ನಂದಿನಿ ಹಾಲಿನ ಪರಿಷ್ಕೃತ ದರ ಲೀಟರಿಗೆ ರೂ.2/- ಏರಿಕೆ ಹೈನುಗಾರರಿಗೆ ಪ್ರೋತ್ಸಾಹ ಧನವಾಗಿ ವರ್ಗಾವಣೆ

ನಂದಿನಿ ಹಾಲಿನ ಮಾರಾಟದ ಪ್ರತಿ ಲೀಟರ್ ಗೆ 2/- ರೂಪಾಯಿ ಏರಿಕೆ ಹಣವನ್ನು ರೈತರಿಗೆ ನೇರವಾಗಿ ಪ್ರೋತ್ಸಾಹ ಧನವಾಗಿ ವರ್ಗಾವಣೆ ಮಾಡುವ ಕೆಎಂಎಫ್ ಆದೇಶಕ್ಕೆ ಸಹಕಾರ ಭಾರತಿ ಹಾಲು ಪ್ರಕೋಷ್ಟ ದ ರಾಜ್ಯ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಸಂತಸ ವ್ಯಕ್ತಪಡಿಸಿರುತ್ತಾರೆ.

ಕಳೆದ ಮೂರು ವರ್ಷಗಳಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿದ್ದ ರೂ, ಹಾಲಿನ ಖರೀದಿ ದರದಲ್ಲಿ ಏರಿಕೆಯಾಗದೆ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ರಾಜ್ಯದ ಲಕ್ಷಾಂತರ ಹೈನುಗಾರ ಕುಟುಂಬಗಳು ಕೆಎಂಎಫ್ ನ ಈ ನಿರ್ಧಾರದಿಂದಾಗಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಿ ಸಹಕಾರ ಭಾರತಿ ಅಕ್ಟೋಬರ್ 27ರಂದು ಉಡುಪಿಯ ರಾಜಾಂಗಣದಲ್ಲಿ ” ಬೃಹತ್ ಹೈನುಗಾರ ರೈತರ ಸಮಾವೇಶ”ವನ್ನು ಏರ್ಪಡಿಸಿ, ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ಮೂಲಕ ಪತ್ರ ಬರೆದು ಅಭಿಯಾನವನ್ನು ಪ್ರಾರಂಭಿಸಿತ್ತು.

ಹಾಲಿಗೆ ದರ ಏರಿಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಿಂದ ಪ್ರಾರಂಭಗೊಂಡ ಹೋರಾಟವನ್ನು ರಾಜ್ಯ ವ್ಯಾಪಿ ವಿಸ್ತರಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿತ್ತು.

ಕಳೆದ ವಾರ ಮುಖ್ಯಮಂತ್ರಿಗಳು ಉಡುಪಿ ಜಿಲ್ಲೆ ಗೆ ಭೇಟಿ ನೀಡಿದಾಗ ಸಹಕಾರ ಭಾರತಿಯ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಹಾಲಿನ ದರ ಪರಿಷ್ಕರಣೆಗೆ ಒತ್ತಾಯಿಸಿತ್ತು.

ಇದೀಗ ಕೆಎಂಎಫ್ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಜಾರಕಿ ಹೋಳಿಯವರ ನಂದಿನಿ ಹಾಲಿನ ದರ ಪರಿಷ್ಕರಣಣೆಯ ನಿರ್ಧಾರದಿಂದಾಗಿ ನಾಡಿನ ಲಕ್ಷಾಂತರ ಹೈನುಗಾರ ಕುಟುಂಬ ಗಳಿಗೆ ಕೊಂಚ ಆರ್ಥಿಕ ಪುನಶ್ಚೇತನ ನೀಡಿದಂತಾಗಿದೆ.

ಪ್ರಸ್ತುತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳಲ್ಲಿ ರೈತರ ಹಾಲನ್ನು ಪ್ರತಿ ಲೀಟರ್ ಗೆ ಕನಿಷ್ಠ 29 /-ರೂಪಾಯಿಯಲ್ಲಿ ಖರೀದಿಸಲಾಗುತ್ತಿದ್ದು ,ಕಳೆದ ತಿಂಗಳಿನಿಂದ ಒಕ್ಕೂಟ ಹೆಚ್ಚುವರಿಯಾಗಿ 2/- ರೂಪಾಯಿ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರಕಾರದ 5 /-ರೂಪಾಯಿ ಪ್ರೋತ್ಸಾಹ ಧನದಿಂದಾಗಿರೂ. 36 /- ಪ್ರತಿ ಲೀಟರ್ ಗೆ ರೈತರಿಗೆ ಸಿಗುತ್ತಿತ್ತು.

 ಇದೀಗ ನಂದಿನಿ ಹಾಲಿನ ದರ ಪರಿಷ್ಕರಣೆಯಿಂದಾಗಿ ಪ್ರತಿ ಲೀಟರ್ ಗೆ 2 /-ರೂಪಾಯಿ ಹೆಚ್ಚುವರಿಯಾಗಿ ಸಿಗುವುದರಿಂದ ಹೈನುಗಾರರಿಗೆ ಪ್ರತಿ ಲೀಟರ್ ಗೆ ಕನಿಷ್ಠ ರೂಪಾಯಿ 38/- ಸಿಕ್ಕಿದಂತಾಗುತ್ತದೆ.

15 ದಿನಗಳ ಹಿಂದೆ ನಂದಿನಿ ಪಶು ಆಹಾರಕ್ಕೆ ಪ್ರತಿ ಟನ್ನಿಗೆ ರೂ. 2500/-ಏರಿಕೆ ಆಗಿರುವುದರಿಂದ ಏರುತ್ತಿರುವ ಖರ್ಚು ವೆಚ್ಚಗಳ ಗಾಯಗಳಿಗೆ ಮತ್ತೊಂದು ಬರೆ ಎಳೆದಂತಾಗಿತ್ತು.

ರಾಜ್ಯದಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಹೈನುಗಾರಿಕೆಯನ್ನೇ ನಂಬಿ ಕೊಂಡಿರುವ ಲಕ್ಷಾಂತರ ಹೈನುಗಾರ ಕುಟುಂಬಗಳಿಗೆ ಭಾರೀ ಚಿಂತೆಗೀಡು ಮಾಡಿದೆ. 

 ಕೆಎಂಎಫ್ ಮುಂದಿನ ದಿನಗಳಲ್ಲಿ ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ ನೀಡುವುದರ ಮೂಲಕ ಹಾಗೂ ಮುಂದಿನ ಬಜೆಟ್ ನಲ್ಲಿ ರಾಜ್ಯ ಸರಕಾರ ಪ್ರೋತ್ಸಾಹ ಧನವನ್ನು ಏರಿಸುವುದರ ಮೂಲಕ ಹೈನುಗಾರಿಕಾ ಕ್ಷೇತ್ರದ ಪುನರುಜ್ಜೀವನಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ರಾಜ್ಯದ ಲಕ್ಷಾಂತರ ಹೈನುಗಾರ ರೈತ ಕುಟುಂಬಗಳ ಒಕ್ಕೊರಲ ಬೇಡಿಕೆಯಾಗಿರುತ್ತದೆ.

ಹೈನುಗಾರ ಕುಟುಂಬಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಕೆಎಂಎಫ್ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಜಾರಕಿಹೋಳಿ ಮತ್ತು ಆಡಳಿತ ಮಂಡಳಿಗೆ ಹಾಗೂ ದರ ಪರಿಷ್ಕರಣೆಗೆ ತಾತ್ವಿಕವಾಗಿ ಸಮ್ಮತಿ ನೀಡಿದ ರಾಜ್ಯ ಸರಕಾರಕ್ಕೆ ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ರಾಜ್ಯದ ಸಮಸ್ತ ಹೈನುಗಾರರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ .

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply