ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆಯಲ್ಲಿ 2024-25 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ

ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ ಇದರ 2024-25 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆಗೆ ಒಂದು ವಾರದ ಮುಂಚೆಯೇ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು ಅದರಂತೆ ದಿನಾಂಕ 15 ಜೂನ್ 2024 ರ ಶನಿವಾರ ಚುನಾವಣೆ ನಿಗದಿಯಾಯಿತು. ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗೆತ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಎಲ್ಲದಕ್ಕೂ ದಿನಾಂಕಗಳನ್ನು ಘೋಷಿಸಲಾಗಿತ್ತು. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿದ್ದರು. ಶಾಲಾ ನಾಯಕ ಮತ್ತು ಉಪ ನಾಯಕ ಸ್ಥಾನಕ್ಕೆ ತಲಾ ಮೂವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು .5 ದಿನಗಳ ಬಿರುಸಿನ ಚುನಾವಣಾ ಪ್ರಚಾರದ ನಂತರ ಜೂನ್ 15 ರಂದು ಚುನಾವಣೆಗೆ ವೇದಿಕೆ ಸಜ್ಜಾಗಿತ್ತು. ಸಂಸದೀಯ ಮಾದರಿಯ ಚುನಾವಣಾ ಪರಿಕಲ್ಪನೆಯನ್ನು ಇಟ್ಟುಕೊಂಡು ಇವಿಎಂ ತಂತ್ರಜ್ಞಾನವನ್ನು ಬಳಸಿ ನಾಯಕ ಹಾಗೂ ಉಪನಾಯಕನ ಆಯ್ಕೆಯನ್ನು ಮಾಡಲಾಯಿತು.

ಎಲ್ಲಾ ಮತದಾರ ವಿದ್ಯಾರ್ಥಿಗಳು ಗುರುತುಪತ್ರ ತೋರಿಸಿ ಮತ ಚಲಾಯಿಸಿದರು. ಮೊದಲ ಮತದಾನ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ ಎರಡನೇ ಮತದಾನಾಧಿಕಾರಿ ಮತದಾರರಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿ, 17 (A) ಮತದಾರರ ರಿಜಿಸ್ಟರ್ ನಲ್ಲಿ ಸಹಿ ಪಡೆದು ಮತಪತ್ರ ನೀಡಿದರು. ಮೂರನೇ ಮತದಾನ ಅಧಿಕಾರಿ ಮತಪತ್ರ ಪಡೆದು ಇ ವಿ ಎಂ ಕಂಟ್ರೋಲ್ ಯೂನಿಟ್ ನಲ್ಲಿ ವೋಟ್ ನೀಡಿದರು. ಪ್ರತ್ಯೇಕ ಕಂಪಾರ್ಟ್ಮೆಂಟ್ ನಲ್ಲಿ ಇರಿಸಲಾಗಿದ್ದ ಬ್ಯಾಲೆಟ್ ಯೂನಿಟ್ ನಲ್ಲಿ ಮಕ್ಕಳು ತಮಗೆ ತಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿನ ನೀಲಿ ಗುಂಡಿ ಒತ್ತಿ ಮತ ಚಲಾಯಿಸಿದರು. 

ಎಲ್ಲಾ ವಿದ್ಯಾರ್ಥಿಗಳು ಮತ ಚಲಾಯಿಸಿದ ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು. 10ನೆಯ ತರಗತಿಯ ಖಾಜಾ ಬಂದೆ ನವಾಝ್ ಶಾಲಾ ನಾಯಕನಾಗಿ ಆಯ್ಕೆಯಾದರು. ಶಾಲಾ ಉಪನಾಯಕರಾಗಿ   8 ನೆಯ ತರಗತಿಯ ರಾಜು ಆಯ್ಕೆಯಾದರು.

ವಿಜೇತ ಅಭ್ಯರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಅಭಿನಂದಿಸಿದರು. ಶಾಲಾ ಶಿಕ್ಷಕರಾದ ವಿಜಯ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ, ಯಶೋದಾ, ಗೀತಾ, ಡೈಸಿ ಡಿ ಸಿಲ್ವಾ , ಗಣೇಶ ನಾಯಕ್ ಮತಗಟ್ಟೆ ಸಿಬ್ಬಂದಿಯಾಗಿ ಸಹಕರಿಸಿದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ವಸತಿ ನಿಲಯದ ಕೊಪ್ಪಳ ಜಿಲ್ಲೆಯ ಕೆಲವು ವಿದ್ಯಾರ್ಥಿಗಳಿಗೆ ಇ ವಿ ಎಂ ಮಾದರಿಯ ಮೊದಲ ಮತದಾನದ ಸಂಭ್ರಮ ಇದಾದರೆ ಇನ್ನೂ ಕೆಲವರಿಗೆ ಇದು ಮರುಕಳಿಸಿದ ಅನುಭವ. ಆದರೂ ಇವಿಎಂ ಮತಯಂತ್ರದ ಯಾವ ಗುಂಡಿ ಒತ್ತಿ ಮತದಾನ ಮಾಡಬೇಕೆಂಬ ಬಗ್ಗೆ ಇನ್ನೂ ಗೊಂದಲ.. ಕೊನೆಗೂ ಮತಯಂತ್ರದ ಬೀಪ್ ಸೌಂಡ್ ಕೇಳಿದಾಗ ಏನೋ ಸಾಧಿಸಿದ ನಗು, ಅರಳಿದ ಮುಖ. ಸಾರ್ವತ್ರಿಕ ವಯಸ್ಕ ಮತದಾನ ಮಾಡಿದಷ್ಟೇ ಹೆಮ್ಮೆಯ ಭಾವ. ಇದು ಕಂಡದ್ದು ಇಂದು ನಡೆದ ಶಾಲಾ ಸಂಸತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ.

 
 
 
 
 
 
 
 
 
 
 

Leave a Reply