ನಂದನ ಕಂದನೆ ಧರೆಗಿಳಿದಂತೆ

ದ್ವಾರಕಾಧೀಶ ಕರದಲಿ ಕಡುಗೋಲು ಪಿಡಿದು ನಿರಾಭರಣನಾಗಿ ಹಡಗಿನಲಿ ಏರಿ ಬಂದು ಮಧ್ವರಿಂದ ಪ್ರತಿಷ್ಠಾಪಿಸಲ್ಪಟ್ಟು ದಿನದಿನದಿ ಬಗೆಬಗೆಯ ಅಲಂಕಾರಗಳ ಮಾಡಿಸಿ ಕೊಂಡು ಮೆರೆವ ಉಡುಪಿಯಿದು.

ಅಂದ ಮೇಲೆ ಇಲ್ಲಿನ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವೆಂದರೆ ಕೇಳಬೇಕೆ, ಉಂಡೆ ಚಕ್ಕುಲಿಗಳ ಗಮ್ಮತ್ತು , ಪಿಲಿವೇಶಗಳ ಗೌಜಿ, ಪೇಪರ್ ವೇಷಗಳ ಬಣ್ಣಗಳು, ರಥಬೀದಿಯ ಜನಜಂಗುಳಿ, ಮೊಸರು ಕುಡಿಕೆ. ಆದರೆ ಇಷ್ಟೆಲ್ಲಾ ಇದ್ದರೂ ನಮ್ಮ ಮನೆಯನ್ನು ಗೋಕುಲವಾಗಿಸುವುದು ಗೋಪಿಯಕಂದ ಮುದ್ದುಕೃಷ್ಣನಾಗಿ, ಬಾಲಕೃಷ್ಣನಾಗಿ ಪಟ್ಟೆಯುಟ್ಟು ಪುಟ್ಟಪುಟ್ಟ ಹೆಜ್ಜೆಯಿಟ್ಟಾಗ.

ಪುಟ್ಟ ಮಕ್ಕಳಿರುವ ಮನೆಗಳಲ್ಲಂತು ತಂದೆ ತಾಯಿ ತಮ್ಮ ಕಂದಮ್ಮರಿಗೆ ಯಾವ ರೀತಿಯ ಕೃಷ್ಣವೇಷ ಹಾಕಬೇಕು, ಎಲ್ಲೆಲ್ಲಾ ಸ್ಪರ್ಧೆ ಗಳಿವೆ, ಯಾವ್ಯಾವ ಭಂಗಿಯಲ್ಲಿ ಪೋಟೋ ಗಳನ್ನು ಕ್ಲಿಕ್ಕಿಸಬೇಕು ಎಂಬುದನ್ನು ಮುಂಚಿತ ವಾಗಿಯೆ ಯೋಚಿಸಿರುತ್ತಾರೆ.

ಇನ್ನೂ ಅಜ್ಜ ಅಜ್ಜಿಯರಿದ್ದರೆ ಅವರ ಖುಷಿಗಂತು ಮಿತಿಯೆ ಇರುವುದಿಲ್ಲ, ಕೃಷ್ಣನಾದ ತಮ್ಮ ಕಂದಮ್ಮಗಳ ಆಟ ಓಟಗಳ ನೋಡಿ ತಾವೂ ಮಕ್ಕಳಾಗುತ್ತಾರೆ. ಬಗಬಗೆಯ ಆಭರಣಗಳನ್ನು ತೊಟ್ಟು ಕೆಲವರು ಕೃಷ್ಣನಾದರೆ ಮತ್ತೊಂದಿಷ್ಟು ಪುಟಾಣಿಗಳು ರಾಧೆಯಾಗಿ ಸಿಂಗರಿಸಿ ಕೊಂಡು ನಲಿದಾಡುವುದು ಈಗೀಗ ಬಹಳ ಪ್ರಚಲಿತದಲ್ಲಿದೆ.

ಇಷ್ಟಲ್ಲದೆ ತಾಯಂದಿರು ಯಶೋದೆಯರಾಗಿ ತಮ್ಮ ಬಾಲ ಕೃಷ್ಣರ ಜೊತೆಗೆ ಸುಂದರ ಕ್ಷಣ ಗಳನ್ನು ಸವಿಯುತ್ತಾ ಉಂಡೆ ಚಕ್ಕುಲಿ ಗಳನ್ನು ಮಾಡಿ ಖುಷಿಪಡುತ್ತಾರೆ.

ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯ ತಯಾರಿ ಒಂದು ತಿಂಗಳ ಹಿಂದಿನಿಂದಲೇ ಸುರು ವಾದರೆ, ಅದರಲ್ಲಿ ಎಲ್ಲರ ಕಣ್ಮನ ತಣಿಸು ವುದು ಈ ಕೃಷ್ಣ ವೇಷ ಸ್ಪರ್ಧೆಗಳು. ದಶಾವ ತಾರಿ ವಿಷ್ಣುವಿನ ಅಷ್ಟಮ ಅವತಾರವಾದ ಕೃಷ್ಣನ ವಿವಿಧ ರೂಪಗಳು ಮಕ್ಕಳಲ್ಲಿ ಕಾಣ ಸಿಗುವಾಗ ನಂದನ ಕಂದ ಮುಕುಂದನೆ ಧರೆ ಗಿಳಿದು ಬಂದಷ್ಟು ಸಂಭ್ರಮ ಮನೆ ಮಾಡಿರು ತ್ತದೆ.

ಇದನ್ನು ನೋಡುಲು ಕಂಗಳೆರಡು ಸಾಲದು ಎನ್ನುವ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಮುದ್ದು ಮುಖದ ಮಕ್ಕಳು ಆಲ ದೆಲೆಯ ಮೇಲೆ ಪವಡಿಸಿದ ಬಾಲಕೃಷ್ಣ ನಾಗಿ, ಬೆಣ್ಣೆಯನ್ನು ಕದ್ದು ಮೆಲ್ಲುವ ನವ ನೀತ ಚೋರನಾಗಿ, ಕಾಳಿಂಗ ಮರ್ದನನಾಗಿ, ರಾಧಾ ಕೃಷ್ಣನಾಗಿ ಹೀಗೆ ಚೆಂದ ಚೆಂದದ ವೇಷ ತೊಟ್ಟು ಅಳುತ್ತಾ ನಗುತ್ತಾ ನಗಿಸುತ್ತ ಸ್ಪರ್ಧೆಯಲ್ಲಿದ್ದೇವೊ ವೃಂದಾವನದಲ್ಲೆ ಇದ್ದೇವೋ ಎಂಬ ಯೋಚನಾಲಹರಿಗೆ ದೂಡುತ್ತದೆ.

ಕೃಷ್ಣಾ ಎಂದರೆ ಸಾಕು, ನೆನಪಾಗುವುದು ನವಿಲುಗರಿ ಮತ್ತು ಕೊಳಲು. ಹಾಗೆ ಕೃಷ್ಣನ ವೇಷ ತೊಟ್ಟ ಎಲ್ಲ ಪೋರಪೋರಿಯರ ಕೈಯಲ್ಲಿ ಒಂದು ಕೊಳಲು ಇದ್ದೆ ಇರುತ್ತದೆ. ಅದು ಪಾಪದ ಕೃಷ್ಣನ ಬಳಿಯಲ್ಲಿ ಇದ್ದರೆ ಎಲ್ಲರಿಗೂ ಒಳ್ಳೆಯದು ಒಂದೊಮ್ಮೆ ತುಂಟತನದ ತಂಟೆ ಪೋಕುರಿಗಳು ಹಿಡಿದು ಕೊಂಡಿದ್ದರೆ ಅದನ್ನು ಕೊಳಲಿನ ಬದಲಾಗಿ ಕೋಲಿನಂತೆ ಬಳಸುವುದು ಮಾತ್ರ ಸತ್ಯ.


ಪ್ರತಿ ವರ್ಷ ಇಂತಹ ಅನೇಕ ಸ್ಪರ್ಧೆಗಳು ನಡೆದು ಅದೆಷ್ಟೋ ತಂದೆತಾಯಿಂದರಿಗೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡಿ ಆನಂದದ ಕಣ್ಣೇರು ತರಿಸಿ ಖುಷಿ ನೀಡುತ್ತಿತ್ತು. ಆದರೆ ಈ ವರ್ಷ ಕೇವಲ ಪೋಟೋ ವಿಡಿಯೋಗಳಲ್ಲೇ ಕೃಷ್ಣರನ್ನು ನೋಡುತ್ತಿರುವುದು ವಿಪರ್ಯಾಸವೇ ಸರಿ. ಮುಂದಿನ ವರ್ಷವಾದರು ನಮ್ಮ ಪೊಡವಿ ಗೊಡೆಯ ಮತ್ತೆ ಹಬ್ಬವನ್ನು ಸಡಗರದಿಂದ ಆಚರಿಸುವಂತೆ ಆಶೀರ್ವದಿಸಲಿ.

ಕೃಷ್ಣನಾಗಿ- ಪ್ರದ್ಯುಮ್ನ, ಯಶೋದಕೃಷ್ಣ- ಅಪೂರ್ವ, ಪರಾಶರ ಸಹಕರಿಸಿದರು

-ಭಾವನಾ ಕೆರೆಮಠ

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply