ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಹಾಗೂ ಸರಳ ಕೃಷ್ಣಾಷ್ಟಮಿ ಆಚರಣೆ

ಉಡುಪಿ: ರಜತ ಪೀಠದೊಡೆಯನ ಶ್ರೀಕೃಷ್ಣನನಾಡು  ಉಡುಪಿಯಲ್ಲಿ ಸೆ. 10 ಮತ್ತು 11ರಂದು ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ) ಆಚರಿಸಲಾಗುತ್ತಿದೆ. ಕೋವಿಡ್-19 ಸೋಂಕು ವ್ಯಾಪಿಸುತ್ತಿರುವುದರಿಂದ ಮಠದಲ್ಲಿ ಸಾಂಪ್ರದಾಯಿಕ ಹಾಗೂ ಸರಳವಾಗಿ ಕೃಷ್ಣಾಷ್ಟಮಿ ಆಚರಣೆಯಾಗಲಿದೆ.   

ಸೆ. 10ರಂದು ಕೃಷ್ಣಮಠದೊಳಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಬೆಳಗ್ಗೆ 7.30ರಿಂದ ಲಕ್ಷ ತುಳಸಿ ಅರ್ಚನೆ, ಮಹಾಪೂಜೆ ನೆರವೇರಲಿದೆ. ರಾತ್ರಿ 12.16ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನ, ನೈವೇದ್ಯ ಸಮರ್ಪಣೆ, ನಂತರ ತುಳಸೀ ವೃಂದಾವನದಲ್ಲಿ ಚಂದ್ರನಿಗೆ ಕ್ಷೀರಾರ್ಘ್ಯ ಅರ್ಪಣೆಯಾಗಲಿದೆ. ಸೆ. 11ರಂದು ಮಧ್ಯಾಹ್ನ 3ಗಂಟೆಗೆ ರಥಬೀದಿಯಲ್ಲಿ ಸಾಂಪ್ರದಾಯಿಕ ವಿಟ್ಲ ಪಿಂಡಿ ಉತ್ಸವ ನೆರವೇರಲಿದೆ.

ಚಕ್ಕುಲಿ ತಯಾರಿಸಲು ಬೆಳಗ್ಗೆ 10ಗಂಟೆಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥಶ್ರೀಪಾದರಿಂದ ಲಡ್ಡಿಗೆ ಮುಹೂರ್ತ ನೆರವೇರಲಿದೆ. ಜನ್ಮಾಷ್ಟಮಿಯಲ್ಲಿ ಭಕ್ತಾದಿಗಳಿಗೆ ಭಾಗವಹಿಸಲು ಸಾಧ್ಯವಾಗದಿ ರುವುದರಿಂದ ಪರ್ಯಾಯ ಶ್ರೀಗಳ ಆಶಯದಂತೆ ಸಾಧ್ಯವಾದಷ್ಟು ಭಕ್ತಾದಿಗಳಿಗೆ ಕೃಷ್ಣ ಪ್ರಸಾದ ವಿತರಣೆ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿಯನ್ನು ತಯಾರಿಸಲಾಗುತ್ತಿದೆ. ಒಂದು ಲಕ್ಷ ಚಕ್ಕುಲಿ ಮತ್ತು ಗುಂಡಿಟ್ಟು, ತಂಬಿಟ್ಟು, ಅರಳು ಹುಡಿ, ಶೇಂಗಾ, ಹೆಸರು ಹಿಟ್ಟು, ರವೆ, ಎಳ್ಳು, ಶುಂಠಿಯ ಉಂಡೆಯನ್ನು ಬಾಣಸಿಗರ ತಂಡ ತಯಾರಿಸುತ್ತಿದ್ದಾರೆ 

ವಿಟ್ಲಪಿಂಡಿ ಉತ್ಸವಕ್ಕಾಗಿ ಕೃಷ್ಣನ ಮೃತ್ತಿಕಾ ಮೂರ್ತಿಯನ್ನು ತಯಾರಿಸಲಾಗಿದೆ. ಮೊಸರು ಕುಡಿಕೆ ಒಡೆಯಲು ಕೃಷ್ಣಮಠದ ರಥಬೀದಿಯಲ್ಲಿ 13 ಗುರ್ಜಿ, 2 ಮಂಟಪ ಸೇರಿ ಒಟ್ಟು 15ಕಡೆಗಳಲ್ಲಿ ಗುರ್ಜಿಗಳನ್ನು ನೆಡಲಾಗಿದೆ. ಕೃಷ್ಣಮಠದ ಸಿಬ್ಬಂದಿಯೇ ಗೊಲ್ಲವೇಷಧಾರಿಗಳಾಗಿ ಗುರ್ಜಿಗಳ ಮೇಲಿಂದ ಆಡಿಸುವ ಮೊಸರು, ಬಣ್ಣ, ಅರಳು ಹುಡಿಯನ್ನು ತುಂಬಿದ ಮಣ್ಣಿನ ಮಡಕೆಗಳನ್ನು ಒಡೆಯಲಿದ್ದಾರೆ. ಉತ್ಸವದಲ್ಲಿ ಯತಿಗಳು ಹಾಗೂ ಮಠದ ಸಿಬ್ಬಂದಿ ಮಾತ್ರ ಭಾಗವಹಿಸುತ್ತಾರೆ. ಸಾರ್ವಜನಿಕರಿಗೆ ಉತ್ಸವದಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ಈಗಾಗಲೇ ಕೃಷ್ಣಮಠವನ್ನು ಹೂವುಗಳಿಂದ ಅಲಂಕರಿಸಲಾಗಿದೆ.  ರಥಬೀದಿಯಲ್ಲಿ ಸಾರ್ವಜನಿಕರು ಭಾಗವಹಿಸದಂತೆ ತಡೆಯಲು ಪೊಲೀಸ್ ಇಲಾಖೆಯೂ ಸಿದ್ಧತೆ ನಡೆಸಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply