ವಿಶೇಷ ಅನುದಾನ ಬಿಡುಗಡೆಗೆ ಮನವಿ

ಉಡುಪಿ: ಈಚೆಗೆ ಸುರಿದ ಗಾಳಿಮಳೆಗೆ ಉಡುಪಿಯಲ್ಲಿ ಅಪಾರ ಹಾನಿ ಸಂಭವಿಸಿದ್ದು, ಸಂತ್ರಸ್ತರಿಗೆ ತಕ್ಷಣದಲ್ಲಿ ಸೂಕ್ತ ಪರಿಹಾರ ಒದಗಿಸಲು ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಳೆ ಹಾನಿ ಪರಿಹಾರ ಕಾರ್ಯ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮ ಪರಿಶೀಲನ ಸಭೆಯಲ್ಲಿ ಮಾತನಾಡಿದರು.

ಪ್ರಾಕೃತಿಕ ವಿಕೋಪದಿಂದಾಗಿ ಗ್ರಾಮೀಣ ರಸ್ತೆಗಳು ಹಾನಿಗೊಂಡಿವೆ. ಶಾಲೆ, ಅಂಗನವಾಡಿ ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯ ಅನುದಾನದ ಆವಶ್ಯಕತೆ ಇದೆ ಎಂದು ಶಾಸಕ ಭಟ್ ಬೇಡಿಕೆ ಮಂಡಿಸಿದರು. ಉಡುಪಿ ತಾಲೂಕು ಕಚೇರಿಯ ಹಳೆ ಕಟ್ಟಡ ಮತ್ತು ಜಾಗ ವನ್ನು ಉಡುಪಿ ನಗರಸಭೆಯ ಕಚೇರಿ ನಿರ್ವಹಣೆಗೆ ಹಸ್ತಾಂತರಿಸುವಂತೆಯೂ ಮನವಿ ಮಾಡಿದರು.

ಪ್ರಾಕೃತಿಕ ವಿಕೋಪದಡಿ ತಕ್ಷಣ ಪರಿಹಾರಕ್ಕಾಗಿ ಸೂಕ್ತ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ ಕಂದಾಯ ಸಚಿವ ಆರ್. ಅಶೋಕ್,  ಹಳೆಯ ತಾಲೂಕು ಪಂಚಾಯತ್ ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸುವ ಬಗ್ಗೆ ಸರಕಾರದ ಹಂತದಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.

ಮೀನುಗಾರಿಕೆ, ಬಂದರು ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋತ್, ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply