ಸ್ತ್ರೀ ಅಂದರೆ ಪ್ರಕೃತಿ~ ಡಾ ರಾಜಲಕ್ಷ್ಮಿ, ಸಂತೆಕಟ್ಟೆ.

ವರಕವಿ ಬೇಂದ್ರೆಯವರು ತಮ್ಮ ಒಂದು ಕವನ ದಲ್ಲಿ ಮಹಿಳೆಯರನ್ನು ಹೀಗೆ ಬಣ್ಣಿಸಿದ್ದಾರೆ.

“ಮನೆಯ ಹೊಸ್ತಿಲಕೆ ಶುಭವ ಬರೆಯುವಾಕೆ,
ಮಂಗಳವ ಬಾರೆಂದು ಕರೆಯುವಾಕೆ, ಬಾಳ ಸುಳಿಯಲಿ ಬೆಳಕ ತೋರುವಾಕೆ, ದಿನದಿನವೂ ನವಜಯವ ಕೋರುವಾಕೆ”…

ಮಹಿಳೆ ಎಲ್ಲರ ಬಾಳಿನಲ್ಲಿ ಎಂತ ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವುದನ್ನು ಈ ಮೇಲಿನ ಸಾಲು ಗಳು ಸಾರಿ ಹೇಳುತ್ತಿವೆ.

ಸ್ತ್ರೀ ಅಂದರೆ ಪ್ರಕೃತಿ ಆಕೆ ತನ್ನ ಪ್ರಕೃತಿದತ್ತವಾದ ವಾತ್ಸಲ್ಯ, ಮಮತೆ, ಪ್ರೀತಿ ಮತ್ತು ಸ್ನೇಹದಿಂದ ಮಗಳಾಗಿ, ಸತಿಯಾಗಿ, ಸೋದರಿಯಾಗಿ, ಸೊಸೆ ಯಾಗಿ, ತಾಯಿಯಾಗಿ, ಅತ್ತಿಗೆ ನಾದಿನಿಯಾಗಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆಯಾಗಿ, ಅಜ್ಜಿಯಾಗಿ ತನ್ನನ್ನು ಅವಲಂಬಿಸಿದ ಸರ್ವರ ಬಾಳನ್ನು ಬೆಳಗುವ ಕರುಣಾಮಯಿ.

ಏಕಕಾಲದಲ್ಲಿ ಹಲವು ಕೆಲಸಗಳನ್ನು ಸಮರ್ಪಕ ವಾಗಿ ನಿಭಾಯಿಸಬಲ್ಲ ಜಾಣೆ. ಇಂಥ ಪ್ರತಿಭಾವಂತ ಮಹಿಳೆ, ಆರೋಗ್ಯವಂತ ಸಮಾಜವನ್ನು ರೂಪಿಸು ವಲ್ಲಿ ಬಹಳ ಮಹತ್ತರವಾದ ಕೊಡುಗೆ ನೀಡ ಬಲ್ಲಳು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿಶ್ವದ ಹಲವು ಆರೋಗ್ಯ ಕಾರ್ಯಕ್ರಮಗಳಲ್ಲಿ ಮಹಿಳೆಯರ ಕೊಡುಗೆ 71%. ಭಾರತದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಯೋಜನೆಗಳ ಯಶಸ್ಸಿಗೆ 70-80% ಮಹಿಳಾ ಆರೋಗ್ಯ ಕಾರ್ಯಕರ್ತರು ಕಾರಣ.

ಆಸ್ಪತ್ರೆಗಳಲ್ಲೂ 30% ಮಹಿಳಾ ವೈದ್ಯರು ಹಾಗೂ 70-80% ಮಹಿಳಾ ದಾದಿಯರು ಕಾರ್ಯ ನಿರ್ವ ಹಿಸುವ ಮೂಲಕ ಸಮಾಜದ ಆರೋಗ್ಯದ ರಕ್ಷಣೆಗೆ ಕೈಜೋಡಿಸಿದ್ದಾರೆ.

ಹಿಂದಿನ ಕಾಲದಲ್ಲಿ ಸೂಲಗಿತ್ತಿಯರು ಊರಿನ ಹೆಣ್ಣು ಮಕ್ಕಳ ಪ್ರಸವದ ಸಮಯದಲ್ಲಿ ಸಹಕಾರ ನೀಡುತ್ತಿದ್ದರು. ಇಂದಿನ ದಿನಗಳಲ್ಲಿ ಹೆರಿಗೆ ಆಸ್ಪತ್ರೆ ಯಲ್ಲಿ ನಡೆಯುತ್ತಿರುವುದರಿಂದ ಬಾಣಂತಿ ಮಗು ಆರೈಕೆ ಹಾಗೂ ಬಾಣಂತಿ ಮದ್ದು ತಯಾರಿಕೆಗೆ ಇವರ ಕಾರ್ಯ ಸೀಮಿತ.

ಬಿಳಿ ಸೀರೆಯ ಹಿರಿಯ/ಕಿರಿಯ ಆರೋಗ್ಯ ಸಹಾಯಕಿಯರು, ಗುಲಾಬಿ ಬಣ್ಣದ ಸೀರೆಯುಟ್ಟ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದ ಆರೋಗ್ಯ ಕಾರ್ಯಕರ್ತೆಯರು.

ಸರಕಾರದ ಆರೋಗ್ಯ ಯೋಜನೆಗಳು, ಆಸ್ಪತ್ರೆ, ವೈದ್ಯರು ಹಾಗೂ ಜನಸಾಮಾನ್ಯರ ಮಧ್ಯದ ಕೊಂಡಿಗಳಿವರು. ಸಂಪರ್ಕ ಸೇತುವೆಗಳಿವರು. ಗರ್ಭಿಣಿ ಸ್ತ್ರೀಯರು, ಬಾಣಂತಿ ಮತ್ತು ಮಗುವಿನ ಆರೋಗ್ಯ, ಮಕ್ಕಳ ಆಹಾರ, ಆರೋಗ್ಯ ಹಾಗೂ ಲಸಿಕೆಗಳು, ಕುಟುಂಬ ನಿಯಂತ್ರಣ ವಿಧಾನಗಳ ಬಗ್ಗೆ ಮಾಹಿತಿ ಇಂತಹ‌ ಹಲವು ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ಯನ್ನು ಈ ವನಿತೆಯರು ನಿರ್ವಹಿಸುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ಇವರು ಸಮಾಜಕ್ಕೆ ನೀಡಿದ ಸೇವೆಗೆ, ಜನತೆ ಎಂದಿಗೂ ಇವರೆಲ್ಲರಿಗೆ ಚಿರಋಣಿಯಾಗಿರಬೇಕು.

ಸ್ವತಂತ್ರ ಭಾರತದ ಪ್ರಥಮ ಆರೋಗ್ಯ ಸಚಿವೆ ರಾಜಕುಮಾರಿ ಅಮೃತ್ ಕೌರ್ 1952ರಲ್ಲಿ ಕುಟುಂಬ ನಿಯಂತ್ರಣ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಆರೋಗ್ಯ ಅಭಿಯಾನದ ಕಡೆಗೆ ಪ್ರಥಮ ಹೆಜ್ಜೆಯಿಟ್ಟರು. ಮುಂದಿನ ದಿನಗಳಲ್ಲಿ ಡಾ ಆನಂದಿ ಬಾಯಿ ಜೋಶಿ, ಡಾ ಕಾದಂಬರಿ ಗಾಂಗೂಲಿ, ಡಾ ಜೆರೇಷಾ ಮುಂತಾದ ಮಹಿಳಾ ವೈದ್ಯರು ಹೆಂಗಳೆಯರ ಆರೋಗ್ಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ನಮ್ಮ ಮಣಿಪಾಲದ ಡಾ ಪದ್ಮಾ ರಾವ್ ರವರು ಸಮುದಾಯದ ಆರೋಗ್ಯದಲ್ಲಿ ಎತ್ತಿದ ಕೈ.
ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗವನ್ನು ಪ್ರಾರಂಭಿಸಿದರು. ಮಲ್ಪೆ, ಕಟಪಾಡಿ, ಕಾಪು ಹಿರಿಯಡ್ಕ ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರ ಹೆರಿಗೆ ಸುಲಲಿತವಾಗಿ ನಡೆಯಲು ಸಹಾಯ ಹಸ್ತವನ್ನು ಚಾಚಿದರು.

ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಉದರ ದರ್ಶಕ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯೆ ಇವರು.

ಮಹಿಳಾ ವೈದ್ಯರು ಸಾಮಾಜಿಕ ಆರೋಗ್ಯ ರಕ್ಷಣೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜನ ಸಾಮಾನ್ಯರು ಮಹಿಳಾ ವೈದ್ಯರೊಂದಿಗೆ ತಮ್ಮ ಸಮಸ್ಯೆಗಳನ್ನು ಮುಚ್ಚುಮರೆಯಿಲ್ಲದೆ ಪ್ರಸ್ತುತ ಪಡಿಸಿ ಅಗತ್ಯ ಸಲಹೆ ಪಡೆಯುತ್ತಾರೆ. ಮಹಿಳಾ ವೈದ್ಯೆಯರ ಸಂವೇದನಾ ಶೀಲತೆ ಹಾಗೂ ಪ್ರಾಮಾಣಿಕತೆ ಅವರನ್ನು ರೋಗಿಗಳ ಅಚ್ಚು ಮೆಚ್ಚಿನ ವೈದ್ಯರನ್ನಾಗಿಸುತ್ತದೆ.

ಹಲವು ಮಹಿಳಾ ವೈದ್ಯರು ಆರೋಗ್ಯ ಮಾಹಿತಿ ಶಿಬಿರಗಳ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುತ್ತಾರೆ. ಇಂತಹ ಮಾಹಿತಿ ಶಿಬಿರಗಳನ್ನು ಜನರು ಸದುಪಯೋಗ ಪಡೆದು ಕೊಂಡು ಸಕಾಲದಲ್ಲಿ ವೈದ್ಯರ ಸಲಹೆ ಪಡೆದಾಗ ಕಾಯಿಲೆಗಳ ಪ್ರಮಾಣ ಹಾಗೂ ತೀವ್ರತೆ ಕಡಿಮೆಯಾಗುತ್ತದೆ.

ಇನ್ನೂ ಸಮಾಜ ಸೇವಾ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಕೂಡಾ ಆರೋಗ್ಯ ಕಾಳಜಿ ಮೂಡಿಸು ವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

Missionaries of Charities ಸಂಸ್ಥೆಯ ಮದರ್ ತೆರೇಸಾ ರವರು ಸಮುದಾಯದ ಆರೋಗ್ಯದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.
ದೀನದುರ್ಬಲರ, ನಿರಾಶ್ರಿತರ ಬಗೆಗಿನ ಅವರ ಕಾಳಜಿ, ಅವರು ನೀಡಿದ ಆರೋಗ್ಯ ಸೇವೆ ಪ್ರಶಂಸನೀಯ.

Lady with the lamp ಎಂದೇ ಪ್ರಸಿದ್ಧಿ ಪಡೆದ ಫ್ಲಾರೆನ್ಸ್ ನೈಟಿಂಗೇಲ್ ಎರಡನೇ ಮಹಾಯುದ್ಧದ ಸಮಯದಲ್ಲಿ ಹಗಲಿರುಳೆನ್ನದೆ ಗಾಯಾಳು ಸೈನಿಕರಿಗೆ ಶುಶ್ರೂಷೆ ನೀಡಿ ದಾದಿಯರಿಗೆ ದಾರಿ ದೀಪವಾದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಕೂಡ ಆರೋಗ್ಯ ಮಾಹಿತಿ ಹಾಗೂ ಯೋಗ, ವ್ಯಾಯಾಮಗಳ ಬಗ್ಗೆ ಮಾಹಿತಿ ನೀಡುವ ಹಲವು ಮಾಹಿತಿದಾರರಿದ್ದಾರೆ (Social media influencers) ಇಲ್ಲಿ ದೊರೆಯುವ ಮಾಹಿತಿಗಳನ್ನು ಸರಿಯಾಗಿ ಬಳಸಿಕೊಳ್ಳುವ ವಿವೇಕ ನಮಗಿರ ಬೇಕು.

ಒಟ್ಟಿನಲ್ಲಿ ಓರ್ವ ಮಹಿಳೆ ವೈದ್ಯೆ, ನರ್ಸ್, ಆರೋಗ್ಯ ಕಾರ್ಯಕರ್ತೆ, ಆರೋಗ್ಯ ಸಂಬಂಧಿ ಯೋಜನೆ ಗಳನ್ನು ರೂಪಿಸುವ ಅಧಿಕಾರಿ ಹೀಗೆ ಹಲವಾರು ರೂಪಗಳಲ್ಲಿ ಸಾಮಾಜಿಕ ಆರೋಗ್ಯಕ್ಕೆ ತಮ್ಮ ಕೊಡುಗೆ ನೀಡುತ್ತಾಳೆ ‌.

ಸಂಸ್ಕೃತ ಸುವಚನ ” ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಾ:
ಪರೋಪಕಾರಾಯ ದುಹಂತಿ ಗಾವ:
ಪರೋಪ ಕಾರಾರ್ಥಮಿದಂ ಶರೀರಂ.. “ಸಾರುವಂತೆ, ಪರೋಪಕಾರಿಯಾಗಿ ಬಾಳಿದಾಗ ಸರ್ವರ ಜೀವನ ಹಸನಾಗುತ್ತದೆ.ಸರ್ವೇ ಜನಾ: ಸುಖಿನೋ ಭವಂತು

ಲೇಖನ: ಡಾ. ರಾಜಲಕ್ಷ್ಮಿ, ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞೆ ವಾತ್ಸಲ್ಯ ಕ್ಲಿನಿಕ್ ಸಂತೆಕಟ್ಟೆ.

 
 
 
 
 
 
 
 
 
 
 

Leave a Reply