“ಮಾರುತ ಪ್ರಿಯ”~ಕಲಾಪ್ರದರ್ಶನ~ಚಿಂತನ ಮಂಥನ

“ಮಾರುತ ಪ್ರಿಯ” ಎನ್ನುವ ಶೀರ್ಷಿಕೆಯಡಿಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಯವರ ಗಣೇಶ ಹಾಗೂ ಕೃಷ್ಣನಿಗೆ ಸಂಬoಧಿಸಿದ ಸುಮಾರು 30ರಷ್ಟು ಕಲಾಕೃತಿಗಳು ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಅನಾವರಣಗೊಂಡಿತು. ಭಾವನಾ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿರುವ ಈ ಕಲಾಪ್ರದರ್ಶ ನದ ಸಂದರ್ಭದಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ನಡೆಸಿಕೊಟ್ಟ ವಾಸ್ತುವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ರವರು ಪ್ರಾಚೀನ ಗ್ರಂಥಗಳಲ್ಲಿನ ಪ್ರತಿಮಾಶಾಸ್ತ್ರಗಳು ಮತ್ತು ಕಲಾವಿದರಿಗೆ ನೀಡಿರುವಂತಹಾ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ವಿವರಿಸಿದರು.
ಕರಾವಳಿ ಭಾಗದಲ್ಲಿನ ಹಲವಾರು ಗಣೇಶ ಹಾಗೂ ಕೃಷ್ಣನಿಗೆ ಸಂಬoಧಿಸಿದ ಅನೂಹ್ಯ ಶಿಲ್ಪಗಳ ಶೈಲಿ ಮತ್ತು ಪ್ರತಿಮಾನಗಳ ಬಗೆಗೆ ವಿವರಿಸುತ್ತ ಪ್ರಸ್ತುತ ಪ್ರದರ್ಶನದಲ್ಲಿರಿಸಿದ ಕಾವಿ ಕಲೆಯ ಕಲಾಕೃತಿಗಳು ಯಕ್ಷಗಾನೀಯ ಶೈಲಿಯ ಬಹು ಮಹತ್ವಪೂರ್ಣ ಕೃತಿಗಳೆಂಬುದಾಗಿ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಆರ್ಟಿಸ್ಟ್ ಫೋರಂನ ಅಧ್ಯಕ್ಷರಾದ ಹಿರಿಯ ಕಲಾವಿದ ರಮೇಶ್ ರಾವ್, ಕದಿಕೆ ಟ್ರಸ್ಟಿನ ಬಿ.ಸಿ.ಶೆಟ್ಟಿ, ಆರ್ಕಿಟೆಕ್ಟ್ ಸಂಪ್ರೀತ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಕಲಾಪ್ರದರ್ಶನವಿದಾಗಿದ್ದು, ಇದರ ಜೊತೆಗೇ ಬಹುಶಿಸ್ತೀಯ ಅನುಭವಗಳನ್ನು ಪಡೆಯಲು  18ನೇ ಸೋಮವಾರದಂದು ಸಂಜೆ ೬ಕ್ಕೆ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ರವರಿಂದ “ಭೂ-ಕೈಲಾಸ” ವಾಚನ- ಪ್ರವಚನ, 20ನೇ ಬುಧವಾರ ಸಂಜೆ 5ಕ್ಕೆ ನಾಡೋಜ ಕೆ.ಪಿ.ರಾವ್‌ರವರೊಂದಿಗೆ ಚಿಂತನ – ಮಂಥನ ಹಾಗೂ ದಿನಾಂಕ 21ನೇ ಗುರುವಾರ ಸಂಜೆ 5ಕ್ಕೆ ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಶಮಂತಕೋಪಾಖ್ಯಾನ” ತಾಳಮದ್ದಳೆ ಕಾರ್ಯಕ್ರಮಗಳು ಕನ್ನಡ ಮತ್ತು ಸಾಂಸ್ಕೃತಿಕ  ಇಲಾಖೆ, ಸಂಸ್ಕೃತಿ  ವಿಶ್ವ ಪ್ರತಿಷ್ಠಾನ, ಆರ್ಟಿಸ್ಟ್  ಫೋರಂ ಉಡುಪಿಯವರ ಸಹಕಾರದಿಂದ ನಡೆಯಲಿದೆ. ಕಲಾಪ್ರದರ್ಶನವು ಸಂಜೆ 3ರಿಂದ 7ರವರೆಗೆ 24ನೇ ಸೆಪ್ಟಂಬರ್‌ವರೆಗೆ ಪ್ರದರ್ಶನಕ್ಕಿರಲಿದೆ.
 
 
 
 
 
 
 
 
 
 
 

Leave a Reply