ಅದಮಾರು ಮಠದ ಗೋವುಗಳು ಕೃಷ್ಣಮಠಕ್ಕೆ ಸ್ಥಳಾಂತರ

ಉಡುಪಿ: ಉದ್ಯಾವರ ಸಮೀಪದ ಮಠದಕುದ್ರುನಲ್ಲಿದ್ದ ಅದಮಾರು ಮಠದ 21 ದನ-ಕರುಗಳನ್ನು ಕೃಷ್ಣಮಠಕ್ಕೆ ಸ್ಥಳಾಂತರಿಸಲಾಗಿದೆ.

ಶ್ರೀಮಠದ ಸುಪರ್ದಿಗೊಳಪಟ್ಟಿದ್ದ ಉದ್ಯಾವರ  ಮಠದಕುದ್ರುನಲ್ಲಿ ಅದಮಾರು ಮಠದ ಗೋಶಾಲೆಯ ಗೋವುಗಳನ್ನು ಸಾಕಲಾಗುತ್ತಿತ್ತು. ನಿರಂತರ ಮಳೆಯಿಂದಾಗಿ ಪಾಪನಾಶಿನಿ ನದಿ ಮಟ್ಟ ಮೀರಿ ಹರಿಯುತ್ತಿದ್ದು, ಮಠದಕುದ್ರುನಲ್ಲಿ ನದಿ ನೀರು ತುಂಬಿಕೊಂಡಿದೆ. ಅದರಿಂದಾಗಿ ನಡುಗಡ್ಡೆಯಲ್ಲಿ ಆಶ್ರಯ ಪಡೆದ ಗೋವುಗಳಿಗೆ ಸಮಸ್ಯೆ ಉಂಟಾಗಿತ್ತು.

ಸ್ಥಳೀಯ ವಿಬುಧೇಶ ನಗರದಲ್ಲಿರುವ 30ಕ್ಕೂ ಅಧಿಕ ಮನೆಗಳಿಗೂ ನೆರೆ ನೀರು ನುಗ್ಗಿದೆ.

ವಿಷಯ ತಿಳಿದ ಅದಮಾರು ಮಠದ ಸಿಬ್ಬಂದಿ ಕೂಡಲೇ ಮಠದಕುದ್ರುಗೆ ಧಾವಿಸಿದರು. ನಡುಗಡ್ಡೆಯಲ್ಲಿ ಸಂಕಷ್ಟದಲ್ಲಿದ್ದ ಗೋವುಗಳನ್ನು ಸ್ಥಳಾಂತರ ಮಾಡಿ ಎಲ್ಲ ಗೋವುಗಳನ್ನೂ ಉಡುಪಿ ಕೃಷ್ಣ ಮಠದ ಗೋಶಾಲೆಗೆ ತರಲಾಗಿದೆ.

ವಿಬುಧೇಶ ನಗರದಲ್ಲಿ ಮಠದ 30 ಗೋವುಗಳನ್ನು ಸಾಕಲಾಗುತ್ತಿದೆ. ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಗಿ ಗೋವುಗಳಿಗೆ ಸಮಸ್ಯೆ ಆಗಕೂಡದು ಎಂಬ ಆಶಯದಿಂದ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥರು ಮತ್ತು ಪರ್ಯಾಯ ಶ್ರೀ ಈಶಪ್ರಿಯತೀರ್ಥರ ಸೂಚನೆಯಂತೆ ಅವುಗಳನ್ನು ಉಡುಪಿಗೆ ರವಾನಿಸಲಾಗಿದೆ. ಮಳೆ ಕಡಿಮೆಯಾಗುವ ವರೆಗೂ ರಾಜಾಂಗಣದ ಪಕ್ಕದಲ್ಲಿ ಎಲ್ಲ ಗೋವುಗಳ ಆರೈಕೆ ಮಾಡಲಾಗುವುದು ಎಂದು ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply