ವಿಶ್ರಾಂತ ಪ್ರಾಚಾರ್ಯ ಪ್ರೊ ಕೆ. ರಾಮದಾಸ್ ಭಟ್ ನಿಧನ

ಉಡುಪಿ ಎಂ ಜಿ ಎಂ‌ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ ಕೆ. ರಾಮದಾಸ್ ಭಟ್ (90 ವರ್ಷ) ವಯೋ ಸಹಜ ಅನಾರೋಗ್ಯದಿಂದ ಬೆಳಗಾವಿಯಲ್ಲಿರುವ ಪುತ್ರನ ಮನೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾರಂಭದ ದಿನಗಳಲ್ಲೇ ಸೇರ್ಪಡೆಗೊಂಡ ಶ್ರೀಯುತರು ದಿವಂಗತ ಪ್ರೊ ಕು.ಶಿ ಹರಿದಾಸ ಭಟ್ಟರ ನಿಕಟವರ್ತಿಯಾಗಿ ಕಾಲೇಜಿನ ವರ್ಧನೆಗೆ ಅಪಾರ ಶ್ರಮಿಸಿದ್ದರು.

ಕಾಲೇಜಿನ ಭೌತಶಾಸ್ತ್ರ ವಿಭಾಗ ಉಪನ್ಯಾಸಕ, ವಿಭಾಗ ಮುಖ್ಯಸ್ಥ, ಉಪ ಪ್ರಾಚಾರ್ಯ ಹಾಗೂ ಪ್ರಾಚಾರ್ಯರೂ ಆಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಅವರು ಆ ಕಾಲದಲ್ಲಿ ಕಾಲೇಜಿನ ಆರ್ಥಿಕ ವ್ಯವಹಾರಗಳ ಮೇಲುಸ್ತುವಾರಿಗಾಗಿ ನೇಮಿಸುತ್ತಿದ್ದ ‘ ಬರ್ಸಾರ್ ‘ ಹುದ್ದೆಯನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದರು. ಇಂಗ್ಲೀಷ್ ಭಾಷೆಯ ಮೇಲೆ ಅಪಾರ ಪ್ರೌಢಿಮೆಯನ್ನು ಹೊಂದಿದ್ದರು .

ಕಾಲೇಜಿನ ಎನ್ ಸಿ ಸಿ ನೌಕಾದಳದ ಮುಖ್ಯಸ್ಥರಾಗಿಯೂ ಬಹಳ ವರ್ಷ ಕಾರ್ಯನಿರ್ವಹಿಸಿದ್ದಾರೆ. ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ಸಂಶೋಧನಾ ಕೇಂದ್ರದ ಸಹನಿರ್ದೇಶಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ ಈ ಸಂಸ್ಥೆಗಳ ಯಕ್ಷಗಾನ ಹಾಗೂ ಜಾಪದ ತಂಡಗಳನ್ನು ದೇಶ ಹಾಗೂ ವಿದೇಶಗಳಿಗೆ ಕೊಂಡೊಯ್ದು ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ತಂಡ ಮುಖ್ಯಸ್ಥರಾಗಿ ಯಶಸ್ವಿ ಕಾರ್ಯನಿರ್ವಹಿಸಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಆಡಳಿತ ಮಂಡಳಿ‌, ಸಹೋದ್ಯೋಗಿಗಳು, ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply