ಯಾರಿಗೆ ಪಟ್ಟ- ಸೋನಿಯಾ ಚಿಂತನೆ

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಮನೆತನ ಹೊರತುಪಡಿಸಿದ ನಾಯಕತ್ವ ಆಯ್ದುಕೊಳ್ಳುವ ಕಾಲ ಪಕ್ವವಾಗಿದೆಯೇ? ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೋಮವಾರ ನಿಗದಿಯಾಗಿರುವ ಬೆನ್ನಲ್ಲೇ ಕೈಪಾಳಯದ ಕಾರಿಡಾರ್ನಲ್ಲಿ ಇಂಥದ್ದೊಂದು ಚರ್ಚೆ ಜೋರಾಗಿದೆ.

‘ನಮಗೆ ಪ್ರಬಲ ನಾಯಕತ್ವದ ಅಗತ್ಯವಿದ್ದು, ಪ್ರಮುಖ ವಿಚಾರಗಳಲ್ಲಿ ಕೇಂದ್ರ ಸರ್ಕಾರ ವನ್ನು ಸಮರ್ಥವಾಗಿ ಎದುರಿಸಲು, ರಾಷ್ಟ್ರ ಮಟ್ಟದಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಯಾಗಬೇಕು’ ಎಂದು ಕಾಂಗ್ರೆಸ್ನ 23 ಮಂದಿ ಪ್ರಮುಖರು ಪತ್ರ (ಆ.10) ಬರೆದ ಬೆನ್ನಲ್ಲೇ, ‘ಹೊಸ ನಾಯಕತ್ವವನ್ನು ಆಯ್ಕೆ ಮಾಡಿ ಕೊಳ್ಳಿ’ ಎಂದು ಅಧಿನಾಯಕಿ ಸೋನಿಯಾ ಗಾಂಧಿ ಕೂಡ ತಿಳಿಸಿರುವುದು ಪಕ್ಷದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಸೋಲಿಗೆ ತಾನೇ ಜವಾಬ್ದಾರಿ ಎಂದಿದ್ದರು. ಅಲ್ಲದೆ, ಬೇರೆಯವರಿಗೆ ನಾಯಕತ್ವ ನೀಡುವುದು ಸೂಕ್ತ ಎಂದೂ ಅಭಿಪ್ರಾಯಪಟ್ಟಿದ್ದರು. ಆದರೆ, ಬಹುತೇಕ ಮಂದಿ ಗಾಂಧಿ ಮನೆತನ ದವರೇ ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಾಯಿಸಿದ್ದರಿಂದ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಲು ಒಪ್ಪಿಕೊಂಡಿ ದ್ದರು.

ಕಳೆದ ಲೋಕಸಭೆ ಚುನಾವಣೆ ಸಂದರ್ಭ ಸಂದರ್ಶನ ನೀಡಿದ್ದ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ, ‘ಗಾಂಧಿ ವಂಶಸ್ಥರಲ್ಲದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ನನ್ನದೇನೂ ತಕರಾರಿಲ್ಲ’ ಎಂದಿದ್ದರು. ಕೆಲ ದಿನಗಳ ಹಿಂದೆ ಈ ಸಂದರ್ಶನ ಬಹಿರಂಗಗೊಂಡಿದ್ದರಿಂದ ‘ಹೊಸ ನಾಯಕತ್ವದ ಚರ್ಚೆ’ ಮುನ್ನೆಲೆಗೆ ಬಂದಿತ್ತು. ಇದೇ ವೇಳೆ 23 ಮಂದಿಯ ಪತ್ರವೂ ಬೆಳಕಿಗೆ ಬಂದಿರುವುದರಿಂದ ಸೋನಿಯಾ ಮೇಲೂ ಒತ್ತಡ ಹೆಚ್ಚಿತ್ತು. ಸೋಮವಾರದ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನವೇ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದು, ಸಭೆಯಲ್ಲಿ ಮತ್ತೇನೇನು ಚರ್ಚೆಯಾಗಬಹುದು ಎಂಬ ಕುತೂಹಲವೂ ಹೆಚ್ಚಿದೆ.

ಸೋನಿಯಾ, ರಾಹುಲ್, ಪ್ರಿಯಾಂಕಾ ಈ ಮೂವರು ಗಾಂಧಿಯೇತರ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಲಿ ಎಂದರೂ ಇದಕ್ಕೆ ಬಹುಪಾಲು ಕಾಂಗ್ರೆಸ್ಸಿಗರು ಒಪ್ಪುವ ಸಾಧ್ಯತೆ ಕಡಿಮೆ. ಏಕೆಂದರೆ, ರಾಹುಲ್ ಮತ್ತೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕು ಎಂದು ಒಂದು ವರ್ಗ ವಾದಿಸುತ್ತಿದ್ದರೆ, ಮತ್ತೊಂದು ವರ್ಗ ಪ್ರಿಯಾಂಕಾ ಗಾಂಧಿ ಮೇಲೆ ಒಲವು ವ್ಯಕ್ತಪಡಿಸುತ್ತಿದೆ. ಮತ್ತೆ ಕೆಲವರು, ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿದು 2 ಉಪಾಧ್ಯಕ್ಷ ಹುದ್ದೆ ಸೃಷ್ಟಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದೂ ಪ್ರತಿಪಾದಿಸುತ್ತಿದ್ದಾರೆ.

‘ಪಕ್ಷ ಹೋಳಾಗದೆ ಉಳಿಯಲು ‘ಗಾಂಧಿ’ ಹೆಸರೇ ಕಾರಣ. ಇದು ನಮ್ಮ ನಡುವೆ ಒಗ್ಗಟ್ಟು ಕಾಪಾಡುತ್ತದೆ ಮತ್ತು ಮತದಾರ ರನ್ನು ಭಾವನಾತ್ಮಕವಾಗಿ ಸೆಳೆಯಲು ಅನುಕೂಲವಾಗುತ್ತದೆ. ಹೀಗಾಗಿಯೇ, ಗಾಂಧಿಯೇತರ ನಾಯಕತ್ವದ ಬಗ್ಗೆ ಅನೇಕರಲ್ಲಿ ಆತಂಕವಿದೆ’ ಎಂಬುದು ಪಕ್ಷ ಮುಖಂಡರೊಬ್ಬರ ಅಭಿಪ್ರಾಯ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply