ಮಂದಾರ್ತಿಯಲ್ಲಿ ಮಳೆಗಾಲದ ದೀ೦ಗಿಣ ~ ಜನಾರ್ದನ್ ಕೊಡವೂರು 

ಯಕ್ಷಗಾನ ಪ್ರಿಯೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವರ ಯಕ್ಷಗಾನ ಹರಕೆ ಬಯಲಾಟದ ಇತಿಹಾಸದಲ್ಲಿ ಹೊಸ ಮನ್ವಂತರವೆ ಬರೆದ ಕಥೆ. ಕಳೆದ 7ವರ್ಷಗಳಿಂದ ಶ್ರೀ ಮಂದಾರ್ತಿ ಕ್ಷೇತ್ರದ ಯಕ್ಷಗಾನ ಹರಕೆ ಸೇವೆಯನ್ನು ಮಳೆಗಾಲದಲ್ಲೂ ನಡೆಸುವ ಹೊಸ ಹೆಜ್ಜೆ ಇಟ್ಟು ಸಾಕಾರಗೊಂಡು, ಇದೀಗ 7ನೇ ವರ್ಷದ ಯಕ್ಷಗಾನ ಹರಕೆ ಸೇವೆ ಪ್ರಾರಂಭಗೊಳ್ಳಲಿದೆ.
ಮಂದಾರ್ತಿಯಲ್ಲಿ ಇನ್ನು ಸುಮಾರು 4 ತಿಂಗಳ ಕಾಲ ನಿರಂತರ ಚಂಡೆ ಸದ್ದು ಕೇಳುತ್ತದೆ. ಯಕ್ಷಾಭಿಮಾನಿಗಳಿಗೆ ಮಳೆಗಾಲದಲ್ಲೂ ಕಲಾ ರಸ ದೌತಣ ಆಗಲಿದೆ. ಜೂನ್ 18, ಮಂಗಳವಾರದಿ೦ದ ಮಳೆಗಾಲದ ಯಕ್ಷಗಾನ ಸೇವೆಯಾಟಕ್ಕೆ ಚಾಲನೆ ದೊರೆಯಲಿದೆ.
ಬೇಸಗೆಯ ತಿರುಗಾಟದಂತೆಯೇ ಬಾರಾಳಿ ಶ್ರೀ ಗಣಪತಿ ದೇವಾಲಯದಲ್ಲಿ ಗಣಹೋಮವಾಗಿ ನಂತರ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಗಣಹೋಮ, ಮಹಾಪೂಜೆಯ ನಂತರ ತಾಳ, ಗೆಜ್ಜೆ ನೀಡಿ ಸೇವೆಯಾಟಕ್ಕೆ ಚಾಲನೆ ನೀಡಲಾಗುವುದು. ಮಳೆ ಗಾಲದ ಸೇವೆಯಾಟವು ದೇವಳದ ಶ್ರೀದುರ್ಗಾಪರಮೇಶ್ವರೀ ಕಲ್ಯಾಣ ಮಂದಿರದಲ್ಲಿ 5ಮೇಳಗಳ ಕಲಾವಿದರಿಂದ ದಿನಂಪ್ರತಿ ಸಂಜೆ 7ರಿಂದ ರಾತ್ರಿ 12ಗಂಟೆಯ ತನಕ ನಡೆಯಲಿದೆ.
ಯಕ್ಷಗಾನ ಸೇವೆಯಾಟವು ವರ್ಷವಿಡೀ ಆಗುತಿದ್ದರೂ ಮುಂದಿನ 21ವರ್ಷಗಳ ತನಕ ಅಂದರೆ 2045-46ರ ತನಕ 21 ಸಾವಿರ ಸೇವೆಯಾಟವು ನೋಂದಾಯಿತಗೊ೦ಡಿದೆ.
7ರಿಂದ1.30ರ ತನಕ 5ಮೇಳಗಳ ಆಯ್ದ ಕಲಾವಿದರಿಂದ , 145 ದಿನ 290ಸೇವೆಯಾಟ
ಮಳೆಗಾಲದ ಸೇವೆಯಾಟ ಜೂನ್೧೮ರಂದು ಪ್ರಾರಂಭಗೊ೦ಡು ನವೆಂಬರ್ ಮೊದಲ ವಾರದ  ತನಕ ನಡೆಯಲಿದ್ದು, ಸುಮಾರು 172 ದಿನಗಳ ಕಾಲ ದಿನಕ್ಕೆ ಎರಡು ಸೇವೆಯಾಟದಂತೆ ಒಟ್ಟು 344 ಸೇವೆಯಾಟ ನಡೆಯಲಿದೆ. ಹಾಗಾಗಿ ಎರಡು ಚೌಕಿ ಮತ್ತು ಕಲ್ಯಾಣ ಮಂದಿರದ ಒಂದೇ ವೇದಿಕೆಯಲ್ಲಿ ಎರಡು ರಂಗಸ್ಥಳ ಹಾಕಿ ಗಣಪತಿ ಪೂಜೆ ಮತ್ತು ಒಡ್ಡೋಲಗದ ತನಕ ಎರಡೂ ರಂಗ ಸ್ಥಳದಲ್ಲಿ ಸೇವೆಯಾಗಿ ನಂತರ ಮೇಳಗಳ ಕಲಾವಿದರ ಕೂಡುವಿಕೆಯಲ್ಲಿ ಆಟ ನಡೆಯಲಿದೆ.

ಮಾನ್ಯವಾಗಿ ಯಕ್ಷಗಾನ ಕಲಾವಿದರಿಗೆ ಆರು ತಿಂಗಳ ಉದ್ಯೋಗ, ಬಯಲಾಟ ಮೇಳದ ಸಾಮಾನ್ಯ ಕಲಾವಿದರಿಗೆ ಮಳೆ ಗಾಲದಲ್ಲಿ ಯಕ್ಷಗಾನದ ಸಂಪಾದನೆ ಇರುವುದಿಲ್ಲ. ಮಳೆಗಾಲದ ಸಮಯದಲ್ಲಿ ಕೃಷಿ ಇತ್ಯಾದಿ ಕುಲ ಕಸುಬಿನಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಮಳೆಗಾಲದ ಯಕ್ಷಗಾನ ಪ್ರಾರಂಭವಾದ ನಂತರ ಕೆಲ ಪ್ರಸಿದ್ಧ ಕಲಾವಿದರಿಗಷ್ಟೇ ಮಳೆಗಾಲದಲ್ಲಿ ಯಕ್ಷಗಾನದ ಸಂಪಾದನೆಗೆ ಅವಕಾಶ ಸಿಗುತ್ತಿತ್ತು. ಮಂದಾರ್ತಿ ಕ್ಷೇತ್ರದ ಮಳೆಗಾಲದ ಯಕ್ಷಗಾನದಿಂದ ಒಂದಷ್ಟು ಕಲಾವಿದರಿಗೂ ಮಳೆಗಾಲ ದಲ್ಲಿ ಸಂಪಾದನೆಗೆ ಅವಕಾಶ ಕಳೆದ 6ವರ್ಷಗಳಿಂದ ಸಿಗುತ್ತಿದೆ.

 

ಮಳೆಗಾಲದ ಹರಕೆ  ಬಯಲಾಟದಿಂದ ಆಟ ಆಡಿಸುವವರಿಗೂ ಅನುಕೂಲವಿದೆ, ಆರ್ಥಿಕ ಉಳಿತಾಯವೂ ಇದೆ. ಸಾಮಾನ್ಯವಾಗಿ ಮನೆಯ ವಠಾರದಲ್ಲಿ ಹರಕೆ ಬಯಲಾಟ ನಡೆಸುವಾಗ ಮೇಳದ ವೀಳ್ಯ ಖರ್ಚು ಅಲ್ಲದೇ ವಾರಗಳ ಮೊದಲೇ ಸಿದ್ದತೆ ಪ್ರಾರಂಭಿಸ ಬೇಕಾಗುತ್ತದೆ. ಮನೆಗೆ ಸುಣ್ಣ ಬಣ್ಣ, ವಠಾರ ಸ್ವಚ್ಛತೆ, ಚಪ್ಪರ, ದೀಪಾಲಂಕಾರ ಹಾಗೂ ಅನ್ನ ಸಂತರ್ಪಣೆಗಾಗಿ ಈಗಿನ ಕಾಲದಲ್ಲಿ ದುಬಾರಿ ಖರ್ಚು ವೆಚ್ಚಗಳು ಬರುತ್ತವೆ. ಆದರೆ ಕ್ಷೇತ್ರದಲ್ಲಿ ಯಕ್ಷಗಾನದ ಹರಕೆ ಸೇವೆ ಸಲ್ಲಿಸುವಾಗ ಮೇಳದ ವೀಳ್ಯವನ್ನಷ್ಟೇ ಪಾವತಿಸಿದರಾಯಿತು ಮತ್ತು ಆದಷ್ಟು ಬೇಗನೇ ಹರಕೆಯನ್ನು ತೀರಿಸಿದಂತಾಗುವುದು.

ಈ ರೀತಿಯಲ್ಲಿ ಅಂತೂ ಮಂದಾರ್ತಿ ಕ್ಷೇತ್ರದಲ್ಲಿ ವರ್ಷವಿಡೀ ನಡೆಯುವ  ಯಕ್ಷಗಾನ ಸೇವೆಯಿಂದ ಭಕ್ತರಿಗೂ ನಿರಾಳ ಮತ್ತು ಕಲಾವಿದರನ್ನು ಪೋಷಿಸಿದಂತಾಗುವುದು. ಯಕ್ಷಗಾನ ಪ್ರಿಯೆ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದ ಶ್ರೀ ಕ್ಷೇತ್ರವು ಕಲೆಯನ್ನು ಉಳಿಸಿ, ಬೆಳೆಸುತ್ತಿರುವುದು ಯಕ್ಷಗಾನ ಕಲೆಗೆ ಸಂದ ಗೌರವ.
 
 
 
 
 
 
 
 
 
 
 

Leave a Reply