ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿ ಪಕ್ಷದಿಂದ ಉಚ್ಚಾಟನೆ!

ಲಂಚ ಪ್ರಕರಣ ಸಂಬಂಧ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾಗಿ ನಾಪತ್ತೆಯಾಗಿದ್ದ ಶಾಸಕ ವಿರೂಪಾಕ್ಷಪ್ಪ ಜಾಮೀನು ದೊರೆತ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಮಾತ್ರವಲ್ಲದೆ, ತೆರೆದ ವಾಹನದಲ್ಲಿ ವಿಜೋತ್ಸವದಂತೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿ. (ಕೆಎಸ್‌ಡಿಎಲ್) ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧ ಬಿಜೆಪಿಗೆ ಭಾರೀ ಮುಜುಗರ ತಂದಿದ್ದು ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ.

ಲೋಕಾಯುಕ್ತ ದಾಳಿಯ ನಂತರ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಹಾಗೂ ಕೆಎಸ್‌ಡಿಎಲ್‌ ಮಾಜಿ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಮಂಗಳವಾರ ಹೈಕೋರ್ಟ್‌ನಿರೀಕ್ಷಣಾ ಜಾಮೀನು ನೀಡಿದ್ದು, ಜಾಮೀನು ಸಿಕ್ಕ ಬೆನ್ನಲ್ಲೇ ಚೆನ್ನಗಿರಿಯ ಚನ್ನೇಶಪುರದ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. 

ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಮಾಡಾಳ್‌ ವಿರೂಪಾಕ್ಷಪ್ಪ ಅವರು ಆರು ದಿನಗಳ ನಂತರ ತಮ್ಮ ಹುಟ್ಟೂರು ಚನ್ನೇಶಪುರದ ನಿವಾಸಕ್ಕೆ ವಾಪಸ್‌ ಆಗಿದ್ದು, ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಅಲ್ಲದೇ ಕಾರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಡಾಳ್ ವಿರೂಪಾಕ್ಷಪ್ಪ, ನಾನು ಯಾವುದೇ ತಪ್ಪು ಮಾಡಿಲ್ಲ. ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಎಲ್ಲಾ ಹಣಕ್ಕೂ ನಮ್ಮ ಬಳಿ ಸೂಕ್ತ ದಾಖಲೆ ಇದೆ. ಆ ಹಣವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ಯಾರೋ ಷಡ್ಯಂತ್ರ ನಡೆಸಿದ್ದಾರೆ. ಒಂದು ಆಡಳಿತ ಪಕ್ಷದ ಶಾಸಕರ ಮೇಲೆ ದಾಳಿ ನಡೆದಿದ್ದು ಇತಿಹಾಸದಲ್ಲೇ ಮೊದಲು ಎಂದು ಮಾಡಾಳ್ ವಿರೂಪಾಕ್ಷಪ್ಪ ಅವರು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply