ ಕಾಳಿದಾಸನ ಕಾವ್ಯ ಕಲ್ಪನೆ ಅದ್ವಿತೀಯವಾದದ್ದು.‌

ಮಂಜುಳಾ ಅವರು ತಮ್ಮ ತುಂಬು ಶಾರೀರದಿಂದ ಪದ್ಯಗಳನ್ನು ಅರ್ಥವತ್ತಾಗಿ ವಾಚಿಸಿದರೆ ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಗಳ ಪರಿಣತಿ ಇರುವ ರಾಘವೇಂದ್ರ ರಾವ್ ಅಲ್ಲಲ್ಲಿ ಮೂಲ ಸಂಸ್ಕೃತ ಕಾವ್ಯದ ಪದ್ಯಗಳನ್ನೂ ಉಲ್ಲೇಖಿಸಿ ಬೇಂದ್ರೆಯವರು ಕನ್ನಡಿಗರ ಸುಲಭ ಅರ್ಥೈಸಿಕೊಳ್ಳುವಿಕೆಗೆ ಅನುಕೂಲವಾಗುವಂತೆ ಮಾಡಿದ ಬದಲಾವಣೆಗಳನ್ನು ತೌಲನಿಕವಾಗಿಯೂ ವ್ಯಾಖ್ಯಾನಿ ಸಿದರು. ಸುಶ್ರಾವ್ಯ ಗಾಯನದ ಜೊತೆಗಿನ ವಿದ್ವತ್ಪೂರ್ಣ ವ್ಯಾಖ್ಯಾನದ ಮೂಲಕ ಕಾರ್ಯಕ್ರಮವು ಕಳೆಗಟ್ಟಿತು. ಜನರು ಆಧುನಿಕತೆಗೆ ತಮ್ಮನ್ನು ಒಡ್ಡಿಕೊಂಡು ಪರಂಪರೆಯನ್ನು ಮಚರೆಯುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಕಾರ್ಯಕ್ರಮಗಳು ಆಗಾಗ ನಡೆಸುವ ತುರ್ತು ನಮ್ಮ ಮುಂದೆ ಇದೆ.
~ಡಾ. ಪಾರ್ವತಿ ಜಿ.ಐತಾಳ್

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply