ಬೇಕರಿಗೆ ನುಗ್ಗಿ ದಾಂಧಲೆ; ಮೂವರು ವಶಕ್ಕೆ

ಬೆಂಗಳೂರು ಎಚ್.ಎ.ಎಲ್ ಕುಂದನಹಳ್ಳಿ ಗೇಟ್ ಬಳಿ ಶ್ರೀ ಬ್ರಹ್ಮಲಿಂಗೇಶ್ವರ ಬೇಕರಿ ನಡೆಸುತ್ತಿದ್ದ ಬೈಂದೂರು ಮದ್ದೋಡಿಯ ಯುವಕರಿಗೆ ಹಲ್ಲೆ ನಡೆಸಿ 1.90 ಲಕ್ಷ ರೂ. ಹಣ ದೋಚಿದ್ದ ಮೂವರು ಆರೋಪಿಗಳನ್ನು ಹೆಚ್.ಎ.ಎಲ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿರುವ ಕಾರ್ತಿಕ್ (20), ಅಲ್ಯೂಮಿನಿಯಂ ಕೆಲಸಗಾರ ಸಲ್ಮಾನ್ (20), ಖಾಸಗಿ ಹೋಟೆಲ್ ಮ್ಯಾನೇಜರ್ ಕಾರ್ತಿಕ್ (23) ಬಂಧಿತರು. ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಅವರು ಘಟನೆಯ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಗುರುವಾರ ರಾತ್ರಿ 11.30 ರ ಸಮಯದಲ್ಲಿ 7-8 ಅಪರಿಚಿತರು ಟೀ ಕೇಳಿದ್ದು, ಅವರಿಗೆ ಕುಡಿಯಲು ಟೀ ಕೊಟ್ಟಿದ್ದು, ನಂತರ ಉದ್ದೇಶಪೂರ್ವಕವಾಗಿ ತಗಾದೆ ತೆಗೆದು ಹಣ ಕೊಡುವ ವಿಷಯದಲ್ಲಿ ಏಕಾಏಕಿ ಇಬ್ಬರು ಅಪರಿಚಿತರು ಅಂಗಡಿ ಒಳಗೆ ಬಂದು ಮನಬಂದಂತೆ ಪ್ಲಾಸ್ಟಿಕ್ ಕ್ರೇಟ್ ಮತ್ತು ಹೆಲ್ಮಟ್ ಹಾಗೂ ಮುಷ್ಠಿಯಿಂದ ಅಲ್ಲದೇ ನಮ್ಮ ಅಂಗಡಿಯಲ್ಲಿ ರಾಡ್‌ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪ್ರಜ್ವಲ್‌ಶೆಟ್ಟಿ, ನಿತೀನ್ ಶೆಟ್ಟಿ ಅವರ ಮೇಲೆಯೂ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ನನ್ನ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರ, 25 ಸಾವಿರ ರೂ. ಬೆಲೆ ಬಾಳುವ ಚೈನ್ ತೆಗೆದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್ ವಸ್ತುಗಳನ್ನು ಹಾಗೂ ಗ್ಲಾಸ್‌ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿ, ಕ್ಯಾಷ್ ಬಾಕ್ಸ್‌ನಲ್ಲಿ 1.90 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಹೋಗುವಾಗ ಪೊಲೀಸ್‌ಗೆ ಏನಾದರೂ ದೂರು ನೀಡಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ. ನಿಮ್ಮನ್ನು ಕೊಲೆ ಮಾಡುತ್ತೇವೆ. ತಕ್ಷಣ ಊರು ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಹಲ್ಲೆಗೊಳಗಾದ ನವೀನ್ ಕುಮಾರ್ ಎಚ್ಎಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋ ವೈರಲ್ ಆಗಿ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕರಾವಳಿ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್.ಎ.ಎಲ್ ಪೊಲೀಸ್ ಠಾಣೆಗೆ ಕರಾವಳಿಯ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಮುತ್ತಿಗೆ ಹಾಕಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು.

ಘಟನೆ ವೈರಲ್ ಆದ ಬೆನ್ನಲ್ಲೇ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಖುದ್ದು ಗ್ರಹ ಮಂತ್ರಿ, ಪೊಲೀಸ್ ಕಮಿಷನರ್ ಸಹಿತ ಸಂಬಂಧಪಟ್ಟವರಿಗೆ ಫೋನಾಯಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅಂಗಡಿ ನಾಶ ಮಾಡಿ ಹಾನಿ ಮಾಡಿದ್ದರಿಂದ ತಕ್ಷಣದ ರಿಪೇರಿ ಹಾಗೂ ಪುನಃ ವ್ಯವಹಾರ ಪ್ರಾರಂಭಿಸಲು ವೈಯಕ್ತಿಕವಾಗಿ 1 ಲಕ್ಷ ನೆರವು ನೀಡಿ ಸ್ಪಂದನೆ ನೀಡಿದರು.

 
 
 
 
 
 
 
 
 
 
 

Leave a Reply