ಜೂ.21: ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಹೋಮ್ ಕೇರ್- ನೇತ್ರಶಾಸ್ತ್ರ ವಿಭಾಗಗಳ ಲೋಕಾರ್ಪಣೆ

ಉಡುಪಿ, ಜೂ.21: ಉಡುಪಿಯ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಲೊಂಬಾರ್ಡ್ ಹೋಮ್ ಕೇರ್ (ಮನೆ ಆರೈಕೆ) ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವು ಜೂ.21ರಂದು ಪೂರ್ವಾಹ್ನ 11 ಗಂಟೆಗೆ ಚಿಟ್ಟಾಡಿಯ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.

ನೂತನ ಸೇವೆಗಳನ್ನು ಸಿಎಸ್ ಎ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ಅತಿ ವಂ.ಹೇಮಚಂದ್ರ ಕುಮಾರ್ ಉದ್ಘಾಟಿಸಲಿರುವರು. ಆಸ್ಪತ್ರೆಯ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಆಸ್ಪತ್ರೆಯ ನೇತ್ರತಜ್ಞ ಡಾ.ಆರ್ಥರ್ ರೋಡ್ರಿಗಸ್ ಮತ್ತು ಹಿರಿಯ ವೈದ್ಯಾಧಿ ಕಾರಿ ಡಾ.ಗಣೇಶ್ ಕಾಮತ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿದ್ದಾರೆ.

ಹೋಮ್ ಕೇರ್ ಸೇವೆ: ಅನೇಕ ಹಿರಿಯ ನಾಗರಿಕರು ಮತ್ತು ಹಾಸಿಗೆ ಹಿಡಿದಿರುವ ಅಥವಾ ದೈಹಿಕ ಪರಿಶ್ರಮಕ್ಕೆ ತುಂಬಾ ದುರ್ಬಲರಾಗಿರುವ ರೋಗಿಗಳಿಗೆ ಹೋಮ್ ಕೇರ್ (ಮನೆ ಆರೈಕೆ) ಸೂಕ್ತ ಪರಿಹಾರವಾಗಿದೆ. ಕ್ಲಿನಿಕ್ ಆಥವಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ದಿನನಿತ್ಯದ ತಪಾಸಣೆಯ ಅಗತ್ಯವಿರುವ ರೋಗಿಗಳ ಅಗತ್ಯತೆಗಳನ್ನು ಪೂರೈಸಲು ಈ ಹೋಮ್ ಕೇರ್ ಸೇವೆಗಳನ್ನು ಪರಿಚಯಿ ಸುತ್ತಿದೆ. ಇದರ ಮೂಲಕ ಆಸ್ಪತ್ರೆಯ ಆರೈಕೆ ತಂಡವು ರೋಗಿಗಳನ್ನು ಅವರ ಮನೆಯ ಸೌಕರ್ಯದಲ್ಲಿ ಭೇಟಿ ಮಾಡುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.

ಹೋಮ್ ಕೇರ್ ಸೇವೆಗಳಲ್ಲಿ ಪ್ರಮುಖವಾಗಿ ಆಸ್ಪತ್ರೆಯ ವೈದ್ಯರು ಅಪರಾಹ್ನ 3 – 5 ಗಂಟೆಗಳ ನಡುವೆ ಮನೆ ಭೇಟಿ ನೀಡುವರು. ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ರೋಗಿಗಳನ್ನು ಅವರ ಮನೆಯಲ್ಲಿಯೇ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಿರುವರು. ಅದಲ್ಲದೆ ಶುಶ್ರೂಷಾ ಆರೈಕೆ, ಪ್ರಯೋಗಾಲಯ ಪರೀಕ್ಷೆಗಳು, ಫಿಸಿಯೋಥೆರಪಿ ಮತ್ತು ಮಾಸಿಕ ಔಷಧಿಗಳ ವಿತರಣೆ ಸೇವೆ ಕೂಡ ಲಭ್ಯ ಇರುತ್ತದೆ. 

ಆಸ್ಪತ್ರೆಯಲ್ಲಿ ನೇತ್ರತಜ್ಞ ಡಾ. ಆರ್ಥರ್ ರೋಡ್ರಿಗಸ್ ಹೊರರೋಗಿ ಸೇವೆಗಳನ್ನು ನಿಯಮಿತವಾಗಿ ಬೆಳಗ್ಗೆ 9:30ರಿಂದ 12:30ರವರೆಗೆ ಒದಗಿಸಲಿದ್ದಾರೆ. ಅವರಲ್ಲದೆ ಕನ್ಸಲ್ಟೆಂಟ್ ನೇತ್ರತಜ್ಞ ಡಾ. ನರೇಂದ್ರ ಶೆಣೈ ಸೇವೆಗಳನ್ನು ಒದಗಿಸಲಿದ್ದಾರೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಸಂಪೂರ್ಣ ಶ್ರೇಣಿಯ ನೇತ್ರಶಾಸ್ತ್ರ ಸೇವೆಗಳನ್ನು ಕೈಗೆಟುಕುವ ವೆಚ್ಚದಲ್ಲಿ ಒದಗಿಸುವ ಗುರಿಯನ್ನು ಆಸ್ಪತ್ರೆ ಹೊಂದಿದೆ ಎಂದು ಲೊಂಬಾರ್ಡ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 

Leave a Reply