ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇನ್ನಿಲ್ಲ

ಬೆಂಗಳೂರು: ಹಿರಿಯ ವಿದ್ವಾಂಸ, ಪ್ರವಚನಕಾರ, ಗ್ರಂಥಕರ್ತ ಮತ್ತು ಪ್ರಕಾಶಕರು ಉಡುಪಿ ಮೂಲದ ಸಗ್ರಿ ರಾಘವೇಂದ್ರ ಉಪಾಧ್ಯಾಯ (71) ಬೆಂಗಳೂರಿನಲ್ಲಿ ಶನಿವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. 1953ಯಲ್ಲಿ ಶ್ರೀ ನರಸಿಂಹ ಉಪಾಧ್ಯಾಯ ಮತ್ತು ಸೀತಾಲಕ್ಷ್ಮಿ ದಂಪತಿಗಳಲ್ಲಿ ಜನಿ‌ಸಿದ ಅವರು ಪ್ರಾತ: ಸ್ಮರಣೀಯ ಶ್ರೀ ವಿದ್ಯಾ ಮಾನ್ಯತೀರ್ಥರು, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಅವರಲ್ಲದೆ ಶ್ರೀ ಕಾಪು ಹಯಗ್ರೀವಾ ಚಾರ್ಯರು, ಮೊದಲಾದ ಪಂಡಿತರಲ್ಲಿ ಅಧ್ಯಯನ ಮಾಡಿ, ವೇದಾಂತ ಶಾಸ್ತ್ರದಲ್ಲಿ, ಸಂಸ್ಕೃತದಲ್ಲಿ ಎಂಎ ಪಡೆದು SMSP ಸಂಸ್ಕೃತ ಕಾಲೇಜು, ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ತಮ್ಮದೇ ಆದ ಪರವಿದ್ಯಾ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ನೂರಾರು ಗ್ರಂಥಗಳನ್ನು ರಚಿಸಿದ್ದಾರೆ.ಉಡುಪಿಯ ಹಲವಾರು ಮಠಗಳಿಗೆ ಆಸ್ಥಾನ ವಿದ್ವಾಂಸರಾಗಿ ಗೌರವ ಮತ್ತು ಮಾನ್ಯತೆಗೆ ರಾಜನರಾಗಿದ್ದರು. ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿ ಉತ್ತಮ ಹೆಸರು ಗಳಿಸಿರುವ ತತ್ವವಾದ ಮತ್ತು ಸರ್ವಮೂಲ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಅವರ ಕೆಲವು ಕೃತಿಗಳು ಈ ಕೆಳಕಂಡಂತಿವೆ:

1. ಸಾಧಕರಿಗೊಂದು ಕಿವಿಮಾತು
2. ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರ ಉಪನ್ಯಾಸ ಸಂಗ್ರಹವಾದ ವಿಷ್ಣು ಸಹಸ್ರನಾಮ ಟಿಪ್ಪಣಿ.
3. ಮುಖ್ಯಪ್ರಾಣ ಚಿಂತನೆ
4. ಸುವರ್ಣ ಸಂದೇಶ
5. ವೈಷ್ಣವ ದೀಕ್ಷೆ
6. ಪಾತಿವ್ರತ್ಯ ಪ್ರದೀಪಿಕಾ
7. ಶ್ರೀನಿವಾಸೇsಸ್ತು ಮೇ ಮನ: ಮೊದಲಾದವು.

ನಾಡಿನ ಬಹುತೇಕ ಮಠಾಧೀಶರ ಪ್ರವಚನವನ್ನು ಆಲಿ‌ಸಿ ಅದನ್ನು ಗ್ರಂಥರೂಪದಲ್ಲಿ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.ರಾಮಾಯಣ, ಭಾಗವತ, ತಾತ್ಪರ್ಯ ನಿರ್ಣಯ, ಸರ್ವಮೂಲ ಪ್ರಮೇಯಗಳ ಬಗ್ಗೆ ನೂರಾರು ಪ್ರವಚನಗಳನ್ನು ಸಗ್ರಿ ಅವರು ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಅತ್ಯಂತ ಹೆಚ್ಚಿನ ಅಧ್ಯಯನ, ಸಂಶೋಧನಾ ಲೇಖನ ಮಾಡಿ ಇವರು ಸಾಧನೆ ಮಾಡಿದ್ದಾರೆ.‌ ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಸೇವೆ ಮಾಧ್ವ ವಾಂಗ್ಮಯ ಪ್ರಪಂಚಕ್ಕೆ ಅತ್ಯದ್ಭುತ ಕೊಡುಗೆಯಾಗಿದೆ.

ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು ನಿನ್ನೆ ಸಂಜೆ ಬೆಂಗಳೂರಿನ ಶ್ರೀಭಂಡಾರಕೇರಿ ಮಠದಲ್ಲಿ ಶ್ರೀ ಶ್ರೀ ವಿದ್ಯೇಶತೀರ್ಥರ 70ನೇ ವರ್ಷದ ವರ್ಧಂತಿ ಕಾರ್ಯಕ್ರಮದಲ್ಲಿ ತಮ್ಮ ಕೊನೆಯ ಉಪನ್ಯಾಸ ನೀಡಿ, ನಂತರದ ಕೆಲವೇ ನಿಮಿಷಗಳಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ರಾಮಾಯಣದ ಪ್ರಸಂಗ ವ್ಯಾಖ್ಯಾನ ಮಾಡಿದ ಅವರು ” ದಶಾವತಾರದಲ್ಲಿ ಶ್ರೀ ರಾಮ ಮಾತ್ರ ಎಲ್ಲರಿಗೂ ಮುಕ್ತಿ ಕೊಡಿಸಿದ ” …..ಎಂಬುದೇ ಅವರ ಕೊನೆಯ ವಾಕ್ಯ ಆಗಿದ್ದು ವಿಪರ್ಯಾಸ.

ಹೃದಯಾಘಾತದಿಂದ ಬಳಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳಲಾಗದೆ, ಶನಿವಾರ ಬೆಳಗ್ಗೆ ನಿಧನರಾದರು. ಚಾಮರಾಜ ಪೇಟೆ ಚಿತಾಗಾರದಲ್ಲಿ ನೂರಾರು ವಿದ್ವಾಂಸರ ಸಮ್ಮುಖ ಅಂತ್ಯಕ್ರಿಯೆ ನಡೆಯಿತು.

ಮಧ್ವಶಾಸ್ತ್ರದ ಬಗ್ಗೆ ಇದಮಿತ್ಥಂ ಎಂದು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದ ಶ್ರೀಯುತರು ಶ್ರೀಕೃಷ್ಣ ಮಠ ಹಾಗೂ ಬಹುತೇಕ ಎಲ್ಲ ಮಾಧ್ವಮಠಗಳಿಂದ ವಿಶೇಷವಾಗಿ ಪುರಸ್ಕೃತ ರಾಗಿದ್ದರು .

ಇತತೀಚೆಗಷ್ಟೆ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಂಪನ್ನಗೊಂಡ ಮಂಡಲೋತ್ಸವದಲ್ಲೂ ಭಾಗವಹಿಸಿ ಅಷ್ಡಾವಧಾನ ಸೇವೆಗೈದಿದ್ದರು. ಶ್ರೀಯುತರು ಪತ್ನಿ , ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ. ಕರಂಬಳ್ಳಿ ವಲಯ ಬ್ರಾಹ್ಮಣ ಸಂಘದಲ್ಲಿ ಅವರ ಪ್ರವಚನ ಮಾಲಿಕೆ ನೆರವೇರಿತ್ತು .

ಶ್ರೀಯುತ ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮತ್ತು ಅದಮಾರು ಉಭಯ ಶ್ರೀಗಳು , ಪೇಜಾವರ ಕಾಣಿಯೂರು ಸೋದೆ ಶೀರೂರು ಮಂತ್ರಾಲಯ , ಭಂಡಾರಕೇರಿ , ಚಿತ್ರಾಪುರ ಶ್ರೀಗಳು , ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ , ಯುವಬ್ರಾಹ್ಮಣ ಪರಿಷತ್ , ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ , ತುಳುಶಿವಳ್ಳಿ ಬ್ರಾಹಣ ಮಹಾಮಂಡಲ , ಉಡುಪಿ ಪುರೋಹಿತರ ಸಂಘ , ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ, ಮಾಜಿ ಶಾಸಕ ಕೆ ರಘುಪತಿ ಭಟ್ , ಶಾಸಕ ಯಶ್ಪಾಲ್ ಸುವರ್ಣ ಹೀಗೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply