ಬೆಂಗಳೂರು: ಅಂತರ್ಜಾಲದ ಮೂಲಕ ಅಪ್ರಾಪ್ತ ಮಕ್ಕಳ ಅಶ್ಲೀಲ ವೀಡಿಯೊ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಉಡುಪಿಯ ಯುವಕನೋರ್ವನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸೌರವ್ ಶೆಟ್ಟಿ (21) ಬಂಧಿತ ಆರೋಪಿ. ಆತ ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ವೀಡಿಯ ಲಿಂಕ್ ರವಾನಿಸುತ್ತಿದ್ದ ಮಾಹಿತಿಯನ್ನು ರಾಜ್ಯದ ನೋಡಲ್ ಅಧಿಕಾರಿಯೊಬ್ಬರು ಸಂಗ್ರಹಿಸಿದ್ದರು. ಎಂ.ಬಿ.ಎ ಪದವೀಧರನಾಗಿರುವ ಸೌರವ್, ಅಶ್ಲೀಲ ವೀಡಿಯೊ ಮಾರಾಟ ಜಾಲದಲ್ಲಿ ಆತನೊಂದಿಗೆ ಇತರ 10 ಮಂದಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸೌರವ್ ಬಳಿ 7 ಜಿ. ಬಿ. ಮಕ್ಕಳ ಅಶ್ಲೀಲ ವೀಡಿಯೊ ಪತ್ತೆಯಾಗಿದೆ. ವಿದ್ಯಾರ್ಥಿಯಾಗಿದ್ದಾಗಲೇ ಅತ ಈ ರೀತಿಯ ದಂಧೆ ನಡೆಸುತ್ತಿದ್ದ. ಆನ್ಲೈನ್ ಜಾಲದಲ್ಲಿ ಅಶ್ಲೀಲ ವಿಡೀಯೊ ಹುಡುಕುವ ಸಂದರ್ಭ ಈತ ಅಂಥವರ ಸಂಪರ್ಕಕ್ಕೆ ಬಂದು ಇನ್ ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವೀಡಿಯೊ ಬೇಕಾದವರಿಗೆ ನೀಡಿ ಹಣ ಗಳಿಸುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕೇಂದ್ರ ಸರಕಾರದ ಅಪರಾಧ ದಾಖಲಾತಿ ಬ್ಯೂರೋದಿಂದ ಸಿಐಡಿಗೆ ಜು.7ರಂದು ದೊರೆತ ಮಾಹಿತಿಯಂತೆ ಸೌರವ್ ವಿರುದ್ಧ ತಂತ್ರಜಾನ ಕಾಯ್ದೆ ಮತ್ತು ಪೋಕ್ಸೊ ಅನ್ವಯ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ವೀಡಿಯೊಗಳನ್ನು ಆನ್ಲೈನ್ ಮೂಲಕ ಹಂಚುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ದೇಶಾದ್ಯಂತ ಅಪ್ರಾಪ್ತ ಮಕ್ಕಳ ವೀಡಿಯೊ ಆನ್ಲೈನ್ನಲ್ಲಿ ಹಂಚುತ್ತಿದ್ದ ಬಗ್ಗೆ ಸಿಐಡಿ ಡಿಎಸ್ ಪಿ ಯಶವಂತಕುಮಾರ್ ತನಿಖೆ ನಡೆಸಿದ್ದು, ಆರೋಪಿ ಸೌರವ್ ಶೆಟ್ಟಿ ಸಿಐಡಿ ಬಂಧನದಲ್ಲಿದ್ದಾನೆ.
ಆತನಿಂದ ನಿರ್ಬಂಧಿತ ವೀಡಿಯೊಗಳು, ಡಿಜಿಟಲ್ ಉಪಕರಣಗಳು, ಆನ್ಲೈನ್ ಕ್ಲೌಡ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾಲ ಬೇಧಿಸಲು ಸಿಐಡಿ ಪೊಲೀಸರು ತನಿಖೆ ನಿರತರಾಗಿದ್ದಾರೆ.