ದರೆಗುಡ್ಡೆ 12-13ನೆ ಶತಮಾನದ ಬಂಡೆಗಲ್ಲು ತುಳು ಶಾಸನ ಪತ್ತೆ

ಮೂಡಬಿದಿರೆ ತಾಲ್ಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಪತ್ತೆ ಮಾಡಿರುವರು. ಈ ಸ್ಥಳದ ವಿಶೇಷತೆಯನ್ನು ಅಧ್ಯಯನ ನಡೆಸಲು ಉಡುಪಿಯ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ ಅವರು ಮಾರ್ಗದರ್ಶನ ನೀಡಿರುವರು ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ.

 

ದೇವಾಲಯದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಈ ಬಂಡೆಯ ಸುತ್ತಲೂ ಮಣ್ಣು ಜಮಾವಣೆಯಾಗಿದ್ದು, ಈ ಭಾಗದಲ್ಲಿ 5 ರಿಂದ 6 ಸಾಲಿನ ಅಸ್ಪಷ್ಟ ತುಳು ಲಿಪಿಯ ಬಂಡೆ ಶಾಸನ ಗೋಚರವಾಗಿದ್ದು ಉಳಿದ ಸಾಲುಗಳು ಮಣ್ಣಿನಲ್ಲಿ ಹೂತುಹೋಗಿದೆ. ಈ ಶಾಸನದ ಹೆಚ್ಚುವರಿ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ. ಈ ಶಾಸನದ ಪ್ರಾಥಮಿಕ ಅಧ್ಯಯನವನ್ನು ಮಾಡಿರುವ ತುಳುಲಿಪಿ ಶಾಸ್ತ್ರಜ್ಞರಾದಂತಹ ಡಾ. ರಾಧಾಕೃಷ್ಣ ಬೆಳ್ಳೂರು ಅವರು ಲಿಪಿಯ ಆಧಾರದ ಮೇಲೆ ಈ ಶಾಸನವು 12-13ನೆ ಶತಮಾನಕ್ಕೆ ಸೇರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಶಾಸನದ ಮಹತ್ವ: ಈ ಶಾಸನವು ಇದುವರೆಗೆ ಪತ್ತೆಯಾದ ತುಳು ಶಾಸನದಲ್ಲಿ ಎರಡನೆಯ ಬಂಡೆಗಲ್ಲು ಶಾಸನವಾಗಿದೆ. ಮೊದಲ ಶಾಸನವು ಮೂಡುಕೊಣಜೆಯ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ಆವರಣದಲ್ಲಿರುವ ಬಂಡೆಯಲ್ಲಿ ಪತ್ತೆಯಾಗಿದ್ದು, ಇದರ ಕಾಲಮಾನ 12-13ನೆ ಶತಮಾನ.

 

ಈ ಎರಡೂ ಶಾಸನಗಳು ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿಯೇ ಪತ್ತೆಯಾಗಿದ್ದು ಆದರೆ ಪತ್ತೆಯಾದ ಸ್ಥಳಗಳು ಬೇರೆ ಬೇರೆಯಾಗಿವೆ. ಪ್ರಮುಖ ಅಸಾಮಾನ್ಯವಾದ ಹೋಲಿಕೆಯೆಂದರೆ, ಇವು ಎರಡೂ ಬಂಡೆಗಲ್ಲು ಶಾಸನಗಳಾಗಿದ್ದು, ತಳಭಾಗದಲ್ಲಿಯೇ ಕೊರೆಯಲ್ಪಟ್ಟಿರುವುದು ತುಳು ಶಾಸನಗಳ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇತಿಹಾಸ ಮತ್ತು ಪುರಾತತ್ವ ಸಂಶೋಧಕರು (ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್) ತಿಳಿಸಿರುವರು. ಕ್ಷೇತ್ರಕಾರ್ಯ ಶೋಧನೆಗೆ ರವಿ ಸಂತೋಷ್ ಆಳ್ವ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.

 

ದೇವಾಲಯ ವೈಶಿಷ್ಟ್ಯ: ಈ ದೇವಾಲಯದ ವಿಶೇಷತೆಯನ್ನು ತಿಳಿಸಿರುವ ಪ್ರವೀಣ್‌ಚಂದ್ರ ಜೈನ್ ಹಾಗೂ ಪರಿಸರ ಚಿಂತಕರಾದಂತಹ ವಜ್ರನಾಥ ಹೆಗ್ಗಡೆಯವರು, ದೇವಾಲಯದ ಎಡಭಾಗದಲ್ಲಿರುವ ಬಂಡೆಯ ಕೆಳಗೆ ಗಣಪತಿ ವಿಗ್ರಹವಿದ್ದು, ವರ್ಷಪೂರ್ತಿ ಈ ವಿಗ್ರಹಕ್ಕೆ ನೈಸರ್ಗಿಕ ನೀರಿನ ಅಭಿಷೇಕವಾಗುತ್ತದೆ ಹಾಗೆಯೇ ದೇವಾಲಯದ ಆವರಣದಲ್ಲಿರುವ ಮೂರು ಜಲಕುಂಡಗಳಲ್ಲಿ ನೂರಾರು ವರ್ಷಗಳಿಂದ ನೀರು ಬರಿದಾಗಿದ್ದೇ ಇಲ್ಲ ಇದೊಂದು ಪ್ರಕೃತಿ ವಿಸ್ಮಯದ ತಾಣವೂ ಆಗಿದೆ ಎಂದು ಹೇಳಿರುವರು.

 
 
 
 
 
 
 
 
 
 
 

Leave a Reply