ಉಡುಪಿ: ರಾಡ್ ಹಿಡಿದು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ; ಪತ್ತೆಗೆ ಸೂಚನೆ!

ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ದಿನಗಳಿಂದ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಿದ್ದು ಆತಂಕ ಸೃಷ್ಟಿಸಿದ ವ್ಯಕ್ತಿಯನ್ನು ವಿಶು ಶೆಟ್ಟಿ, ಸ್ಥಳೀಯರಾದ ಸತೀಶ್ ಆಚಾರ್ಯರವರ ಸಹಾಯದಿಂದ ವಶಕ್ಕೆ ಪಡೆದು ಹಿರಿಯಡ್ಕ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ, ಮಂಜೇಶ್ವರದ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ನಿಕೇತನದಲ್ಲಿ ದಾಖಲಿಸಿದ ಘಟನೆ ಮೇ 31 ರಂದು ನಡೆದಿದೆ.

 ವ್ಯಕ್ತಿಯ ಹೆಸರು ನಂದ (48 ವ) ಎಂದಷ್ಟೇ ಮಾಹಿತಿ ನೀಡಿದ್ದಾರೆ. ತುಳು ಭಾಷೆ ಮಾತನಾಡುತ್ತಿದ್ದು ಕಳೆದ ಕೆಲವು ದಿನಗಳಿಂದ ಪೆರ್ಡೂರಿನ ದೂಪದಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹಗಲು ತಿರುಗಾಡುತ್ತಾ ಒಮ್ಮೊಮ್ಮೆ ಉದ್ರಿಕ್ತನಾಗುತ್ತಾನೆ. ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ಶಾಲಾರಂಭದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂದು ವಿಷಯ ತಿಳಿಸಿದ್ದು ಕೂಡಲೇ ವಿಶು ಶೆಟ್ಟಿ ಕಾರ್ಯಾಚರಣೆ ನಡೆಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ವಿಶು ಶೆಟ್ಟಿ ಅವರ ಮನವಿಯ ಮೇರೆಗೆ ಆಶ್ರಮದ ಡಾ. ಉದಯಕುಮಾರ್ ದಂಪತಿ ಆಶ್ರಯ ಚಿಕಿತ್ಸೆ ನೀಡಲು ಸಮ್ಮತಿಸಿದ್ದು, ತನ್ನ ವಾಹನದಲ್ಲಿ ಮಂಜೇಶ್ವರಕ್ಕೆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಪೆರ್ಡೂರಿನ ಸತೀಶ್ ಆಚಾರ್ಯ ಆಶ್ರಮಕ್ಕೆ ರೂ.5000/-, ದೇಣಿಗೆ ನೀಡಿದ್ದಾರೆ.

 ವ್ಯಕ್ತಿಯು ತುಳು ಭಾಷೆ ಮಾತನಾಡುವುದರಿಂದ ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯವರು ಆಗಿರಬಹುದು. ಸಂಬಂಧಿಕರು ಹಿರಿಯಡ್ಕ ಠಾಣೆ ಅಥವಾ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

 ಸಾಮಾಜಿಕ ಕಾರ್ಯಕರ್ತರಾದ ಹರೀಶ್ ಉದ್ಯಾವರ, ಸ್ಟ್ಯಾನ್ಲಿ ಕೊರಂಗ್ರಪಾಡಿ, ಸಂದೇಶ್ ಉಚ್ಚಿಲ ಸಹಕರಿಸಿದರು.

ಮಾನಸಿಕ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಆತಂಕಿತವಾಗಿ ತಿರುಗಾಡುತ್ತಿದ್ದು, ಶೀಘ್ರ ಕಾರ್ಯಚರಣೆಯ ಮೂಲಕ ಮಹಿಳೆಯರು ಮತ್ತು ಶಾಲಾ ಮಕ್ಕಳ ಮೇಲಾಗುವ ಸಂಭವನೀಯ ದುರಂತ ತಪ್ಪಿಸಿದಂತಾಗಿದೆ. ಈ ಪ್ರಕರಣದಲ್ಲಿ ಜಾಗೃತಗೊಂಡ ಸ್ಥಳಿಯರಾದ ಸತೀಶ್ ಆಚಾರ್ಯರವರ ಕಾರ್ಯ ಶ್ಲಾಘನೀಯ. ಸಂಬಂಧಿಸಿದ ಇಲಾಖೆ ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷ ವಹಿಸದೆ ತುರ್ತು ಕ್ರಮ ತೆಗೆದುಕೊಳ್ಳಬೇಕು.

~ವಿಶುಶೆಟ್ಟಿ ಅಂಬಲಪಾಡಿ

ಸಮಾಜ ಸೇವಕರು

 
 
 
 
 
 
 
 
 
 
 

Leave a Reply