ಶಿರ್ಲಾಲು : ಭೈರವರಸ ಪಾಂಡ್ಯಪ್ಪರಸನ ಶಾಸನ ಅಧ್ಯಯನ

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಕಡ್ಜೆಲ್ ಪ್ರದೇಶದ ಸುದೇಶ್ ಜೈನ್ ಇವರಿಗೆ ಸೇರಿದ ಜಾಗದಲ್ಲಿ ಕಳಸ ಕಾರ್ಕಳ ಭೈರವರಸ ಮನೆತನಕ್ಕೆ ಸೇರಿದ ರಾಣಿ ಕಾಳಲಾದೇವಿಯ ಕುಮಾರ ಪಾಂಡ್ಯಪ್ಪರಸನ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿಯಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ- ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ ಕೃಷ್ಣಯ್ಯ ಇವರ ಸಹಯೋಗದಲ್ಲಿ ಅಧ್ಯಯನಕ್ಕೆ ಒಳಪಡಿಸಿರುತ್ತಾರೆ. 

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 3 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದ್ದು 14 ನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 17 ಸಾಲುಗಳನ್ನು ಒಳಗೊಂಡಿದೆ.

ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿವಲಿಂಗವಿದ್ದು ಇದರ ಇಕ್ಕೆಲಗಳಲ್ಲಿ ಸೂರ್ಯ -ಚಂದ್ರ, ದೀಪಕಂಬ, ರಾಜಕತ್ತಿ ಹಾಗೂ ನಂದಿಯ ಉಬ್ಬು ಕೆತ್ತನೆಯಿದೆ.

*ಸ್ವಸ್ತಿ ಶ್ರೀ* ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1290 (ಸಾಮಾನ್ಯ ವರ್ಷ 1368) ನೆಯ ಪ್ಲವಂಗ ಸಂವತ್ಸರದ ಆಷಾಢ ಮಾಸ 9 ನೆಯ ಆದಿತ್ಯವಾರದಂದು ಕಾಳಲದೇವಿಯ ಕುಮಾರ ಪಾಂಡ್ಯಪ್ಪರಸನು ಕಾಂತು ನಾಯ್ಕಂಗೆ (?) ಭೂ ದಾನವನ್ನು ಕೊಟ್ಟಿದ್ದು ಇಲ್ಲಿಂದ ಪ್ರತಿ ವರುಷ ಬಾರಕೂರ ಗದ್ಯಾಣ 1 ನು ಕಳಸದ ಶ್ರೀ ಕಳಸನಾಥ ದೇವರಿಗೆ ಕೊಟ್ಟು ಅವನ ಸಂತಾನವು ಸುಖ ಸಮೃದ್ಧಿಯಿಂದ ಬಾಳಬೇಕೆಂದು ಶಾಸನವು ಉಲ್ಲೇಖಿಸುತ್ತದೆ. ಶಾಸನದಲ್ಲಿ ಶಾಪಶಯ ವಾಕ್ಯದ ಬಳಿಕ ಈ ಶಾಸನವನ್ನು‌ ಬರೆದ ಬಿರ್ಮಮಲ್ಲಿಯ ಉಲ್ಲೇಖವಿದೆ.

ಈ ಶಾಸನದ ಪ್ರಾಥಮಿಕ ಮಾಹಿತಿಯನ್ನು ಸ್ಥಳೀಯರಾದ ಶರತ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು-ಕಾರ್ಕಳ ಇಲ್ಲಿನ ಕನ್ನಡ ಉಪನ್ಯಾಸಕರಾದ ರಂಜಿತ್ ಕುಮಾರ್ ಸಂಶೋಧನಾರ್ಥಿಗೆ ತಿಳಿಸಿದ್ದು ಕ್ಷೇತ್ರಕಾರ್ಯ ಶೋಧನೆಯಲ್ಲಿ ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯ ಮತ್ತು ಪ್ರಭಾತ್ ಬಲ್ನಾಡು ಹಾಗೂ ಪುರಾತತ್ವ ವಿದ್ಯಾರ್ಥಿಗಳಾದ ಶಶಾಂತ್, ಆರ್.ಶ್ರಾವ್ಯಾ ಮತ್ತು ಮಂಜುನಾಥ ನಂದಳಿಕೆ ಜೊತೆಗೆ ಸ್ಥಳೀಯರಾದ ಶ್ರೀನಾಥ್ ನಾಯ್ಕ್ ಮತ್ತು ನಿಲಿನ್‌ ಶೆಟ್ಟಿ ಸಹಕಾರ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply