ಮನೆಯೇ ಗ್ರಂಥಾಲಯ ಅಭಿಯಾನ ಪುಸ್ತಕ ಪ್ರೀತಿಯ ಸಾಕ್ಷಿ ಪ್ರಜ್ಞೆ ~ಗಣೇಶ್ ಜಾಲ್ಸೂರು

ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿಯ ಉಸಿರನ್ನಾಗಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ವಿನೂತನವಾದ ಹೊಸ ಅಭಿಯಾನವನ್ನು ಕೈಗೆತ್ತಿಕೊಳ್ಳುತ್ತಲೇ ಇದೆ. ಅದರಲ್ಲೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾದ ಪರಿಕಲ್ಪನೆ ಯೋಚನೆಯ ಯೋಜನೆಯು ಒಂದಲ್ಲ ಒಂದು ರೀತಿಯಲ್ಲಿ ವಿಶೇಷವಾದ ಕಾರ್ಯಕ್ರಮವಾಗಿ ಎಲ್ಲರ ಗಮನವನ್ನು ಸೆಳೆಯುತ್ತಲೇ ಇದೆ.ಅಂತೆಯೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಬಾರಿಯೂ ವಿನೂತವಾಗಿ ಪರಿಚಯಿಸಿದ ಕಾರ್ಯಕ್ರಮವೇ ಮನೆಯೇ ಗ್ರಂಥಾಲಯ. ಇದೊಂದು ಪುಸ್ತಕ ಪ್ರೇಮಿಯನ್ನು ಗುರುತಿಸುವ ಸೃಜಿಸುವ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉಳಿಸುವ ಆರಾಧಿಸುವ ಹೊಸ ಕಾರ್ಯಕ್ರಮವಾಗಿದೆ. ಒಂದು ಒಳ್ಳೆಯ ಪುಸ್ತಕ ಒಳ್ಳೆಯ ಮನಸ್ಸು ಒಬ್ಬ ಒಳ್ಳೆಯ ಸಹೃದಯನನ್ನು ನಿರ್ಮಿಸಬಲ್ಲದು.

ಇದು ಉಡುಪಿ ತಾಲೂಕು ಸಾಹಿತ್ಯ ಪರಿಷತ್ತು ಘಟಕ ತಂಡವು ಸಾಹಿತ್ಯ ವಲಯಕ್ಕೆ ನೀಡುವ ಅವಿಸ್ಮರಣೀಯ ಕಾರ್ಯಕ್ರಮವೆಂದೇ ಹೇಳಬಹುದು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಉತ್ತಮ ಮಾಅಗದರ್ಶನ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ . ಇವರು ಈಗಾಗಲೇ ನಿರಂತರವಾಗಿ ಸಾಹಿತ್ಯ ಕಂಪನ್ನು ಜಿಲ್ಲಾದ್ಯಂತ ಪಸರಿಸುತ್ತಲೇ ಇರುವರು. ಇದೀಗ ಮನೆಯೇ ಗ್ರಂಥಾಲಯ ಅಭಿಯಾನ ಕಾರ್ಯಕ್ರಮದಲ್ಲೊಂದು ಹೊಸತನದ ಮೆರುಗು.ಹೊಸ ಕಾಂತಿ. ಹಾಗಾಗಿ ಇದು ಔಚಿತ್ಯ ಪೂರ್ಣ, ಸತ್ವಪೂರ್ಣ, ಅರ್ಥಪೂರ್ಣ ಕಾರ್ಯಕ್ರಮವಾಗಿ ಸಂಪೂರ್ಣ ಯಶಸ್ಸು ಕಾಣುತ್ತಲೇ ಮುಂದುವರಿಯುತ್ತಿದೆ.

ಮುಖ್ಯವಾಗಿ ಆಧುನಿಕ ತಂತ್ರಜ್ಞಾನದ ವಿಸ್ಮಯದ ಮಧ್ಯೆ ಭಾವ ಪ್ರಪಂಚಕ್ಕೆ ಸಮಯವನ್ನು ಮೀಸಲಿರಿಸಿ ಎಳೆಯ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಿಸುವ ಪ್ರಯತ್ನಕ್ಕೆ ಇದು ಪೂರಕವಾದ ಅಭಿಯಾನವಾಗಿದೆ. ಮಕ್ಕಳ. ಮನಸ್ಸು ಆಕರ್ಷಿಸುವಂತಹ ವಾತಾವರಣ ಪ್ರತೀ ಮನೆಯ ಪುಟ್ಟ ಪುಟ್ಟ ಗ್ರಂಥಾಲಯದ ಮೂಲಕ ಆಗಬೇಕೆಂಬ ಇರಾದೆಯೂ ಇದೆ. ಅಂತೆಯೇ ಈಗಂತೂ ಕೈಯಲ್ಲಿರುವ ಮಾಂತ್ರಿಕ ಮಣಿಯಂತಿರುವ ಮೊಬೈಲನ್ನು ಗಂಟೆಗೆಗಟ್ಟಲೆ ಹಿಡಿದು ತಲೆತಗ್ಗಿಸಿ ‌ನೋಡುತ್ತಾ ಕುಟ್ಟುವ ಕೆರೆಯುವ ಸಮಯದ ಅರಿವಿಲ್ಲದೇ ಲೀನವಾದವರಿಗೆ ಹೊಸ ಬದಲಾವಣೆಯಾಗಿ ತಲೆ ತಗ್ಗಿಸಿ ಪುಸ್ತಕ ಓದಿ ತಿಳಿದು, ಜಗತ್ತೇ ತಲೆ ಎತ್ತಿ ನಮ್ಮನ್ನು ನೋಡುವಂತೆ ಮಾಡುವ ಒಳ್ಳೆಯ ಪುಸ್ತಕಗಳನ್ನು ಪರಿಚಯ ಮಾಡುವ ಅಭಿಯಾನ ಇದಾಗಿದೆ..ಇದೀಗ ಕಾರ್ಕಳದಲ್ಲಿ ಕ್ರಿಯೇಟಿವ್ ಕಾಲೆಜಿನ ಪುಸ್ತಕ ಮನೆಯ ಬಳಗವು ಮನೆ ಮನೆಗೆ ಪುಸ್ತಕ ಅಭಿಯಾನವನ್ನು ಮಾಡುತ್ತಿದ್ದು ಮೊಬೈಲ್ ಕೈಗೆ ಪುಸ್ತಕ ಕೊಡಿ ಕಾರ್ಯಕ್ರಮವಾಗಿದೆ. ಈ ಸಂದರ್ಭವನ್ನುಕೂಡ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ ಇದು ಕೂಡ ಸಂತಸದಾಯಕ ಸಂಗತಿಯೆನಿಸಿದೆ.

ಮನೆ ಮನೆಗೆ ಭೇಟಿ ನೀಡುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಉಡುಪಿ ತಾಲೂಕು ಘಟಕ ತಂಡವು ಮನೆಯೇ ಗ್ರಂಥಾಲಯ ಮನಸ್ಸೇ ಸಾಹಿತ್ಯಾಲಯ ಮಂತ್ರವನ್ನು ಪಠಿಸುತ್ತಾ ಭಿತ್ತಿ ಪತ್ರವನ್ನು ಹಿಡಿದು ಸಾಹಿತ್ಯ ಪ್ರೇಮಿಗಳ ಮನೆಗೆ ಮನೆಗೆ ಹಚ್ಚುವುದರ ಮೂಲಕ ಜ್ಞಾನ ಪ್ರಸಾರದಲ್ಲಿ ತೊಡಗಿದೆ. ಜೊತೆಗೆ ಮನೆ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ಕಾಣುವಂತಾಗಬೇಕು ಎಂಬ ಅಭಿಲಾಶೆಯನ್ನು ಹೊಂದಿದೆ.ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಹಿತಿಗಳು ಪುಸ್ತಕ ಪ್ರೇಮಿಗಳು ಪ್ರಾಧ್ಯಾಪಕರು ಉಪನ್ಯಾಸಕರು ಶಿಕ್ಷಕರು ಲೇಖಕರು ಕವಿಗಳು ಕಥೆಗಾರರು ಬರೆಹಗಾರರು ಊರಿನ ಹಿರಿಯರು ಪರಿಷತ್ತಿನ ಸದಸ್ಯರು ಅಂಕಣಕಾರರು ವಾಗ್ಮಿಗಳು ಜನಪ್ರತಿನಿಧಿಗಳು ಪತ್ರಕರ್ತರು ವಿದ್ಯಾರ್ಥಿಗಳು ಹೀಗೇ ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರೋತ್ಸಾಹಿಸುತ್ತಿದ್ದಾರೆ. ವಿಶೇಷವಾಗಿ ಶ್ರೀಸಾಮಾನ್ಯನೂ ಬಹಳ ಖುಷಿಯಿಂದ ನಗು ಬೀರಿ ಬರಮಾಡಿಕೊಳ್ಳುತ್ತಿದ್ದಾನೆ. ಈ ಅಭಿಯಾನದಿಂದ ಇನ್ನಷ್ಟು ಲೋಕ ಜ್ಞಾನದ ಮೂಲಕ ಜಗತ್ತಿನ ಆಗು ಹೋಗುಗಳನ್ನು ಮತ್ತು ಸಾಹಿತ್ಯ ಲೋಕದ ವಿರಾಟ ಸ್ವರೂಪವನ್ನು ಕೃತಿಗಳನ್ನು ಸಂಗ್ರಹಿಸಿ ಓದಿ ತಿಳಿಯಲು ಸಹಕಾರಿಯಾಗಿದೆ. ಅಂತಹ ಸದುದ್ದೇಶವನ್ನು ಹೊಂದಿದೆ. 

ಕೇವಲ ಕಾರ್ಯಕ್ರಮಗಳು ಸಮ್ಮೇಳನಗಳು ಭಾಷಣಗಳು ಉಪನ್ಯಾಸಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ನೇರವಾಗಿ ಜನರ ಮನೆಯ ಬಾಗಿಲಿಗೆ ತೆರಳಿ ಕ್ರಿಯಾತ್ಮಕವಾಗಿ ಕಾರ್ಯರೂಪಕ್ಕೆ ತರುತ್ತಿರುವುದು ನಿಜವಾಗಿಯೂ ನನಗಂತೂ ವೈಯಕ್ತಿಕವಾಗಿ ಖುಷಿ ತಂದಿದೆ. ಈ ಮೂಲಕ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಬರೆಯುವ ವಿಚಾರವನ್ನು ಹೇಳುವ ಕೇಳುವ ಪ್ರಸರಣ ಮಾಡುವ ಒಳ್ಳೆಯ ಹೊಸ ಸಂಗತಿಗಳನ್ನು ಓದಿ ಲೇಖನಗಳನ್ನು ಅಂಕಣಗಳನ್ನು ಬರೆಯುವ ಹೊಸ ಹುಮ್ಮಸ್ಸಿಗೆ ಹೊಸ ಮುನ್ನುಡಿಯನ್ನು ಬರೆದಂತಾಗಿದೆ. ಆ ಮೂಲಕ ಒಬ್ಬ ಒಳ್ಳೆಯ. ಲೇಖಕ ಒಳ್ಳೆಯ ಬರೆಹಗಾರನನ್ನು ಹೊಸದಾಗಿ ಪರಿಚಯಿಸಿಕೊಳ್ಳಲು ಇದೊಂದು ಸುವರ್ಣವಾಕಾಶವಾಗಿದೆ.ಅಂತೂ ರಾಜ್ಯದ್ಯಾಂತ ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡರೇ ಉಡುಪಿ ತಾಲೂಕು ಘಟಕ ವಿನೂತವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಅಯೋಜಿಸುತ್ತಲೇ ಇದೆ.ಇಂತಹ ಕಾರ್ಯಕ್ರಮಗಳು ಮತ್ತಷ್ಟು ಕನ್ನಡ ನಾಡು ನುಡಿಯ ಅಭಿಮಾನವನ್ನು ಎತ್ತಿ ಹಿಡಿಯುವಂತೆ ಮಾಡಿ ಎಲ್ಲರಿಗೂ ಪ್ರೇರಣದಾಯಕವಾದ ಅನುಸರಣೀಯ ಕಾರ್ಯಕ್ರಮವಾಗಿದೆ. 

ಪುಸ್ತಕಗಳು ಜ್ಞಾನ ಭಂಡಾರದ ಕೀಲಿಕೈ ಪುಸ್ತಕಗಳನ್ನು ಓದುವವನು ಬರೆಯುವವನು ಬರೆದ ಸಂಗತಿಗಳನ್ನು ಕೇಳಿ ತಿಳಿಯುವವನು. ಸದಾ ತನ್ನಲ್ಲಿ

ಚಿತ್ತ ಶಾಂತಿ ಹೊಂದುವನು. ಅಲ್ಲದೇ ಅನೇಕ ಪುಸ್ತಕಗಳನ್ನು ಓದಿದ ಒಬ್ಬ ಒಳ್ಳೆಯ ಓದುಗನಲ್ಲೊಂದು ಹೊಸ ಭಾವ ಪ್ರಪಂಚವು ಸೃಷ್ಟಿಗೊಂಡು ತಾನು ಕೂಡ ತಾನು ಕಂಡ ತಾನು ಗ್ರಹಿಸಿದ ತಾನು ಅನುಭವಿಸಿದ ಸಂಗತಿಗಳನ್ನು ಹೇ಼ಳಬೇಕೆಂದು ಬಯಸಿ ವಿಷಯವನ್ನು ತನ್ನ ಕೃತಿಯಲ್ಲಿ ಸೃಜಿಸುವ ಹೊಸ ಯೋಚನೆಯನ್ನು ಯೋಜನೆ ಮಾಡಿ ಪ್ರಕಟಗೊಳಿಸುವನು. ಮುಂದೆ ಉತ್ತಮ ಲೇಖಕನೂ ಆಗಬಲ್ಲನು.

 ಒಬ್ಬ ಒಳ್ಳೆಯ ಓದುಗ ಒಳ್ಳೆಯ ಲೇಖಕನಾಗಬಲ್ಲ ಎಂಬ ಮಾತೇ ಇದೆ. ಹಾಗಾಗಿ ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಈ ಜ್ಞಾನ ಪ್ರಸರಣದ ಮನೆಯೇ ಗ್ರಂಥಾಲಯ ಅಭಿಯಾನ ಮೂಲಕ ಒಂದು ಸುಸಂಸ್ಕೃತ ಮನಸ್ಸಿನ ಮನೆಯನ್ನು ನಿರ್ಮಾಣ ಮಾಡುವ, ವಿದ್ಯಾಮಾತೆ ಸರಸ್ವತಿಯ ಗುಡಿಯನ್ನು ನಿರ್ಮಾಣ ಮಾಡುವ ಪುಣ್ಯಪ್ರಧವಾದ ಅಭಿಯಾನ ಎಂದು ಹೇಳಲು ಖುಷಿಯಾಗಿದೆ.ಇದೊಂದು ಮುಂದೆ ಇಡೀ ರಾಜ್ಯದಲ್ಲೇ ನಡೆಯಬೇಕಾದ ಕಾರ್ಯಕ್ರಮವಾಗಿ ಬರಲಿ. ಇದು ಕೃತಿಕಾರರಿಗೆ ಓದುಗರಿಗೆ ಸಹೃದಯರಿಗೆ ಹೊಸ ಭಾವ ರೂಪ ಹೊಸ ಪ್ರೇರಣೆ ನೀಡಿದ ಅಭಿಯಾನ ಎಂದು ಹೇ಼ಳಬಹುದು. 

ನಾಡಿನ ಫ್ರಾಥಃಸ್ಮರಣೀಯ ಸಾಹಿತಿಗಳ ಪ್ರಸ್ತುತ ಇರುವ ಸಾಹಿತಿಗಳ ಬೌಧ್ಧಿಕ ಶ್ರಮದ ಚಿಂತನೆಗಳನ್ನು ,ಗೌರವಿಸುವ ಅವರ ವಿಚಾರಧಾರೆಗಳನ್ನು ಪರಿಚಯಿಸುವ ಈ ಆಭಿಯಾನ ಪ್ರಶಂಸನೀಯವಾದುದು. ಈ ಅಭಿಯಾನವು ಪ್ರತೀ ಮನೆಯಲ್ಲಿ ಪುಟ್ಟ ಗ್ರಂಥಾಲಯವು ನಿರ್ಮಾಣ ಮಾಡುವಂತಾಗಲಿ. ಪ್ರತೀ ಮನೆ ಮಂದಿಯ ಮಸ್ತಕದಲ್ಲಿ ಪುಸ್ತಕ ಹೊಸ ವಿಚಾರಗಳು ತಮ್ಮ ಬದುಕಿನ ಹಾದಿಗೆ ಕೈಪಿಡಿ ಕೈದೀವಿಗೆಯಾಗಲಿ.

 ಎಳೆಯ ಮಕ್ಕಳಲ್ಲಿ ಮತ್ತೆ ಪುಸ್ತಕ ಓದುವ ಪುಸ್ತಕ ಸಂಗ್ರಹಿಸುವ ಪುಸ್ತಕಗಳನ್ನು ಪೂಜಿಸುವ ಗೌರವಿಸುವ ಸುಸಂಸ್ಕೃತ ಮನಸ್ಸು ರೂಪುಗೊಳ್ಳುವಂತಾಗಲಿ. ಹಿರಿಯ ನಡೆಯನ್ನು ಎಳೆಯ ಮಕ್ಕಳು ಮುಂದುವರಿಸುವಂತಾಗಲಿ. ಗೃಹ ಶೋಭೆಗೆ ಇದೊಂದು ಹೊಸ ಕಾಂತಿಯನ್ನೀಯಲಿ. ಮತ್ತೊಮ್ಮೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಫರಿಷತ್ತಿನ ಅಧ್ಯಕ್ಷರಾದಿಯಾಗಿ ಇಡೀ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಸಾಹಿತ್ಯ ಪ್ರೇಮಿಗಳಿಗೆ ಶುಭವಾಗಲಿ.ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ನಡೆಯುವಂತಾಗಲಿ. ಶುಭಪ್ರಧವಾಗಿ ಸಾಗುವ ಅಭಿಯಾನದ ಯಾನಕ್ಕೆ ಶುಭ ಹಾರೈಕೆಗಳು

~ಗಣೇಶ್ ಜಾಲ್ಸೂರು

 ಶಿಕ್ಷಕ ಪುಸ್ತಕ ಓದುಗ

 
 
 
 
 
 
 
 
 
 
 

Leave a Reply