ಕೋಟೇಶ್ವರ : ಅಲೆಗಳ ರಭಸಕ್ಕೆ ಸಮುದ್ರಪಾಲಾದ ಯುವಕ!

ಕೋಟೇಶ್ವರ ಸಮೀಪದ ಬೀಜಾಡಿ ಬೀಚ್‌ಗೆ ಸ್ನೇಹಿತನ ಜತೆ ವಿಹಾರಕ್ಕೆಂದು ಬಂದಿದ್ದ ಯುವಕನೊಬ್ಬ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಮುದ್ರಪಾಲಾದ ಘಟನೆ ಬುಧವಾರ ಸಂಜೆ 6.45ರ ಸುಮಾರಿಗೆ ಸಂಭವಿಸಿದೆ. ಆತನ ಜತೆಗೆ ಬಂದು, ರಕ್ಷಣೆಗೆಂದು ಕಡಲಿಗಿಳಿದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ರಾಜೇಶ್‌ ಅವರ ಪುತ್ರ ಯೋಗೀಶ್‌ (23) ಸಮುದ್ರ ಪಾಲಾದ ಯುವಕ. ಈತನೊಂದಿಗೆ ಬಂದಿದ್ದ ಅದೇ ಜಿಲ್ಲೆಯ ಸಂದೀಪ್‌ (24) ನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇಲ್ಲಿನ ದಾರಸ್‌ ಮನೆ ಸಮೀಪದ ಬೀಚ್‌ಗೆ ಯೋಗೀಶ್‌ ಹಾಗೂ ಸಂದೀಪ್‌ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್‌ ನೀರಿಗಿಳಿದಿದ್ದಾರೆ. ಬುಧವಾರ ಸಂಜೆ ವೇಳೆಗೆ ಮಳೆ ಜಾಸ್ತಿ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. ಅಲೆಯಬ್ಬರಕ್ಕೆ ಯೋಗೀಶ್‌ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್‌ ಅವರು ಯೋಗೀಶ್‌ ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್‌ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್‌ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.

ಯೋಗೀಶ್‌ ಹಾಗೂ ಸಂದೀಪ್‌ ಇಬ್ಬರೂ ಸಹ ಜೂ. 20ರಂದು ನಡೆಯಲಿರುವ ತನ್ನ ಸ್ನೇಹಿತ ಬೀಜಾಡಿಯ ವಿನಯ್‌ ಅವರ ಅಕ್ಕನ ಮದುವೆಗೆಂದು ಬಂದಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್‌, ನಗರ ಠಾಣಾ ಎಸ್‌ಐ ಪ್ರಸಾದ್‌ ಕುಮಾರ್‌ ಹಾಗೂ ಪೊಲೀಸ್‌ ಸಿಬಂದಿ ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿ ಭೇಟಿ ನೀಡಿ, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು. ಆದರೆ ರಾತ್ರಿಯಾಗಿದ್ದರಿಂದ ಸ್ಥಗಿತಗೊಳಿಸಲಾಯಿತು. ಗುರುವಾರ ಬೆಳಗ್ಗೆ ಮತ್ತೆ ಪತ್ತೆ ಕಾರ್ಯ ನಡೆಯಿತು.

ಮಳೆಗಾಲದಲ್ಲಿ ಕಡಲ ಅಲೆಗಳ ಅಬ್ಬರ, ಗಾಳಿಯ ತೀವ್ರತೆಯೂ ಎಂದಿಗಿಂತ ತುಸು ಜಾಸ್ತಿಯೇ ಇರುವುದರಿಂದ ಈ ಸಂದರ್ಭದಲ್ಲಿ ಕಡಲಿಗೆ ಇಳಿದು ನೀರಲ್ಲಿ ಆಟ ಆಡುವುದು, ಮೋಜು, ಮಸ್ತಿಯಲ್ಲಿ ತೊಡಗುವುದು, ಅಲೆಗಳೊಂದಿಗೆ ಆಟವಾಡುತ್ತ ಫೋಟೋ ತೆಗೆಸಿಕೊಳ್ಳುವುದು ಅಪಾಯಕಾರಿ. ಸ್ವಲ್ಪ ಮೈಮರೆತರೆ ಜೀವಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಬೀಚ್‌ಗೆ ವಿಹಾರಕ್ಕೆ ಬರುವ ಸ್ಥಳೀಯರು, ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದಲೇ ಇರಬೇಕಾಗಿದೆ.

 
 
 
 
 
 
 
 
 
 
 

Leave a Reply