ಕರಾವಳಿಯ ರಂಗನಟಿ ಸುಜಾತ ಶೆಟ್ಟಿಯವರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ – 2024

ಕರಾವಳಿಯ ರಂಗನಟಿ ಸುಜಾತ ಶೆಟ್ಟಿಯವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಕೊಡ ಮಾಡುತ್ತಿರುವ ಈ ಬಾರಿಯ “ಮಲಬಾರ್ ವಿಶ್ವ ರಂಗ ಪುರಸ್ಕಾರ – 2024”

ಮೊಗ್ಗರಳಿ ಹೂವಾಗುವ ವಯೋಮಾನದ ಮಕ್ಕಳ ಪಾಲಿಗೆ ಸರಿ ದಾರಿ ತೋರಿ ಮುನ್ನಡೆಸುವ ಅವರ ಅಚ್ಚುಮೆಚ್ಚಿನ ಶಿಕ್ಷಕಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಬೀದಿ ನಾಟಕ, ರೂಪಕ, ಚಲನಚಿತ್ರಗಳಲ್ಲಿ ಪಾತ್ರಕ್ಕೆ ಜೀವ ಕಳೆ ನೀಡುವ ಅಭಿನೇತ್ರಿ, ಒಂದಷ್ಟು ಕಿರು ನಾಟಕಗಳ ನಿರ್ದೇಶಕಿ, ನಿರೂಪಕಿ ಯಾಗಿ ಪ್ರಶಸ್ತಿಗಳ ಸರಮಾಲೆಯನ್ನೇ ಕೊರಳಲ್ಲಿ ಧರಿಸಿ ಎಲ್ಲರಿಂದ ಸೈ ಎನಿಸಿಕೊಂಡ ಸೌಮ್ಯ ಸ್ವಭಾವದ ಮೃದು ಮಾತಿನ ತುಳುನಾಡಿನ ಮಣ್ಣಿನ ಮಣಿ, ಗೃಹಿಣಿ ಸುಜಾತ ಶೆಟ್ಟಿ. ಮೂಲತಃ ಮೂಡುಬಿದ್ರೆ ಯವರಾಗಿರುವ ಸುಜಾತಾ ರವರ ಪತಿ ಚಂದ್ರಹಾಸ ಹೊಟ್ಟೆಪಾಡಿಗಾಗಿ ವಿದೇಶದಲ್ಲಿ

ನೆಲೆಸಿದ್ದು, ಅಮ್ಮನ ಪ್ರೀತಿಯ ನೆರಳಾಗಿ ಸದಾ ಅಂಟಿಕೊಂಡು ಬೆಳೆಯುತ್ತಿರುವ ಪುಟ್ಟ ಹುಡುಗಿ ಭಕ್ತಿ… ತಾಯಿಯ ಪಾಲಿಗೆ ಸರ್ವಸ್ವ.

ಸುಜಾತ ಶೆಟ್ಟಿ ಅವರು ವಿದ್ಯೆಯಲ್ಲೂ ವಿನಯದಲ್ಲೂ ನಟನೆಯಲ್ಲೂ ಶ್ರೀಮಂತರು. ಎಂಎ, ಬಿಎಡ್, ಎಂಫಿಲ್ ಪದವೀಧರರು.

ವೃತ್ತಿಯ ನೆಲೆಯಲ್ಲಿ ಸುಜಾತ ಉಡುಪಿಯ ಮಣಿಪಾಲದ ಪದವಿ ಪೂರ್ವ ಕಾಲೇಜಿನಲ್ಲಿ, ಮೂಡುಬಿದರೆಯ ಶ್ರೀ ಮಹಾವೀರ ಕಾಲೇಜಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಲ್ಲೂ ಸಮಾಜಶಾಸ್ತ್ರದ ಉಪನ್ಯಾಸಕಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಧ್ಯಾಪನದ ಜೊತೆ ಉಳಿದ ಬಿಡುವಿನ ಸಮಯದಲ್ಲಿ ಓರ್ವ ಪ್ರಬುದ್ಧ ಖ್ಯಾತ ಕಲಾವಿದೆಯಾಗಿಯೂ ಮೂಡಿಬಂದಿದ್ದಾರೆ. ಇವರು ನಮ್ಮ ನಾಡು, ನುಡಿ, ಸಂಸ್ಕೃತಿ, ಹಾಗೂ ಕಲಾಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ… ಅನಂತ.

ಮಾತೆ ಸರಸ್ವತಿ ಅವರ ಕೈ ಹಿಡಿದು ನಡೆಸುತ್ತಿದ್ದಾರೆ. ರಂಗದಲ್ಲಿ ಅವರು ನಿರ್ವಹಿಸುವ ಪ್ರತಿಯೊಂದು ಪಾತ್ರಗಳೂ ಕೂಡ ಜನರ ಹೃದಯವನ್ನು ತಟ್ಟುವ ಮನಸ್ಸನ್ನು ಕೆದುಕುವ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುವ ಅಭಿನಯದ ಅಭಿನೇತ್ರಿ.

ಮಕ್ಕಳಿಗಾಗಿ ಸಣ್ಣ ನಾಟಕಗಳ ರಚನೆ ನಿರ್ದೇಶನ, ರೂಪಕಗಳ ರಚನೆ, ಕಾರ್ಯಕ್ರಮದ ನಿರೂಪಣೆ ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಸಹಪಾಠಿಗಳನ್ನು ತನ್ನ ವಿದ್ಯಾರ್ಥಿಗಳನ್ನು ಕೂಡ ತನ್ನೊಂದಿಗೆ ಸೇರಿಸಿಕೊಂಡು ಕಲಾಕ್ಷೇತ್ರದ ಬೆಳವಣಿಗೆಗೆ ಕಾರಣರಾದವರು ಇವರು.

ಸುಜಾತ ತನ್ನ ಬಾಲ್ಯದ ದಿನಗಳಿಂದಲೇ ಕಲೆ ನಟನೆ ಇತ್ಯಾದಿಗಳ ಬಗ್ಗೆ ಅತೀವ ಆಶಯವನ್ನು ಇಟ್ಟುಕೊಂಡು ಕನಸುಗಳನ್ನು ಕಟ್ಟಿಕೊಂಡು ಬೆಳೆದವರು. ಚಿಕ್ಕವರಿದ್ದಾಗ ನಿರ್ವಹಿಸಿದ ನಾಟಕ ರೂಪಕಗಳಲ್ಲಿ ಒಂದು ರೂಪಕ ದಕ್ಷ ಯಜ್ಞದ ವೀರಭದ್ರನ ಪಾತ್ರ ಎಲ್ಲರ ಮನಗೆದ್ದಿದ್ದು ಅದರಿಂದ ಪಡೆದ ಯಶಸ್ಸಿನ ಹೊಗಳಿಕೆ ಇಂದಿಗೂ ಸ್ಪೂರ್ತಿ ದಾಯಕವಾಗಿ ಅವರನ್ನು ಮುನ್ನಡೆಸುತ್ತಿದೆ. ಅವರ ನಟನೆಯ ನಾಟಕಗಳು ಲೆಕ್ಕವಿಲ್ಲದಷ್ಟು. ಅಂಗರ ಎಂಬ ತುಳು ನಾಟಕದ ಅಭಿನಯದೊಂದಿಗೆ ಇವರ ರಂಗ ಪಯಣ ಪ್ರಾರಂಭವಾಯ್ತು. ರಂಗಭೂಮಿ ಉಡುಪಿಯ ಯಶಸ್ವಿ ನಾಟಕಗಳಾದ ಕಾಲಚಕ್ರ ಹಾಗೂ ನಾಗಮಂಡಲ ನಾಟಕದಲ್ಲಿ ಅದ್ಭುತ ಅಭಿನಯವನ್ನು ನೀಡಿದವರು ಇವರು. ಸುಮಾರು 90ಕ್ಕೂ ಮಿಕ್ಕಿ ಪ್ರದರ್ಶನಗೊಂಡ ಕಾಲಚಕ್ರ ನಾಟಕದ ತಾಯಿ ರುಕ್ಕುವಿನ ಪಾತ್ರ ನಾಟಕ ನೋಡಿದ ಎಂತಹ ಕಲ್ಲು ಹೃದಯಿಗಳ ಕಣ್ಣಲ್ಲೂ ನೀರು ತರಿಸುವಂತಿತ್ತು ಇವರ ಮನೋಜ್ಞ ಅಭಿನಯ. ಅದೇ ರೀತಿ ಸುಮಾರು 40 ರ ಗಡಿದಾಟಿ ಪ್ರದರ್ಶನಗೊಂಡು ಸ್ತಗಿತಗೊಂಡ ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕದ ಇವರ ರಾಣಿಯ ಪಾತ್ರ ಎಲ್ಲರ ಮನಸ್ಸನ್ನು ಹುಚ್ಚೆಬ್ಬಿಸುವಂತದ್ದು ಅವರ ಮುಗ್ಧತೆ ಬದ್ಧತೆ ಮೈ ನವಿರೇಳಿಸುವಂಥದ್ದು. 

ಶ್ರೇಷ್ಟ ನಟಿ ಪ್ರಶಸ್ತಿಗಳ ಸರದಾರಿಣಿ ಈಕೆ. ಶ್ರೇಷ್ಟ ರಂಗ ನಿರ್ದೇಶಕರುಗಳಾದ ಮಂಡ್ಯ ರಮೇಶ್, ಶ್ರೀನಿವಾಸ್ ಪ್ರಭು, ಕಾಸರವಳ್ಳಿ, ಜೀವನ್ ರಾಮ್ ಸುಳ್ಯ, ಬಾಸುಮ ಕೊಡಗು ರವರ ಪಾಳೆಯದಲ್ಲಿ ಪಳಗಿದ ನಾಟಕ ರಂಗದ ಹೊಳೆಯುವ ಹವಳ. ಉಡುಪಿಯ ಹೆಸರಾಂತ ತುಳುಕೂಟದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಾಗೂ ಇನ್ನಿತರ ನಾಟಕ ಸ್ಪರ್ಧೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಎಲ್ಲರ ಮನೆಮಾತಾಗಿದ್ದಾರೆ.  

 “ಹಸಿರು ನಾಡಿನಲ್ಲಿ ಕೆಂಪು ಹಾದಿ” ಎನ್ನುವ ಪೋಲಿಸ್ ಇಲಾಖೆ ನಡೆಸಿಕೊಟ್ಟ ನಕ್ಸಲ್ ಜಾಗೃತಿಯ ಇವರ ಅಭಿನಯದ ನಾಟಕ ಕರ್ನಾಟಕದ ತುಂಬಾ ಪ್ರದರ್ಶನಗೊಂಡು ಎಲ್ಲರ ಮನ ಗೆದ್ದಿದ್ದಾರೆ.

ಇವರ ಅಭಿನಯ ಕೇವಲ ನಾಟಕಗಳಿಗೆ ಮಾತ್ರ ಸೀಮಿತವಾಗಿರದೆ ಕಿರು ಚಿತ್ರ, ಧಾರವಾಹಿ, ಚಲನಚಿತ್ರಗಳಿಗೂ ಲಗ್ಗೆ ಹಾಕಿ ಅಲ್ಲಿಯೂ ತನ್ನ ಚಕ್ರಾಧಿಪತ್ಯವನ್ನು ಮೆರೆದವರು ಸುಜಾತ ಶೆಟ್ಟಿ. 

ಮರಣಬಲೆ, ಭಾಗ್ಯ, ಮನಸ್ಸು ಒಂತೆ ಚಂಚಲ ಇತ್ಯಾದಿ 12ಕ್ಕೂ ಮಿಕ್ಕಿದ ಕಿರು ಚಿತ್ರಗಳು ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡು ಜಾಲತಾಣಗಳಲ್ಲಿ ಓಡಾಡುತ್ತಿವೆ.

ಭೂಮಿ, ಸಿಂಧೂರ, ಪ್ರೀತಿಯಿಂದ ಹೀಗೆ 13ಕ್ಕೂ ಹೆಚ್ಚಿನ ಧಾರವಾಹಿಗಳು ಕೋಟಿ ಚೆನ್ನಯ, ಗುಲಾಬಿ ಟಾಕೀಸ್, ರಿಕ್ಕಿ , ಮದಿಪು ಹೀಗೆ ಹತ್ತಕ್ಕೂ ಮಿಕ್ಕಿದ ಚಲನಚಿತ್ರಗಳು ಇವರ ಅಭಿನಯ ಕೌಶಲ್ಯವನ್ನು ಜಗತ್ ಪ್ರಸಿದ್ಧ ಗೊಳಿಸಿದೆ. ಇವರು ಅಭಿನಯಿಸಿದ ನಾಟಕಗಳು, ಚಿತ್ರಗಳು ದುಬೈ, ಅಬುದಾಬಿ, ಮಸ್ಕತ್ ಹೀಗೆ ವಿಶ್ವದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡಿವೆ. 

ತುಳು ಭಾಷೆಯ ನಾಟಕಗಳಲ್ಲಿ – ಚಿತ್ರಗಳಲ್ಲಿ ಇವರ ಪಾತ್ರಗಳು ಹೆಚ್ಚು ನೈಜತೆಯಿಂದ ಕೂಡಿದ್ದು ಪಕ್ವತೆಯ ಅಭಿನಯ ಎಲ್ಲರನ್ನೂ ಸೆಳೆಯುತ್ತಿತ್ತು. 

ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ “ಮದಿಪು” ಎಂಬ ತುಳುಚಿತ್ರ ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಚಿತ್ರರಂಗದ ಶ್ರೇಷ್ಟ ಸಾಹಿತಿ, ನಾಟಕಕಾರ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಸುಜಾತ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ “ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ” ಎಂಬ ಚಿತ್ರಕ್ಕೆ ಸ್ಪೇನ್ ನಲ್ಲಿ ಬೆಸ್ಟ್ ಜ್ಯೂರಿ ಅವಾರ್ಡ್ ದೊರಕಿರುವುದು ಅತ್ಯಂತ ಹೆಮ್ಮೆಯ ವಿಷಯ.

ಹೀಗೆ ನಟನೆ, ರಂಗತರಬೇತಿ, ನಿರೂಪಣೆ, ನಿರ್ದೇಶನ, ನಾಟಕ, ಧಾರವಾಹಿ, ಚಲನಚಿತ್ರ ಇತ್ಯಾದಿ ಅಭಿನಯದ ಎಲ್ಲಾ ಪ್ರಾಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯಶಸ್ಸಿನ ಶಿಖರದತ್ತ ಸಾಗುತ್ತಿರುವ ಕರಾವಳಿಯ ಕಲಾವಿದೆ ಶ್ರೀಮತಿ ಸುಜಾತ ಶೆಟ್ಟಿ ಅವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಉಡುಪಿ ಶಾಖೆ ಜಂಟಿಯಾಗಿ ನಟನಾ ವಿಭಾಗದಲ್ಲಿ ಕೊಡ ಮಾಡುವ ಮಲಬಾರ್ ವಿಶ್ವ ರಂಗ ಪುರಸ್ಕಾರ – 2024 ನ್ನು ಮಾರ್ಚ್ 26ರಂದು ನೀಡಿ ಗೌರವಿಸಲಿದೆ.

 ✍🏻 ~ರಾಜೇಶ್ ಭಟ್ ಪಣಿಯಾಡಿ

ಸಂಚಾಲಕರು

ಮಲಬಾರ್ ವಿಶ್ವರಂಗ ಪುರಸ್ಕಾರ.

 
 
 
 
 
 
 
 
 
 
 

Leave a Reply