ಶಿರ್ವ ಮಹಿಳಾ ಮಂಡಲಕ್ಕೆ ಷಷ್ಠಬ್ದಿ ಸಂಭ್ರಮ

ಶಿರ್ವದ ಹೃದಯ ಭಾಗದಲ್ಲಿರುವ, ಸಾಂಸ್ಕೃತಿಕ ವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಜನಮನದಲ್ಲಿ ಶ್ರೀಮಂತವಾಗಿರುವ, ಉಡುಪಿ ಜಿಲ್ಲೆಯ ಹಿರಿಯ ಮಹಿಳಾ ಮಂಡಲಗಳಲ್ಲೊಂದಾಗಿರುವ ಶಿರ್ವ ಮಹಿಳಾ ಮಂಡಲಕ್ಕೆ ಇದೀಗ 60ವರ್ಷಗಳನ್ನು ಪೂರ್ಣಗೊಳಿಸಿರುವ ಹೆಗ್ಗಳಿಕೆ.1962ರಲ್ಲಿ ಅಂದಿನ ದಿನಗಳಲ್ಲಿ ಶಿರ್ವ ಗ್ರಾಮ ಪ್ರತಿಷ್ಠಿತ ನಡಿಬೆಟ್ಟು ಕುಟುಂಬದ ಶ್ರೀಮತಿ ಶಾಂಭವಿ ಹೆಗ್ಡೆಯವರ ಮುಂದಾಳತ್ವದಲ್ಲಿ ಅಸ್ತಿತ್ವಕ್ಕೆ ಬಂದು, ಅಂದಿನಿಂದ ಇಂದಿನವರೆಗೂ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಶಿರ್ವ ಪರಿಸರದಲ್ಲಿ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿರುವ ಒಂದು ಅಪರೂಪದ ಸಂಘಟನೆಯೇ ಶಿರ್ವ ಮಹಿಳಾ ಮಂಡಲ ( ರಿ) ಶಿರ್ವ.ಸುಮಾರು ನೂರೈವತ್ತಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯು ರಾಷ್ಟ್ರೀಯ ಹಬ್ಬಗಳಾದ ಮಕ್ಕಳ ದಿನಾಚರಣೆ, ಮಹಿಳಾ ದಿನಾಚರಣೆ, ಧಾರ್ಮಿಕ ಆಚರಣೆಗಳಾದ ಯುಗಾದಿ, ದೀಪಾವಳಿ,ಗೋಪೂಜೆ,ಶಾರದಾ ಪೂಜೆ ಮುಂತಾದ ಧಾರ್ಮಿಕ ಆಚರಣೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸ್ತರದ ಮಾಹಿತಿ ಶಿಬಿರಗಳು, ಕಾನೂನು ಮಾಹಿತಿ ಕಾರ್ಯಕ್ರಮ,ಬಡ ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನ,ಹೀಗೆ ಸಮಾಜಕ್ಕೆ ಅನುಕೂಲವಾಗುವಂತಹ ಅಸಂಖ್ಯ ಕಾರ್ಯಕ್ರಮಗಳು ಈ ಮಹಿಳಾ ಮಂಡಲದ ಆಶ್ರಯದಲ್ಲಿ ಈ 60ವರ್ಷಗಳಿಂದಲೂ ನಡೆಯುತ್ತಾ ಬಂದಿವೆ.ಹಲವಾರು ಅಧ್ಯಕ್ಷರು, ಹಾಗೂ ಆಡಳಿತ ಮಂಡಳಿಗಳು ಈ ಸಂಘಟನೆಯನ್ನು ನಡೆಸಿಕೊಂಡು, ಮುಂದುವರಿಸಿ ಕೊಂಡು ಬಂದರೂ 2009ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರ ಸಮರ್ಥ ನಾಯಕತ್ವ ಈ ಸಂಘಟನೆಗೊಂದು ಹೊಸ ಆಯಾಮ ತಂದುಕೊಟ್ಟಿತು ಅಂದರೆ ಅತಿಶಯೋಕ್ತಿಯಲ್ಲ.ಸಣ್ಣ ಹೆಂಚಿನ ಕಟ್ಟಡವನ್ನು ಆಡಳಿತ ಕಚೇರಿಯನ್ನಾಗಿಸಿಕೊಂಡಿದ್ದ ಮಹಿಳಾ ಮಂಡಲಕ್ಕೆ ಬಬಿತಾ ಜಗದೀಶ್ ಅರಸ ಅವರ ಮುತುವರ್ಜಿಯಿಂದ ,ಸುತ್ತ ಪ್ರಯತ್ನ ಹಾಗೂ ಛಲದಿಂದ ಸುಸಜ್ಜಿತವಾದ ಕಟ್ಟಡ ಮತ್ತು ವಿಶಾಲವಾದ ಸಭಾಂಗಣ *ಮಹಿಳಾ ಸೌಧ* ದ ನಿರ್ಮಾಣವಾಯಿತು.ಮಹಿಳಾ ಮಂಡಲದ ಇತರ ಪದಾಧಿಕಾರಿಗಳ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಕಾರ, ಮಾರ್ಗದರ್ಶನ,ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಮಹಿಳಾ ಮಂಡಲದ ಈ ನೂತನ ಕಟ್ಟಡವು ಮಾರುಕಟ್ಟೆಯಲ್ಲಿ ಇಂದು ಸುಮಾರು 45ಲಕ್ಷ ರೂಪಾಯಿ ಬೆಲೆಬಾಳುವಂತಹುದಾಗಿದೆ.ಬಹುಶ: ಉಡುಪಿ ಜಿಲ್ಲೆಯ ಯಾವ ಮಹಿಳಾ ಮಂಡಲವೂ ಇಷ್ಟು ದೊಡ್ಡ ಸ್ವಂತ ಕಟ್ಟಡವನ್ನು ಹೊಂದಿರಲು ಸಾಧ್ಯವಿಲ್ಲ.ಇಂದು ಈ ಮಹಿಳಾ ಸೌಧವು ಶಿರ್ವದ ಎಲ್ಲಾ ಕಾರ್ಯಕ್ರಮಗಳಿಗೆ ಕೇಂದ್ರಬಿಂದು.ನಾಟಕ,ಯಕ್ಷಗಾನ,ಯೋಗ,ಕರಾಟೆ, ಸಂಗೀತ,ಚಿತ್ರಕಲೆ,ಭಜನೆ,ಇಂತಹ ವಿವಿಧ‌ಕಲೆಗಳಿಗೆ ಇದು ಆಶ್ರಯ ನೀಡುವ ತಾಣವಾಗಿ ರೂಪುಗೊಂಡಿದೆ.ಶಿರ್ವದ ವಿವಿಧ‌ಸಂಘಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಿದರೂ ಅವುಗಳು ನಡೆಯುವುದು ಇದೇ ಮಹಿಳಾ ಸೌಧದಲ್ಲಿ.ಸಾರ್ವಜನಿಕ ಶ್ರೀ ಗಣೇಶೋತ್ಸವ, ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರ ವೃತಾಚರಣೆ,ಗ್ರಾಮ ಪಂಚಾಯತ್ ನ ಸಾಮುದಾಯಿಕ ಸೇವಾ ಕಾರ್ಯಕ್ರಮಗಳು, ಮಾಹಿತಿ ಗಳು,ಗ್ರಾಮಸಭೆ ಎಲ್ಲವೂ ನಡೆಯುವುದು ಇದೇ ವೇದಿಕೆಯಲ್ಲಿ,ಇದೇ ಸಭಾಂಗಣದಲ್ಲಿ. ಬಬಿತಾ ಅರಸರ ನಂತರ ಶಿರ್ವ ಮಹಿಳಾ ಮಂಡಲದ ಆಡಳಿತ ಚುಕ್ಕಾಣಿಯನ್ನು ಹಿಡಿದವರು ವಿವಿಧ ರಂಗಗಳಲ್ಲಿ ಸಕ್ರಿಯರಾಗಿ ಅನುಭವ ಪಡೆದಿರುವ ಶ್ರೀಮತಿ ಗೀತಾ ವಾಗ್ಳೆ ಅವರು.ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಾಮಾಜಿಕ ರಂಗಗಳಲ್ಲಿ ದುಡಿದ ಅನುಭವವಿರುವ ಅವರು ಉಡುಪಿ ಹಾಗೂ ಕಾಪು ತಾಲೂಕು ಪಂಚಾಯತ್ ಸದಸ್ಯರಾಗಿದ್ದವರು.ಅವರ ಸಮರ್ಥ ನಾಯಕತ್ವ ಹಾಗೂ ಅನುಭವಿ ಪದಾಧಿಕಾರಿಗಳನ್ನೊಳಗೊಂಡ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ,ಗೌರವಾಧ್ಯಕ್ಷೆ ಬಬಿತಾ ಅರಸರ ಮಾರ್ಗದರ್ಶನದಲ್ಲಿ , ಕಾರ್ಯದರ್ಶಿ ಡಾ.ಸ್ಪೂರ್ತಿ .ಪಿ.ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ, ಖಜಾಂಚಿ ಶ್ರೀಮತಿ ಮರಿಯಾ ಜೆಸಿಂತಾ ಫುರ್ಟಾಡೋ, ಜೊತೆ ಕಾರ್ಯದರ್ಶಿ ಶ್ರೀಮತಿ ಗೀತಾ ಮೂಲ್ಯ ಹಾಗೂ ಸಶಕ್ತ ಹಾಗೂ ಸುಶಿಕ್ಷಿತ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಮಂಡಳಿ ಇದರ ಯಶಸ್ಸಿಗಾಗಿ ಟೊಂಕ ಕಟ್ಟಿ ನಿಂತಿದೆ. ಕಳೆದ ಜನವರಿಯಲ್ಲಿ ವಜ್ರ ಮಹೋತ್ಸವದ ಕಾರ್ಯಕ್ರಮ ಗಳಿಗೆ ಚಾಲನೆ ನೀಡಲಾಗಿದ್ದು,ಕಳೆದ ಹನ್ನೊಂದು ತಿಂಗಳುಗಳಲ್ಲಿ ಸುಮಾರು 16ಕ್ಕೂ ಹೆಚ್ಚು ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇದೀಗ ಸಮಾರೋಪ ಸಮಾರಂಭದ ಸಂಭ್ರಮ ಶಿರ್ವ ಮಹಿಳಾ ಮಂಡಲಕ್ಕೆ.ಇದೇ ಬರುವ ದಿನಾಂಕ 04-12-2022ರ ಭಾನುವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ವಿವಿಧ ಮಹಿಳಾ ಮಂಡಲಗಳ ಸದಸ್ಯೆಯರಿಗಾಗಿ ಪ್ರತಿಭಾ ಸ್ಪರ್ಧೆಗಳು ನಡೆಯಲಿದ್ದು,‌ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಇದರ ಸಾಧ್ವಿಯವರಾದ ಶ್ರೀ ಮಾತಾನಂದ ಮಯೀ ಅವರು ಇದರ ಉದ್ಘಾಟನೆಯನ್ನು ಮಾಡಲಿದ್ದಾರೆ . ಜನಪ್ರಿಯ ಹಾಸ್ಯ ಭಾಷಣಕಾರರಾದ ಶ್ರೀಮತಿ ಸಂಧ್ಯಾ ಶೆಣೈ, ಉಡುಪಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು,ಕಾಪು ಶಾಸಕ ಶ್ರೀ ಲಾಲಾಜಿ.ಆರ್. ಮೆಂಡನ್,ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ,ಸರಳಾ ಕಾಂಚನ್ ಹಾಗೂ ಶೀಲಾ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಹಿಳಾ ಮಂಡಲದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply